Advertisement

Kambala; ಹೀಗೆಯೇ ಮುಂದುವರಿದರೆ ಇರಬಹುದೇ ‘ಕಂಬುಲ ನನ ದುಂಬುಲಾ’?

03:39 PM Apr 13, 2024 | ಕೀರ್ತನ್ ಶೆಟ್ಟಿ ಬೋಳ |

ತುಳುವಿನಲ್ಲಿ ಒಂದು ಮಾತಿದೆ ‘ಕಲ ಕಂಬುಲ’ ಎಂದು. ಅಂದರೆ ವ್ಯವಸ್ಥೆಯು ಅವ್ಯವಸ್ಥೆಯಾದ ಬಗೆಗೆ ಆಡು ಮಾತಿನಲ್ಲಿ ಹೇಳುತ್ತಾರೆ. ಬಹುಶಃ ತುಳುನಾಡಿನ ಜಾನಪದ ಶ್ರೀಮಂತಿಕೆಯ ಕಂಬಳದ ವಿಚಾರದಲ್ಲಿ ತಿಳಿದವರು ಪ್ರಸ್ತುತ ಇದೇ ಮಾತನ್ನು ಹೇಳುತ್ತಿದ್ದಾರೆ.

Advertisement

‘ಕಂಬಳ ನನ ದುಂಬುಲಾ‘ 2016-17ರ ಸಮಯದಲ್ಲಿ ಕಂಬಳಕ್ಕೆ ತಾತ್ಕಾಲಿಕ ತಡೆಯುಂಟಾದಾಗ ಹುಟ್ಟಿದ ಮಾತಿದು. ಶತಮಾನಗಳಿಂದ ಸಾಂಪ್ರದಾಯಿಕವಾಗಿ, ಬಳಿಕ ಹೊಸ ಚೌಕಟ್ಟಿನಿಂದ ಬೆಳೆದು ಬಂದ ಕಂಬಳವು ನಿಲ್ಲಬಾರದು, ಇದು ಮುಂದುವರಿಯಬೇಕು ಎನ್ನುವ ಅರ್ಥದಲ್ಲಿ ಬಂದ ಮಾತಿದು. ಆದರೆ ಈಗಿನ ಪರಿಸ್ಥಿತಿ ಕಂಡರೆ ಕಂಬಳ ನನ ದುಂಬುಲಾ ಎಂಬಲ್ಲಿಗೆ ಪ್ರಶ್ನಾರ್ಥಕ ಚಿಹ್ನೆ ಹಾಕಬೇಕಾದ ಸ್ಥಿತಿ ಬಂದಿದೆ. ಹೀಗೆ ಆದರೆ ಕಂಬಳ ಮುಂದಿನ ದಿನಗಳಲ್ಲಿ ಆಯೋಜನೆ ಮಾಡಲು ಸಾಧ್ಯವೇ ಎನ್ನುವ ಮಾತು ಕೇಳಿಬರುತ್ತಿದೆ.

ಶತಮಾನಗಳಿಂದ ನಿರಾಂತಕವಾಗಿದ್ದ ಕಂಬಳಕ್ಕೆ ಮೊದಲ ಕಾನೂನಾತ್ಮಕ ತೊಡಕಾಗಿದ್ದು 2014ರಲ್ಲಿ. ಬಳಿಕ ಕಾನೂನು ಹೋರಾಟದ ಪರಿಣಾಮ ಹಲವು ನಿಯಮಗಳನ್ನು ರೂಪಿಸಿ ಕಂಬಳಕ್ಕೆ ಅನುಮತಿ ನೀಡಲಾಗಿದೆ. ಕಂಬಳ 24 ಗಂಟೆಯೊಳಗೆ ಮುಗಿಯಬೇಕು, ಕೋಣಗಳಿಗೆ ಹೊಡೆಯಬಾರದು ಸೇರಿ ಹಲವು ನಿಯಮಾವಳಿಗಳು ಇದರಲ್ಲಿದೆ. ಆದರೆ ಎಲ್ಲವೂ ಪಾಲನೆಯಾಗುತ್ತಿದೆಯೇ ಎಂದು ಕೇಳಿದರೆ, ಸುಲಭವಾಗಿ ಬರುವ ಉತ್ತರ ‘ಇಲ್ಲ’.

ಯಾವುದೇ ಒಂದು ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗಿ ಬಂದಾಗ ಮನುಷ್ಯ ಸಹಜವಾಗಿ ಕೆಲವು ದಿನಗಳ ಕಾಲ ಜಾಗರೂಕನಾಗಿರುತ್ತಾನೆ, ಸ್ವಲ್ಪ ದಿನಗಳ ಬಳಿಕ ಮತ್ತೆ ತನ್ನ ಹಳೇಯ ಜೀವನ ಶೈಲಿಗೆ ಬದಲಾಗುತ್ತಾನೆ, ಏನಾದರೂ ಆದರೆ ಮುಂದೆ ನೋಡೋಣ ಎಂಬ ಹುಂಬ ಮನಸ್ಥಿತಿಗೆ ಬರುತ್ತಾನೆ. ಬಹುಶಃ ಕಂಬಳದಲ್ಲಿ ಆಗಿದ್ದೂ ಇದೇ. 2023-24ರ ಕಂಬಳ ಸೀಸನ್ ಅಂತ್ಯವಾದ ಈ ಸಮಯದಲ್ಲಿ ಕಂಬಲ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಪರಿಹಾರ ಕಾಣಲೇಬೇಕಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅವಶ್ಯಕತೆಯಿದೆ.

Advertisement

ನಿಯಮಗಳು ಪುಸ್ತಕಕ್ಕೆ ಮಾತ್ರ

ಈ ಋತುವಿನ ಆರಂಭದಲ್ಲಿ ಜಿಲ್ಲಾ ಕಂಬಳ ಸಮಿತಿಯು ಹೊಸ ನಿಯಮಗಳನ್ನು ರೂಪಿಸಿತ್ತು. ಸಮಯ ಪಾಲನೆ, ಪ್ರತಿ ವಿಭಾಗಗಳ ಸ್ಪರ್ಧೆಯ ಸಮಯ, ವಾಕೋವರ್, ಕೋಣಗಳ ಹಿಂದೆ ಇರಬಹುದಾದ ಗರಿಷ್ಠ ಜನರು ಸೇರಿ ಒಟ್ಟು 33 ನಿಯಮಗಳನ್ನು ಮಾಡಿತ್ತು ಕಂಬಳ ಸಮಿತಿ. ಆದರೆ ಈ ಬಾರಿ ನಡೆದ 24 ಕಂಬಳಗಳಲ್ಲಿ ಎಲ್ಲಾ 33 ನಿಯಮಗಳು ಪಾಲನೆಯಾದ ಒಂದೇ ಒಂದು ನಿದರ್ಶನವಿಲ್ಲ.

ಕಂಬಳ ಕೂಟವು 24ರಿಂದ 26 ಗಂಟೆಯೊಳಗೆ ಮುಗಿಯಬೇಕು ಎಂಬ ದೊಡ್ಡ ಕೂಗು ಕಂಬಳ ಆಯೋಜಕರ ವಲಯದಲ್ಲಿ, ಅಭಿಮಾನಿಗಳಲ್ಲಿದೆ. ಆದರೆ ಎಲ್ಲ 33 ನಿಯಮಗಳು ಪಾಲನೆಯಾದರೆ 24 ಗಂಟೆಯೊಳಗೆ ಕೂಟ ಮುಗಿಸಬಹುದು. ಆದರೆ ಪಾಲನೆ ಮಾಡುವುದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆ. ಇದಕ್ಕೆ ಕಾರಣ ಸಮನ್ವಯದ ಕೊರತೆ.

ಜಪ್ಪು ಮತ್ತು ವಾಮಂಜೂರು ಕಂಬಳಗಳು ಇದಕ್ಕೆ ಅಪವಾದ. ಆಯೋಜಕರ ಶಿಸ್ತು, ಕೋಣಗಳನ್ನು ಓಟಕ್ಕೆ ಬಿಡುವಲ್ಲಿ ಸಮಯ ಪಾಲನೆಯ ಕಾರಣದಿಂದ ಈ ಎರಡು ಕಂಬಳಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ. ಕಂಬಳ 24 ಗಂಟೆಯೊಳಗೆ ಮುಗಿದರೆ ಕೋಣಗಳು, ಓಡಿಸುವವರು ಸೇರಿದಂತೆ ಎಲ್ಲರ ಆರೋಗ್ಯಕ್ಕೂ ಹಿತ.

ಶಿಸ್ತು ಪಾಲನೆ  ಯಾಕಿಲ್ಲ?

ನಿಯಮಾವಳಿಗಳಲ್ಲಿ 7ನೇ ನಿಯಮ ಹೀಗಿದೆ: ಸ್ಪರ್ಧಾ ಸಮಯದಲ್ಲಿ ಗಂತಿಗೆ ಬರುವಾಗ ತಡವಾದಲ್ಲಿ ಗರಿಷ್ಠ 5 ನಿಮಿಷ ಮಾತ್ರ ಕಾಯುವುದು. ನಂತರ ಕರೆಯಲ್ಲಿರುವ ಕೋಣಗಳಿಗೆ ಓಡಿಸಲು ಸೂಚನೆ ನೀಡಲಾಗುವುದು (walk over). ಮತ್ತು 10ನೇ ನಿಯಮ ಹೀಗಿದೆ: ಮಂಜೊಟ್ಟಿಯಲ್ಲಿ ಸ್ಪರ್ಧೆ ಮುಗಿದ ನಂತರ ಕೋಣಗಳಿಗೆ ಹೊಡೆದರೆ ಪ್ರಥಮವಾಗಿ ಸೂಚನೆ, ದ್ವಿತೀಯ ಬಾರಿಗೆ ದಂಡ, ಮೂರನೇ ಬಾರಿ ಹೊಡೆದರೆ ಒಂದು ಕಂಬಳಕ್ಕೆ ಓಡಿಸದಂತೆ ತಡೆ ನೀಡುವುದೆಂದು ತೀರ್ಮಾನ.

ಈ ಎರಡು ನಿಯಮಗಳು 24 ಕಂಬಳಗಳಲ್ಲಿ ಒಂದೇ ಒಂದು ಕಡೆ ಪಾಲನೆಯಾಗಿಲ್ಲ. ಸಮಯಕ್ಕೆ ಬಾರದ ಕೋಣಗಳನ್ನು ಅರ್ಧ ಗಂಟೆ ಕಾದ ಪ್ರಸಂಗವೂ ನಡೆದಿದೆ, ವಾಕೋವರ್ ಮತ್ತು ಮಂಜೊಟ್ಟಿಯಲ್ಲಿ ಹೊಡೆದ ಓಟಗಾರನಿಗೆ ತಡೆ ನೀಡುವುದು ಕೇವಲ ನಿಯಮ ಪುಸ್ತಕದಲ್ಲಿ ಮಾತ್ರ ಅಚ್ಚಾಗಿದೆ. ಅನುಷ್ಠಾನಕ್ಕೆ ತರುವ ಆಲೋಚನೆಯನ್ನೂ ಮಾಡಿಲ್ಲ.

ಒಂದೇ ದಿನ ಒಂದೇ ಊರಿನಲ್ಲಿ ಎರಡು ಕಂಬಳ, ಒಂದು ಕಂಬಳ ನಡೆಯದಂತೆ ಸಮಿತಿಯಿಂದಲೇ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ, ಅತಿ ಕಿರಿಯ ವಿಭಾಗದ ಸ್ಪರ್ಧೆ ಮಾಡುವಂತಿಲ್ಲ ಎಂದು ನಿಯಮ ಸಂಖ್ಯೆ 1ರಲ್ಲೇ ಬರೆದಿದ್ದರೂ ಸಮಿತಿಯ ಮುತುವರ್ಜಿಯಲ್ಲೇ ನಡೆಸಿದ್ದು… ಹೀಗೆ ಹೇಳಿದರೆ ಮುಗಿಯದು ಈ ಕಥೆ.

ಮುಂದಿನ ವರ್ಷಕ್ಕೆ ಏನಾಗಬೇಕು?

ಕಂಬಳದ ವೇದಿಕೆಯಲ್ಲಿ ಬಂದು ಸೂರ್ಯ ಚಂದ್ರರಿರುವರೆಗೆ ಕಂಬಳ ಇರಲಿದೆ ಎಂದು ಭಾಷಣ ಮಾಡಿದಷ್ಟು ಸುಲಭವೇ ಕಂಬಳದ ಉಳಿವು? ನಿರ್ಲಕ್ಷ್ಯ, ಉದಾಸೀನತೆ ತೋರಿದರೆ ಕಾನೂನಿನಿಂದ ಬಚಾವಾಗಲು ಸಾಧ್ಯವಾಗದು ಎನ್ನುವುದು ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ.

ಒಂದೆರಡು ಕಂಬಳಗಳಲ್ಲಿ ಸಮಯ ಪಾಲನೆ ಸಾಧ್ಯ ಎಂದಾದರೆ ಉಳಿದ ಕಂಬಳಗಳಲ್ಲಿ ಯಾಕೆ ಸಾಧ್ಯವಿಲ್ಲ? ಇದಕ್ಕೆ ಬರುವ ಉತ್ತರ ಸಮನ್ವಯದ ಕೊರತೆ. ಈ ಕಂಬಳದ ಆಯೋಜಕರು ಮತ್ತು ಜಿಲ್ಲಾ ಕಂಬಳ ಸಮಿತಿಯ ಸದಸ್ಯರು ಒಟ್ಟಾಗಿ ನಿಂತು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಜಿಲ್ಲಾ ಸಮಿತಿಯು ಒಂದು ತಂಡವನ್ನು ರಚಿಸಿ ಪ್ರತಿ ಕಂಬಳಕ್ಕೂ ಆ ತಂಡವೇ ಗಂತಿನಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು.

ಮೇಲೆ ಉಲ್ಲೇಖ ಮಾಡಿ 7 ಮತ್ತು 10ನೇ ನಿಯಮಗಳನ್ನು ಖಡಾಖಂಡಿತವಾಗಿ ಮುಂದಿನ ಸೀಸನ್ ನ ಕಂಬಳಗಳಲ್ಲಿ ಅನುಷ್ಠಾನಕ್ಕೆ ತರಬೇಕು. ಕ್ರಿಕೆಟ್ ಅಥವಾ ಇತರ ಕ್ರೀಡೆಗಳಲ್ಲಿ ಇರುವಂತೆ ನಿಯಮಗಳು ಕಠಿಣವಾಗಿ ಜಾರಿಯಾಗಬೇಕು. ಇಲ್ಲಿ ದಾಕ್ಷಿಣ್ಯಕ್ಕೆ ಜಾಗ ಇರಬಾರದು. ಇಲ್ಲಿ ಕೋಣಗಳ ಯಜಮಾನರುಗಳು ತಮ್ಮ ಜವಾಬ್ದಾರಿ ಅರಿಯಬೇಕಿದೆ. ಒಂದು ಕಂಬಳದಲ್ಲಿ ಹಿರಿಯ ವಿಭಾಗದ ಕೋಣಗಳಲ್ಲಿ ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೊಳಿಸಿದರೆ ತನ್ನಷ್ಟಕ್ಕೆ ಶಿಸ್ತು ಎಲ್ಲರಲ್ಲಿಯೂ ಬರುತ್ತದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎನ್ನುವುದೇ ಇರುವ ಪ್ರಶ್ನೆ.

ಹೊಕ್ಕಾಡಿಗೊಳಿ ಕಂಬಳ ದಿನಾಂಕ ಗೊಂದಲ ವಿಚಾರದಲ್ಲಿ ಹೈಕೋರ್ಟ್ ಪೀಠವು ಜಿಲ್ಲಾ ಕಂಬಳ ಸಮಿತಿಯ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದೆ. ಹೀಗಾಗಿ ಮಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತೆ ವಹಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಂಬಳ ಸಮಿತಿ ರಚನೆ ಮಾಡಬೇಕಾದ ಅನಿವಾರ್ಯತೆಯೂ ಮುಂದಿದೆ.

ಹೆಚ್ಚಿನ ಕಂಬಳ ಕೋಣಗಳ ಯಜಮಾನರುಗಳು, ಓಟಗಾರರು ಕೃಷಿ ಮೂಲದವರು ಮತ್ತು ಗ್ರಾಮೀಣ ಭಾಗದಲ್ಲಿ ನೆಲೆಸುವವರು. ಸಮಿತಿಯ ಸಭೆಯನ್ನು ನಗರದ ಸ್ಟಾರ್ ಹೋಟೆಲ್ ನಲ್ಲಿ ನಡೆಸಿದರೆ ಎಲ್ಲರಿಗೂ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಅಳಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರ ಅಗತ್ಯ.

ಸಮಿತಿಯ ಸಭೆಗಳಲ್ಲಿ ಯಜಮಾನರುಗಳು, ಓಟಗಾರರು ನಮ್ಮ ಎಲ್ಲಾ ನಿಯಮಗಳನ್ನು ಒಪ್ಪುತ್ತಾರೆ, ಆದರೆ ಅದನ್ನು ಪಾಲಿಸುತ್ತಿಲ್ಲ ಎನ್ನುವ ವಾದ ಸಮಿತಿಯ ಕಡೆಯಿಂದ ಬರುತ್ತದೆ. ಹೀಗಾಗಿ ಕಂಬಳವೆನ್ನುವುದು ಸಮಿತಿ ಮತ್ತು ಆಯೋಜಕರ ಜವಾಬ್ದಾರಿ ಮಾತ್ರವಲ್ಲ ನಮ್ಮದೂ ಎನ್ನುವ ಮನೋಭಾವ ಯಜಮಾನರು, ಓಟಗಾರರು ಮತ್ತು ಸಂಬಂಧಿಸಿದ ಎಲ್ಲರಿಗೂ ಬರಬೇಕಿದೆ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ಲವೇ.

ಈ ಬಾರಿಯ ಐಕಳ ಕಂಬಳದಲ್ಲಿ ಪ್ರಯೋಗ ಮಾಡಿದ ಗೇಟ್ ವ್ಯವಸ್ಥೆಯನ್ನು ಸುಧಾರಣೆಗೊಳಿಸಿ ಮುಂದಿನ ಸೀಸನ್ ಗಳಲ್ಲಿ ಎಲ್ಲಾ ಕಂಬಳಗಳಲ್ಲಿ ಅಳವಡಿಸುವ ಬಗ್ಗೆ ತೀರ್ಮಾನ ಮಾಡಬೇಕು. ಇದು ಬಹಳಷ್ಟು ಸಮಯ ಉಳಿಸುವ ಯೋಜನೆ.

ಕೇವಲ ಕರಾವಳಿಗೆ ಅಷ್ಟೇ ಸೀಮಿತವಾಗಿದ್ದ ಕಂಬಳ ಈಗ ತನ್ನ ಗಡಿ ಮೀರಿ ಸಾಗಿದೆ. ದಶಕಗಳ ಹಿಂದೆ ಕೆಲವೇ ವರ್ಗಕ್ಕೆ ಮಾತ್ರ ಪ್ರಿಯವಾಗಿದ್ದ ಕಂಬಳ ಈಗ ಕರಾವಳಿಯ ಎಲ್ಲಾ ಮನೆಗಳಲ್ಲಿ ಮಾತನಾಡುವಂತಾಗಿದೆ. ಕಂಬಳ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಭಿಮಾನಿಗಳ ಗುಂಪುಗಳು ಹುಟ್ಟಿಕೊಂಡಿದೆ. ಕಂಬಳ ಕೋಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಸಾಮಾಜಿಕ ಜಾಲತಾಣಗಳು ಉತ್ತುಂಗದಲ್ಲಿರುವ ಈ ಸಮಯದಲ್ಲಿ ಎಚ್ಚರಿಕೆ ಅತ್ಯಗತ್ಯ.

ತುಳುನಾಡಿನ ಜಾನಪದ ಶ್ರೀಮಂತಿಕೆಯ ಕಂಬಳ ಕೂಟವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮಗಿದೆ. ಇದು ಕೇವಲ ಜಿಲ್ಲಾ ಕಂಬಳ ಸಮಿತಿಯ ಜವಾಬ್ದಾರಿಯಾಗಿ ಉಳಿದಿಲ್ಲ. ಎಲ್ಲರೂ ಇದಕ್ಕೆ ಒಗ್ಗೂಡಬೇಕಿದೆ. ಇಲ್ಲದಿದ್ದರೆ ಕಂಬಳವನ್ನು ಮುಂದಿನ ದಿನಗಳಲ್ಲಿ ಕೇವಲ ವಿಡಿಯೋಗಳಲ್ಲಿ ನೋಡಬೇಕಾದೀತು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next