Advertisement

ಮಣ್ಣಿಲ್ಲದೇ ಸಮೃದ್ಧ ಬೆಳೆ ಜಿಲ್ಲೆಯಲ್ಲಿ ಪ್ರಯೋಗ

09:44 PM Sep 23, 2019 | Lakshmi GovindaRaju |

ಆನೇಕಲ್‌: ಮಣ್ಣು ಇಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಅಂತ ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಒಂಚೂರು ಮಣ್ಣು ಬಳಸದೆ ಕೇವಲ ಮೀನು ಸಾಕಾಣಿಕೆಯಿಂದಲೇ ದೇಶಿ ಮತ್ತು ವಿದೇಶಿಯ 50ಕ್ಕೂ ಹೆಚ್ಚು ತೋಟಗಾರಿಕೆ ಗಿಡಗಳನ್ನು ಬೆಳೆಸಿ ಹೊಸ ಅವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ.

Advertisement

ಆನೇಕಲ್‌ ತಾಲೂಕಿನ ಹೀಲಲಿಗೆ ಗ್ರಾಮದ ಹೊರ ಭಾಗದ ಗೋಲ್ಡ್‌ಕಾನ್‌ ಕ್ಲಬ್‌ ಆ್ಯಂಡ್‌ ರೆಸಾರ್ಟ್‌ನಲ್ಲಿ ಹೊಸ ಬೇಸಾಯ ಪದ್ಧತಿ ಅಲವಡಿಸಿಕೊಂಡಿರುವ ಯುವಕ ಭರತ್‌, ಸಿಂಗಾಪುರ್‌ ಮತ್ತು ಯು.ಕೆ ದೇಶಗಳಲ್ಲಿ ಬಿಎಸ್ಸಿ ಇನ್‌ ಇಂಟರ್‌ ನ್ಯಾಷನಲ್‌ ಬ್ಯುಸಿನೆಸ್‌ ಮ್ಯಾನೆಜ್‌ಮೆಂಟ್‌ ಮುಗಿಸಿದರೂ, ಅವರ ಒಲವು ಕೃಷಿಯಡೆಗೆ ಸಾಗಿದೆ.

ಆ್ಯಕ್ವಾಪೋನಿಕ್‌ ಬೇಸಾಯ: ಈ ಬೇಸಾಯ ಪದ್ಧತಿಗೆ ಆಧಾರವಾಗಿರುವುದು ಮೀನು ಸಾಗಾಣಿಕೆ. ನಾವು ಎಷ್ಟು ಮೀನುಗಳನ್ನು ಸಾಕುತ್ತೇವೆಯೋ ಅದಕ್ಕೆ ಸರಿ ಹೊಂದುವಷ್ಟು ಪ್ರಮಾಣದಲ್ಲಿ ಗಿಡಗಳನ್ನು ಬೆಳಸಬೇಕಾಗುತ್ತದೆ. ನೆಲದಿಂದ ಮೂರು ನಾಲ್ಕು ಅಡಿ ಮೇಲೆ ಕಬ್ಬಿಣದ ತೊಟ್ಟಿಗಳನ್ನು ಮಾಡಿ ಅದರಲ್ಲಿ ಸಣ್ಣ ಜಲ್ಲಿ ಕಲ್ಲುಗಳನ್ನು ತುಂಬಿಸಿ ಗಿಡಗಳನ್ನು ನೆಟ್ಟು, ಅದಕ್ಕೆ ನಿರಂತರವಾಗಿ ಮೀನುಗಳ ತೊಟ್ಟಿಯಿಂದ ಹೊರ ಬರುವ ನೀರು ಹರಿಯುವಂತೆ ಮಾಡುವುದು. ಈ ನೀರು ಗಿಡಗಳ ಮೂಲಕ ಹರಿದು ಮೀನಿನ ಹೊಂಡಗಳಿಗೆ ಹರಿಯುವುದರಿಂದ ಒಂದು ಹನಿ ನೀರು ವ್ಯರ್ಥವಾಗದೆ, ಮರು ಬಳಕೆಯಾಗುತ್ತದೆ.

ಬೇಸಾಯದ ವಿನ್ಯಾಸ: 35 ಲಕ್ಷ ರೂ. ವೆಚ್ಚದದಲ್ಲಿ 3 ತಿಂಗಳಲ್ಲಿ ನಿರ್ಮಾಣವಾದ ಸುಮಾರು 10 ಸಾವಿರ ಚದುರ ಅಡಿ ವಿಸ್ತಿರ್ಣದ ಹಸಿರು ಮನೆ (ಗ್ರೀನ್‌ಹೌಸ್‌)ಯಲ್ಲಿ 4 ಮೀನು ಹೊಂಡಗಳಲ್ಲಿ ಮೀನು ಸಾಗಾಣಿಕೆ ಮಾಡುತ್ತ. ಬಾಳೆ, ಬದನೆ, ಹಾಲುಗಡ್ಡೆ, ಬೆಂಡೆಕಾಯಿ, ಪುದಿನಾ, ಕೊತ್ತಂಬರಿ ಸೇರಿದಂತೆ ಹಲವು ತರಕಾರಿ ಮತ್ತು ಸೊಪ್ಪಿನ ಗಿಡಗಳ ಜೊತೆಗ 25ಕ್ಕೂ ಹೆಚ್ಚು ವಿದೇಶಿ ಬೆಳೆಯನ್ನು ಬೆಳೆಯಲಾಗಿದೆ. ಒಂದು ವರ್ಷದಿಂದ ಈ ಪದ್ಧತಿ ಅಲವಡಿಸಿಕೊಂಡಿದ್ದು, 3ತಿಂಗಳಿನಿಂದ ಇಳುವರಿ ಪಡೆಯಲಾಗುತ್ತಿದೆ.

ಅಲ್ಪಾವಧಿಯಲ್ಲಿ ಇಳುವರಿ: ಗಿಡಗಳಿಗೆ 24 ಗಂಟೆ ನೀರು ಬೇಕಾಗಿದ್ದರೂ, ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಸಹಜ ಬೇಸಾಯ ಪದ್ಧತಿಗಿಂತ ಬೇಗ ಇಳುವರಿ ಪಡೆಯಬಹುದಾಗಿದ್ದು, ಮೀನು ಸಾಕಾಣೆಯಿಂದಲೂ ಲಾಭ ಪಡೆದು ಕೊಳ್ಳಬಹುದು. ಇನ್ನೂ ರಸಾಯನಿಕಗೊಬ್ಬರ, ಕೀಟನಾಶಕ ಔಷಧಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಆರಂಭಿಕ ಬಂಡವಾಳ ಇದ್ದರೆ ಸಾಕು.

Advertisement

ಪ್ರೋತ್ಸಾಹದ ಅಗತ್ಯ: ನೀರಿನ ಅಭಾವ ಇರುವ ನಮ್ಮ ದೇಶದಲ್ಲಿ ಈ ಪದ್ಧತಿಯ ಅಲವಡಿಸಿ ಕೊಂಡರೆ ರೈತರ ಬದುಕು ಹಸನವಾಗುತ್ತದೆ. ಇದಕ್ಕೆ ಸರ್ಕಾರದಿಂದ ಸಾಲ, ಸಬ್ಸಿಡಿ ನೀಡಿದರೆ, ಒಳ್ಳೆಯದು ಆದರೆ ದೇಶದಲ್ಲಿ ಈ ಪದ್ಧತಿ ಹೆಚ್ಚು ಪ್ರಚಲಿತವಾಗಿಲ್ಲ. ಇನ್ನೂ ರಾಜ್ಯದ 2 ಕಡೆಗಳಲ್ಲಿ ಮಾತ್ರ ಇದೆ. ಸಹಜ ಬೇಸಾಯ ಪದ್ಧತಿಯಿಂದ ಬೆಳೆದ ಬೆಳೆಗಳಿಗಿಂತ ಆ್ಯಕ್ವಾಪೋನಿಕ್‌ ಪದ್ಧತಿಯಲ್ಲಿ ಬೆಳೆದ ಫ‌ಸಲಿಗೆ ಮಾರುಕಟ್ಟೆ ಬೆಲೆ ಸಿಗುತ್ತದೆ. ಇದು ಸಂಪೂರ್ಣ ಅಗ್ಯಾನಿಕ್‌ ಎಂದು ತಿಳಿಸಿದರು.

ದುಬಾರಿ ಬೇಸಾಯ: ಮೀನು ಸಾಕಾಣಿಕೆಯನ್ನೇ ಅವಲಂಬಿಸಿ, ಗಿಡ ಬೆಳೆಸುವ ಬೇಸಾಯ ಪದ್ಧತಿ ಇದಾಗಿದ್ದು, ಈ ಪದ್ಧತಿಗೆ ನಿರಂತರವಾಗಿ ವಿದ್ಯುತ್‌ ಬೇಕಾಗಿದ್ದು, ನಗರ ಪ್ರದೇಶಗಳಲ್ಲಿ ಇದನ್ನು ಆರಂಭಿಸಬಹುದು ಅಲ್ಲದೆ ಇದಕ್ಕೆ ಗ್ರೀನ್‌ ಹೌಸ್‌, ಅಥವಾ ಪಾಲಿಹೌಸ್‌ ನಿರ್ಮಿಸಬೇಕಾಗುತ್ತದೆ. ದುಬಾರಿ ವೆಚ್ಚ ತಗಲುವುದರಿಂದ ಎಲ್ಲ ರೈತರಿಗೂ ಈ ಪದ್ಧತಿ ಅಳವಡಿಸಿಕೊಳ್ಳಿ ಎಂದು ಹೇಳಲಾಗದು. ರಾಜ್ಯದ ಬನ್ನೇರುಘಟ್ಟ ಸಮೀಪದಲ್ಲಿ ಹಾಗೂ ಹೀಲಲಿಗೆ ಈ ಪದ್ಧತಿ ಅಳವಡಿಸಿಕೊಂಡಿಸಿಕೊಂಡಿದ್ದಾರೆ. ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್‌ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next