Advertisement

ಶೌಚಾಲಯ ಪ್ರೋತ್ಸಾಹ ಧನ ದುರ್ಬಳಕೆ

06:53 AM May 19, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಉದ್ಧಾರಕ್ಕೆ ರೂಪಿಸುವ ಮಹತ್ವಕಾಂಕ್ಷಿ ಯೋಜನೆಗಳು ಅಧಿಕಾರಿ, ಜನಪ್ರತಿನಿಧಿಗಳ ಜೇಬು ತುಂಬಿಸಲಿಕ್ಕೆ ಹೊರತು ಬಡವರ ಕಲ್ಯಾಣಕ್ಕೆ ಅಲ್ಲ ಎಂಬುದು ಜಿಲ್ಲೆಯಲ್ಲಿ ಮತ್ತೂಮ್ಮೆ ಸಾಬೀತಾಗಿದೆ.

Advertisement

ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟ್ಯಂತರ ರೂ. ಅಕ್ರಮಗಳಿಗೆ ಕುಖ್ಯಾತಿಯಾಗಿದ್ದ ಬರದ ಜಿಲ್ಲೆಯ ಚಿಕ್ಕಬಳ್ಳಾಪುರ ಈಗ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್‌ ಕಾರ್ಯಕ್ರಮದಲ್ಲೂ ಅಕ್ರಮಗಳಿಗೆ ಸಾಕ್ಷಿಯಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ತಮ್ಮ ಖಾತೆಗೆ ವರ್ಗಾವಣೆ: ಬಡವರಿಗೆ ಮಂಜೂರಾಗುವ ಶೌಚಾಲಯಗಳ ಪ್ರೋತ್ಸಾಹಧನವನ್ನು ಬಿಡದೇ ಲಜ್ಜಗೆಟ್ಟ ಚುನಾಯಿತ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನೆರಳಿನಲ್ಲಿ ಲಕ್ಷಾಂತರ ರೂ. ಅಕ್ರಮಗಳನ್ನು ನಡೆಸಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಒಂದೇ ಗ್ರಾಪಂನಲ್ಲಿ ಬಡವರಿಗೆ ಸೇರಬೇಕಿದ್ದ 26 ಲಕ್ಷ ರೂ. ಪ್ರೋತ್ಸಾಹಧನವನ್ನು ಗ್ರಾಪಂ ಸದಸ್ಯರೇ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಆಗಿರುವ ಅಕ್ರಮಗಳಿಗೆ ಕನ್ನಡಿ ಹಿಡಿದು ಗ್ರಾಪಂಗಳ ಆಡಳಿತದ ಕಾರ್ಯವೈಖರಿಯನ್ನು ಅನುಮಾನದಿಂದ ನೋಡುವಂತಾಗಿದೆ.

ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡದಿದ್ದರೂ ಜಾಬ್‌ಕಾರ್ಡ್‌ಗಳನ್ನು ನೋಂದಾಯಿಸಿ ಅಕ್ರಮವಾಗಿ ಸಾಮಗ್ರಿ ಬಿಲ್‌ ಹಾಗೂ ಕೂಲಿಕಾರ್ಮಿಕರ ಬಿಲ್‌ ದೋಚುತ್ತಿದ್ದ ಗ್ರಾಪಂ ಆಡಳಿತಶಾಹಿ ಈಗ ಸ್ವಚ್ಛ ಭಾರತ್‌ ಯೋಜನೆಯಡಿ ಅಕ್ರಮ ನಡೆಸಲು ದಾರಿ ಹುಡುಕಿಕೊಂಡಿದೆ.

Advertisement

ಕ್ರಿಮಿನಲ್‌ ಪ್ರಕರಣ ದಾಖಲು: ಜಿಲ್ಲೆಯ ಗುಡಿಬಂಡೆ ಹಾಗೂ ಚಿಂತಾಮಣಿ ತಾಲೂಕಿನ ಹಲವು ಗ್ರಾಪಂಗಳಲ್ಲಿ ಸ್ವಚ್ಛ ಭಾರತ್‌ ಯೋಜನೆಯಡಿ ಲಕ್ಷಾಂತರ ರೂ. ಅಕ್ರಮ ನಡೆದಿದ್ದು, ಈ ಪೈಕಿ ಜಿಲ್ಲೆಯಲ್ಲಿ ಇದುವರೆಗೂ ಎರಡು ಗ್ರಾಪಂಗಳಲ್ಲಿ ನಡೆದಿರುವ ಅಕ್ರಮಗಳು ಮಾತ್ರ ಬೆಳಕಿಗೆ ಬಂದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಹಾಗೂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

199 ಶೌಚಾಲಯಗಳಿಗೆ 34 ನಿರ್ಮಾಣ: ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣದಲ್ಲಿ ಮೊಟ್ಟ ಮೊದಲಿಗೆ ಭ್ರಷ್ಟಾಚಾರ ನಡೆದು ಬೆಳಕಿಗೆ ಬಂದಿರುವ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂನಲ್ಲಿ 199 ಫ‌ಲಾನುಭವಿಗಳ ಪೈಕಿ ಕೇವಲ 34 ಮಂದಿ ಮಾತ್ರ ಶೌಚಾಲಯ ನಿರ್ಮಿಸಿಕೊಂಡಿದ್ದು 165 ಶೌಚಾಲಯಗಳು ಇನ್ನೂ ಪೂರ್ಣಗೊಂಡಿಲ್ಲ.

ಆದರೆ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಆಗಬೇಕಿದ್ದ 26,80,500 ರೂ. ಗ್ರಾಪಂ ಸದಸ್ಯರೇ ತಮ್ಮ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದು, ಒಬ್ಬ ಸದಸ್ಯ ಸರಾಸರಿ 2 ರಿಂದ 4 ಲಕ್ಷ ರೂ.ವರೆಗೂ ಕೂಡ ಜಮೆ ಮಾಡಿಕೊಂಡಿದ್ದು, ಎಲ್ಲೋಡು ಗ್ರಾಪಂನಲ್ಲಿ ಪಿಡಿಒ ಸೇರಿ ಒಟ್ಟು 9 ಮಂದಿ ವಿರುದ್ಧ ಈಗ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಮಿಟ್ಟಹಳ್ಳಿಯಲ್ಲಿ 2.95 ಲಕ್ಷ ದುರುಪಯೋಗ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮದಲ್ಲಿ ಸ್ವಚ್ಛ ಭಾರತ್‌ ಯೋಜನೆಯ ಒಟ್ಟು 2.95 ಲಕ್ಷ ರೂ. ಹಣವನ್ನು ಗ್ರಾಪಂನಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಶೌಚಾಲಯಗಳನ್ನು ನಿರ್ಮಿಸಿಕೊಂಡಿರುವ ಫ‌ಲಾನುಭವಿಗಳಿಗೆ ಪ್ರೋತ್ಸಾಹಧನ ಜಮೆ ಮಾಡುವುದರ ಬದಲು ಶೌಚಾಲಯ ನಿರ್ಮಿಸಿಕೊಳ್ಳದ ಹಾಗೂ ಅವರ ಸಂಬಂಧಿಕರಿಗೆ ಅಕ್ರಮವಾಗಿ ಅನುದಾನ ಜಮೆ ಮಾಡಿರುವುದು ಮಿಟ್ಟಹಳ್ಳಿ ಗ್ರಾಪಂನಲ್ಲಿ ನಡೆದಿದ್ದು, ಈ ಬಗ್ಗೆ ಕಚೇರಿಯ ಕರ ವಸೂಲಿಗಾರ ಶ್ರೀನಾಥ್‌ ಹಾಗೂ ಗಣಕಯಂತ್ರ ನಿರ್ವಾಹಕಿ ಶೋಭಾ ಮೇಲೆ ಕೆಂಚಾರ‌್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬರದಿಂದ ಕಂಗಾಲಾಗಿರುವ ರೈತಾಪಿ ಜನಕ್ಕೆ ನೆರವಾಗಬೇಕಿದ್ದ ಶೌಚಾಲಯಗಳ ನಿರ್ಮಾಣದ ಪ್ರೋತ್ಸಾಹಧನವನ್ನು ಈಗ ಗ್ರಾಪಂ ಸದಸ್ಯರು ಅಧಿಕಾರಿಗಳು ಶಾಮೀಲಾಗಿ ಲಕ್ಷಾಂತರ ರೂ. ಅನುದಾನವನ್ನು ನುಂಗಿ ನೀರು ಕುಡಿದಿರುವ ಗ್ರಾಪಂ ಸದಸ್ಯರ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಹಿಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಭ್ರಷ್ಟಾಚಾರದ ಕುಖ್ಯಾತಿ ಸ್ವಚ್ಛ ಭಾರತ್‌ ಯೋಜನೆಗೂ ತಗುಲುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಯಲು ಬಹಿರ್ದೆಸೆ ಮುಕ್ತ ಸಂಪೂರ್ಣ ಬೋಗಸ್‌: ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಪಡೆಯುವ ಆಸೆಗೆ ಬಿದ್ದು ತಮ್ಮ ತಮ್ಮ ಗ್ರಾಪಂಗಳಲ್ಲಿ ಶೌಚಾಲಯಗಳು ಸಂಪೂರ್ಣ ಆಗದಿದ್ದರೂ ಜಿಪಂಗೆ ಸುಳ್ಳು ಮಾಹಿತಿ ನೀಡಿ ಕೆಲ ಗ್ರಾಪಂಗಳು ಬಯಲು ಬಹಿರ್ದೆಸೆ ಮುಕ್ತವೆಂದು ಸ್ವಯಂ ಘೋಷಣೆ ಮಾಡಿಕೊಂಡಿವೆ ಎಂಬ ಆರೋಪ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ವಸತಿ ಯೋಜನೆಗಳು ಹಳ್ಳ ಹಿಡಿದಂತೆ ಈಗ ಶೌಚಾಲಯಗಳು ಕೂಡ ಪೂರ್ಣಗೊಳ್ಳದೇ ಪ್ರೋತ್ಸಾಹಧನ ಮಾತ್ರ ಗ್ರಾಪಂ ಅಧಿಕಾರಿಗಳ ಹಾಗೂ ಸದಸ್ಯರ ಜೇಬು ತುಂಬುತ್ತಿದೆ ಎಂಬ ಆರೋಪ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 26 ಹಾಗೂ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಪಂನಲ್ಲಿ ಒಟ್ಟು 2.95 ಲಕ್ಷ ರೂ. ಸ್ವಚ್ಛ ಭಾರತ್‌ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಅನುಮಾನತು ಮಾಡಿ ಅವರಿಂದ ಅಕ್ರಮವಾಗಿ ಸದಸ್ಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ಪಿಡಿಒಗಳಿಂದಲೇ ಹಣ ವಸೂಲಿಗೆ ಕ್ರಮ ಕೈಗೊಳ್ಳುತ್ತೇವೆ.
ಗುರುದತ್‌ ಹೆಗಡೆ, ಜಿಪಂ ಸಿಇಒ.

ಸದಸ್ಯರು ಖಾತೆಗಳಿಗೆ ಹಂಚಿಕೊಂಡ ಅನುದಾನ ವಿವರ
ಸದಸ್ಯರ ಹೆಸರು ಖಾತೆಗೆ ಜಮೆ ಮೊತ್ತ
-ನಾಗರಾಜ್‌ 2,98,900
-ಮಂಜುನಾಥರೆಡ್ಡಿ (ಮುಖಂಡರು) 2,01,000
-ರವೀಂದ್ರರರೆಡ್ಡಿ (ಸದಸ್ಯ ಶ್ವೇತ ಪತಿ)1,92,500
-ಶಿವಮ್ಮ (ಉಪಾಧ್ಯಕ್ಷೆ) 4,82,000
-ಎನ್‌.ಆರ್‌.ನಾರಾಯಣಸ್ವಾಮಿ (ಮುಖಂಡರು) 2,34,000
-ಬ್ರಹ್ಮನಂದರೆಡ್ಡಿ (ಗ್ರಾಪಂ ಅಧ್ಯಕ್ಷರು) 5,38,800
-ನಾರಾಯಣಪ್ಪ ಸದಸ್ಯರು 3,43,300
-ಅಶ್ವತ್ಥರೆಡ್ಡಿ (ಗ್ರಾಮದ ಮುಖಂಡರು) 3,90,000

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next