ಬೆಳಗಾವಿ: ಕೋವಿಡ್-19 ವೈರಸ್ ಹರಡುವ ಭೀತಿಯಿಂದ ತಿಂಗಳ ಹಿಂದೆ ಪಾತಾಳಕ್ಕೆ ಇಳಿದು ಕೇವಲ 30-40 ರೂ. ಪ್ರತಿ ಕೆ.ಜಿ.ಗೆ ಆಗಿದ್ದ ಬ್ರಾಯ್ಲರ್ ಕೋಳಿ ಮಾಂಸ(ಚಿಕನ್) ಈಗ 200ರ ಗಡಿ ದಾಟಿದ್ದು, ಲಾಕ್‌ಡೌನ್‌ದಿಂದಾಗಿ ಕುರಿ-ಮೇಕೆ ಮಾಂಸ(ಮಟನ್)ದ ದರವಂತೂ 700 ರೂ.ಕ್ಕಿಂತ ಹೆಚ್ಚಾಗಿ ಮಾಂಸ ಪ್ರಿಯರಿಗೆ ತಲೆನೋವಾಗಿ ಪರಿಣಮಿಸಿದೆ.
ಮಾರ್ಚ್ ತಿಂಗಳಿಂದ ಶುರುವಾಗಿದ್ದ ಕೋವಿಡ್-19 ಭೀತಿಯಿಂದಾಗಿ ಕೋಳಿ ಮಾಂಸ ತಿನ್ನಲು ಜನ ಹಿಂದೇಟು ಹಾಕುತ್ತಿದ್ದರು. ಕೋಳಿ ಮಾಂಸದಿಂದ ಕೋವಿಡ್-19 ಬರುತ್ತದೆ ಎಂಬ ಸುಳ್ಳು ವದಂತಿ ಹರಡಿತ್ತು. ಚಿಕನ್ ತಿನ್ನಲು ಜನ ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಕೆಲವೊಂದು ಕಡೆ ದರ ಇಲ್ಲದೇ ಕುಕ್ಕುಟೋದ್ಯಮಿಗಳು ಪುಕ್ಸಟ್ಟೆ ಕೋಳಿ ನೀಡಿದರು. ಇತ್ತ ಕುರಿ-ಮೇಕೆ ಮಾಂಸಕ್ಕಂತೂ ಬೇಡಿಕೆ ಹೆಚ್ಚಾಗಿ ದರ ಸಾವಿರದ ಗಡಿವರೆಗೂ ಹೋಗಿತ್ತು.
ಮಟನ್ ದರ ಗಗನಕ್ಕೆ: ಕುರಿ-ಮೇಕೆ ಮಾಂಸದ ದರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬಡವರಿಗೆ ಇಷ್ಟೊಂದು ಹಣ ಕೊಟ್ಟು ಮಾಂಸ ಸವಿಯುವುದು ಕಷ್ಟಕರವಾಗಿತ್ತು. ಕ್ರಮೇಣವಾಗಿ ಜನರು ಬ್ರಾಯ್ಲರ್ ಕೋಳಿ ಮಾಂಸದತ್ತ ತಿರುಗಿದರು. ಹೀಗಾಗಿ ಚಿಕನ್ ದರ ಈಗ 200-220 ರೂ.ವರೆಗೆ ಆಗಿದೆ. ಮಟನ್ ದರ 600-700 ರೂ.ವರೆಗೆ ಆಗಿದೆ. ಲಾಕ್‌ಡೌನ್ ವಿಧಿಸಿದ್ದರೂ ಸರ್ಕಾರ ಚಿಕನ್, ಮಟನ್ ಹಾಗೂ ಮೀನು ಮಾರಾಟಕ್ಕೆ ವಿನಾಯಿತಿ ನೀಡಿತ್ತು. ಆದರೆ ಕುರಿ ಸಂತೆಗಳಿಗೆ, ಮೀನುಗಾರಿಕೆಗೆ ಮತ್ತು ಕೋಳಿ ಸಾಗಾಟಕ್ಕೆ ನಿಷೇಧ ಹೇರಿದ್ದರಿಂದ ಅಂಗಡಿ ನಡೆಸುವುದಾದರೂ ಹೇಗೆ ಎಂಬುದು ವ್ಯಾಪಾರಸ್ಥರ ಪ್ರಶ್ನೆ.
ಅಂಗಡಿ ನಡೆಸಲು ಅನುಮತಿಯೇ ಇಲ್ಲ: ನಗರ ಸೇರಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ, ರಾಯಬಾಗ, ಯರಗಟ್ಟಿ, ಕಿತ್ತೂರು, ಬೆ„ಲಹೊಂಗಲ, ಫಾಶ್ಚಾಪುರ, ವಿಜಯಪುರ ಮುಧೋಳ, ಬಸವನಬಾಗೇವಾಡಿ, ಅಮ್ಮಿನಗಡ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಕುರಿ-ಮೇಕೆ ಸಂತೆ ನಡೆಯುತ್ತದೆ. ಇದೆಲ್ಲದಕ್ಕೂ ಕಡಿವಾಣ ಹಾಕಿದ್ದರಿಂದ ಶೇ. 90ರಷ್ಟು ಮಾಂಸದ ಅಂಗಡಿಗಳಿಗೆ ಬೀಗ ಬಿದ್ದಿದೆ. ಸರ್ಕಾರದ ಅನುಮತಿ ಇದ್ದರೂ ಮಟನ್-ಚಿಕನ್ ಅಂಗಡಿಗಳನ್ನು ನಡೆಸಲು ಪೊಲೀಸರು ಬಿಡುತ್ತಿಲ್ಲ. ಅಲ್ಲಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿರುವವರ ಮೇಲೂ ಪೊಲೀಸರು ಗದಾಪ್ರಹಾರ ನಡೆಸಿ ಬಂದ್ ಮಾಡಿಸುತ್ತಿರುವ ಆರೋಪ ಕೇಳಿ ಬರುತ್ತಿದೆ.
ಸಂಕಷ್ಟಕ್ಕೆ ಒಳಗಾದ ಮಟನ್ ವ್ಯಾಪಾರಸ್ಥರು: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಹೊರತುಪಡಿಸಿ ಸಾವಿರಾರು ಕುರಿ-ಮೇಕೆಗಳ ಮಾಂಸದ ವ್ಯಾಪಾರ ನಡೆಯುತ್ತದೆ. ರವಿವಾರ ಹಾಗೂ ಬುಧವಾರವಂತೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಟನ್ ಸವಿಯುತ್ತಾರೆ. ಆದರೆ ಲಾಕ್‌ಡೌನ್‌ದಿಂದಾಗಿ ಕೋಟ್ಯಂತರ ವ್ಯವಹಾರಕ್ಕೆ ಕೊಕ್ಕೆ ಬಿದ್ದಿದ್ದು, ಚಿಕನ್ ಹಾಗೂ ಮಟನ್ ಅಂಗಡಿಗಳನ್ನೇ ನಂಬಿಕೊಂಡು ಬದುಕುತ್ತಿರುವ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೊಂದೆಡೆ ಲಾಕ್‌ಡೌನ್‌ದಿಂದಾಗಿ ಮಾಂಸ ಪ್ರಿಯರ ನಾಲಿಗೆಗೆ ಅಡಕತ್ತರಿ ಬಿದ್ದಂತಾಗಿದೆ.
ಕೋವಿಡ್-19 ಭೀತಿಯಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿತು. ಕೋಳಿ ಮಾಂಸ ತಿನ್ನಬಾರದೆಂಬ ಸುಳ್ಳು ವದಂತಿ ಹಬ್ಬಿಸಲಾಯಿತು. ಹೀಗಾಗಿ ಕೋಟ್ಯಂತರ ರೂ. ಕೋಳಿಗಳನ್ನು ನಾಶಪಡಿಸಲಾಯಿತು. ಈಗ ಜನರೂ ಜಾಗೃತರಾಗಿದ್ದು, ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಪೌಲಿóಗಳು ಬಂದ್ ಬಿದ್ದಿವೆ. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿವೆ.
– ಪ್ರಕಾಶ ಭೋಪಳೆ, ಕುಕ್ಕುಟೋದ್ಯಮ ಮಾಲೀಕರು, ಸಂಕೇಶ್ವರ
ಲಾಕ್‌ಡೌನ್‌ನಲ್ಲಿ ಮಟನ್ ಹಾಗೂ ಚಿಕನ್ ಅಂಗಡಿಗಳ ಮಾರಾಟ ಸಂಪೂರ್ಣ ಬಂದ್ ಆಗಿದೆ. ಸಂತೆಗಳನ್ನು ಬಂದ್ ಮಾಡಿದ್ದರಿಂದ ಕುರಿ-ಮೇಕೆಗಳು ಸಿಗುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಮಟನ್ ಅಂಗಡಿ ಆರಂಭಗೊಂಡಿವೆ. ಕುರಿ-ಮೇಕೆಗಳ ಅಭಾವದಿಂದಾಗಿ ಮಟನ್ ಸಿಗುತ್ತಿಲ್ಲ. ಜನರಿಂದ ಅತಿಯಾದ ಬೇಡಿಕೆ ಇದೆ. ಆದರೆ ಲಾಕ್‌ಡೌನ್‌ದಿಂದಾಗಿ ಜಿಲ್ಲೆಯಲ್ಲಿ ಕೋಟ್ಯಂತರ ರೂ. ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ.
-ಅಜಿತ್ ಪವಾರ, ರಾಜ್ಯಾಧ್ಯಕ್ಷರು, ಕಾಟಿಕ ಸಮಾಜ ಸೇವಾ ಸಂಘ
ಬೇರೆ ಬೇರೆ ಕಡೆಯಿಂದ ಮೀನು ಲಾರಿಗಟ್ಟಲೇ ಬಂದರೂ ಮಾರಾಟಕ್ಕೆ ಅವಕಾಶ ಇಲ್ಲದಂತಾಗಿದೆ. ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಮೀನು ಸಿಗುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಅಂಗಡಿ ನಡೆಸಲೂ ಅನುಮತಿ ಇಲ್ಲವಾಗಿದೆ. ಹೀಗಾಗಿ ಕಳೆದ 40 ದಿನಗಳಿಂದ ಮೀನು ಮಾರಾಟ ಸಂಪೂರ್ಣವಾಗಿ ಬಂದ್ ಆಗಿದೆ. ಮೀನಿನ ಅಂಗಡಿಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು.
– ಜಯಸಿಂಗ್ ಘೋಡಕೆ, ಮೀನು ವ್ಯಾಪಾರಸ್ಥರು, ನಿಪ್ಪಾಣಿ
-ಭೈರೋಬಾ ಕಾಂಬಳೆ