ವಿಧಾನಸಭೆ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜಕೀಯ ಪಕ್ಷಗಳಿಗೀಗ ಖರ್ಚಿನದ್ದೇ ದೊಡ್ಡ ಚಿಂತೆಯಾದಂತಿದೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡುತ್ತಿದ್ದ ಆಡಳಿತಾರೂಢ ಕಾಂಗ್ರೆಸ್‌ನ ಬಿ.ಆರ್. ಪಾಟೀಲ್, ಇದ್ದಕ್ಕಿದ್ದಂತೆ ಚುನಾವಣಾ ಖರ್ಚಿನತ್ತ ಹೊರಳಿದರು. ಇದಕ್ಕೆ ಪಕ್ಷಭೇದ ಮರೆತು ಚರ್ಚೆಗಿಳಿದ ಶಾಸಕರು, ಚುನಾವಣೆ ಎಂದರೆ ಹಿಂದೆ ಸರಿಯುವಂತಾಗಿದೆ ಎಂದು ಮಮ್ಮಲ ಮರುಗಿದರು.
ಶಾಸಕರೆಂದರೆ ಅಹವಾಲು ಆಲಿಕೆ ಕೇಂದ್ರಗಳಂತಾಗಿದ್ದೇವೆ ಎಂದು ಮಾತು ಆರಂಭಿಸಿದ ಬಿ.ಆರ್. ಪಾಟೀಲ್, ಉದ್ಯಮಿಗಳ ಹಣಕಾಸಿನ ಕಾರಿಡಾರ್‌ನಂತಾಗಿದ್ದೇವೆ. ಚುನಾವಣಾ ವ್ಯವಸ್ಥೆ ಹಾಳಾಗಿದೆ. ಹಿಂದಿನಂತೆ ಈಗಿಲ್ಲ ಎಂದು ಮಾತಿನ ಲಹರಿ ಮುಂದುವರಿಸಿದ್ದರು.
ಇದಕ್ಕೆ ಬ್ರೇಕ್ ಹಾಕಲು ಯತ್ನಿಸಿದ ಸ್ಪೀಕರ್ ಖಾದರ್, ಅದನ್ನೆಲ್ಲ ಚರ್ಚಿಸಿ ಪ್ರಯೋಜನ ಇಲ್ಲ ಬಿಡಿ. ಪರಿಹಾರ ಇದ್ದರೆ ಹೇಳಿ. ನನ್ನ ತಂದೆ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸ ಆಗಿದೆ. ನೀವು ಮೊದಲ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಇದ್ದ ಪರಿಸ್ಥಿತಿಯೇ ಈಗಲೂ ಇದೆಯೇ? ಹಿಂದೆ ಇದ್ದಂತೆ ಈಗಿಲ್ಲ, ಈಗಿನಂತೆ ಮುಂದೆ ಇರುವುದಿಲ್ಲ. ಹಿಂದೆಲ್ಲಾ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಸೇವೆಗಳನ್ನು ಮಾಡಿಕೊಂಡು ಚುನಾವಣಾ ರಾಜಕಾರಣಕ್ಕೆ ಅನಿವಾರ್ಯವಾಗಿ ಬರುವವರು ಬರುತ್ತಿದ್ದರು. ವ್ಯಾಪಾರ ಮಾಡುವವರು ವ್ಯಾಪಾರ ಮಾಡಿಕೊಂಡು ಇರುತ್ತಿದ್ದರು. ಆದರೆ, ಈಗ ಹಾಗಿಲ್ಲ ಎನ್ನುತ್ತಾ ಮಾತಿನ ಓಟದಲ್ಲಿ ಹೇಳಿಬಿಟ್ಟರು. ಇಷ್ಟು ಸಾಕಾಗಿತ್ತು ಶಾಸಕರು ಮಾತಿಗಿಳಿಯಲು.
ನಂಗೇನ್ ಕೊಡುತ್ತೀಯಾ ಅಂತಾರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾ, ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಏನು ತರುತ್ತೀಯಾ ಎಂದು ಜನ ಕೇಳುವುದಿಲ್ಲ. ನನಗೇನು ಕೊಡುತ್ತೀಯಾ ಎನ್ನುತ್ತಾರೆ. ದೇವಸ್ಥಾನ, ಜೀರ್ಣೋದ್ಧಾರ, ಉತ್ಸವ ಎಂದು ಬರುತ್ತಾರೆ. ಕಡಿಮೆ ಕೊಟ್ಟರೆ ಸಾಲದು ಎನ್ನುತ್ತಾರೆ. ಹಿಂದೆಲ್ಲಾ 5 ಸಾವಿರ ರೂ.ಗಳಲ್ಲಿ ಚುನಾವಣೆ ಮುಗಿದು ಹೋಗುತ್ತಿತ್ತು. ಈಗ ಚುನಾವಣೆಗಿಂತ ಮೂರ್‍ನಾಲ್ಕು ತಿಂಗಳ ಮೊದಲೇ ಕುಕ್ಕರ್, ಫ್ರಿಡ್ಜ್ ಹಂಚುವ ಸ್ಥಿತಿಗೆ ಬಂದಿದ್ದೇವೆ. ಮೂರೂ ಪಕ್ಷದವರು ಹಣ ಕೊಡುತ್ತೇವೆ. ಜನರೂ ಕಷ್ಟದಲ್ಲಿದ್ದಾರೆ. ಕೊಟ್ಟಿದ್ದನ್ನು ತೆಗೆದುಕೊಳ್ಳುತ್ತಾರೆ. ಮತದಾನದ ನಂತರದ ಡಬ್ಬಿ ತೆಗೆದಾಗಲೇ ಗೊತ್ತಾಗುವುದು. ಹಣ ಕೊಡದಿದ್ದರೆ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಅದರ ನಡುವೆಯೂ ಪ್ರಾಮಾಣಿಕವಾಗಿ ಗೆಲ್ಲುವವರೂ ಇದ್ದಾರೆ ಎಂದು ಸಮರ್ಥಿಸಿಕೊಂಡರು.
ಮತದಾರರೆಂಬ ನದಿ ಮೂಲವನ್ನೇ ಹಾಳು ಮಾಡಿದ್ದೇವೆ: ಶಾಂತವೇರಿ ಗೋಪಾಲಗೌಡರ ಕಾಲದ ಚುನಾವಣಾ ದಿನಗಳನ್ನು ಸ್ಮರಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಅಂದು ಜನರೇ ಒಟ್ಟು ಮಾಡಿ 5 ಸಾವಿರ ರೂ.ಗಳನ್ನು ಶಾಂತವೇರಿ ಗೋಪಾಲಗೌಡರಿಗೆ ಕೊಟ್ಟು ಚುನಾವಣೆಯಲ್ಲೂ ಗೆಲ್ಲಿಸುತ್ತಿದ್ದರು. ಇದನ್ನು ನೋಡಿಕೊಂಡು ಬೆಳೆದವನು ನಾನು. ನಾನು ಚುನಾವಣೆಗೆ ನಿಂತಾಗಲೂ ಅಷ್ಟೇ ಬೆಂಬಲವನ್ನು ಜನರು ಕೊಟ್ಟಿದ್ದರು. ನಾವೀಗ ಮತದಾರರೆಂಬ ನದಿ ಮೂಲ ಹಾಳು ಮಾಡಿದ್ದೇವೆ. ರಾಜಕಾರಣಿ ಹಾಳಾದರೆ 5 ವರ್ಷಕ್ಕೊಮ್ಮೆ ಬದಲಿಸಬಹುದು. ಮತದಾರರೇ ಹಾಳಾದರೆ ಹೇಗೆ ಎಂದು ಪ್ರಶ್ನೆ ಹಾಕಿದರು.
ಜನಗಳಿಗೆ ಹತ್ತಿರವಾದರೂ ಕಷ್ಟ, ದೂರಾದರೂ ಕಷ್ಟ
ಚುನಾವಣೆ ಎಂಬುದು ಪರೀಕ್ಷೆ ಇದ್ದಂತೆ. ಕನಿಷ್ಠ 35 ಅಂಕ ಪಡೆದರಷ್ಟೇ ಗೆಲ್ಲುವುದು. ಜನರ ಪ್ರೀತಿ ಗಳಿಸಿದರೆ ಇದಕ್ಕೆಲ್ಲಾ ಕಡಿವಾಣ ಹಾಕಬಹುದು ಎಂದು ಸ್ಪೀಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೊಪ್ಪದ ಕುಮಾರಸ್ವಾಮಿ, ಜನಗಳ ಹತ್ತಿರ ಇದ್ದು ನೋಡಿ ಬಂದಿದ್ದೇನೆ. ಅದೂ ಕಷ್ಟವೇ ಇದೆ. ದೂರ ಇದ್ದು ಚುನಾವಣೆಗಿಂತ ಒಂದು ವಾರ ಮೊದಲು ಏನು ಬೇಕು ಅದನ್ನು ಕೊಟ್ಟರೆ ಗೆಲ್ಲುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಜಯಪ್ರಕಾಶ್ ನಾರಾಯಣ ಅವರ ಚಳವಳಿಯಿಂದ ಪ್ರೇರಿತನಾಗಿ ರಾಜಕಾರಣಕ್ಕೆ ಬಂದವನು. ಹಣ ಕೊಟ್ಟು ಗೆಲ್ಲುವಷ್ಟು ಸಾಮರ್ಥ್ಯ ನನ್ನಲ್ಲಿಲ್ಲ. ಇಂದು ಕಾಲ ಬದಲಾಗಿದೆ.
ಬಿ.ಆರ್. ಪಾಟೀಲ್, ಕಾಂಗ್ರೆಸ್ ಶಾಸಕ
ಹಿಂದೆಲ್ಲ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಸೇವೆ ಮಾಡಿಕೊಂಡು ಅನಿವಾರ್ಯವಾಗಿ ಚುನಾವಣಾ ರಾಜಕಾರಣಕ್ಕೆ ಬರುವವರು ಬರುತ್ತಿದ್ದರು. ವ್ಯಾಪಾರ ಮಾಡುವವರು ಮಾಡಿಕೊಂಡಿದ್ದರು. ಈಗ ಹಾಗಿಲ್ಲ.
ಯು.ಟಿ. ಖಾದರ್, ಸ್ಪೀಕರ್
ಮೂರೂ ಪಕ್ಷದವರಿಂದ ಜನರು ಹಣ ಪಡೆಯುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ಡಬ್ಬಿ ತೆರೆದಾಗಲೇ ಯಾರಿಗೆ ಮತ ಬಿದ್ದಿದೆ ಎಂಬುದು ಗೊತ್ತಾಗುವುದು.
ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ