Advertisement

ಕಂದಕೂರ ಮೇಲಿದೆ ಅಭಿವೃದ್ದಿಯ ನಿರೀಕ್ಷೆ

01:07 PM May 18, 2018 | Team Udayavani |

ಯಾದಗಿರಿ: ಕಳೆದ ಐದು ದಶಕಗಳಿಂದ ವಲಸಿಗರ ಆಡಳಿತದಲ್ಲಿದ್ದ ಗುರುಮಠಕಲ್‌ ಮತಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಸ್ಥಳೀಯರಾದ ಹಾಗೂ ಜೆಡಿಎಸ್‌ ನೂತನ ಶಾಸಕ ನಾಗನಗೌಡ ಕಂದಕೂರ ಅವರ ಮೇಲೆ ಮತದಾರರು ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Advertisement

ಗುರುಮಠಕಲ್‌ ಮತಕ್ಷೇತ್ರ ರಾಜ್ಯದ ಗಡಿ ಭಾಗದಲ್ಲಿದ್ದು, ತೆಲುಗು ಪ್ರಭಾವ ಹೆಚ್ಚಾಗಿದೆ. ಇಲ್ಲಿ ಅನಕ್ಷರತೆ ತಾಂಡಾವವಾಡುತ್ತಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೆಂಗಳೂರು, ಮುಂಬೈ ಸೇರಿದಂತೆ ಮಹಾನಗರಗಳಿಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದಾರೆ. ಅನೇಕ ಯುವಕರು ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದು, ನೂತನ ಶಾಸಕರು ಇತ್ತ ಕಡೆ ಹೆಚ್ಚಿನ ಗಮನಹರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವರೇ ಎಂಬ ಪ್ರಶ್ನೆ ಎದುರಾಗಿದೆ.

ಕಡೇಚೂರು-ಬಾಡಿಯಾಳ ಗ್ರಾಮದಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಗಾಗಿ ರೈತರಿಂದ 3 ಸಾವಿರಕ್ಕಿಂತ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಂಡು ನಾಲ್ಕು ವರ್ಷ ಕಳೆದರೂ ಇನ್ನೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಭೂಮಿ ಕೊಟ್ಟ ರೈತರು ಇತ್ತ ಭೂಮಿಯೂ ಇಲ್ಲ. ಮಕ್ಕಳಿಗೆ ಕೆಲಸವೂ ಇಲ್ಲದಂತೆ ಪರದಾಡುತ್ತಿದ್ದಾರೆ. 

ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತ ಗೊಂಡಿದ್ದು, ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ನೂತನ ಶಾಸಕರು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ನಾಗಕರು ಆಗ್ರಹಿಸಿದ್ದಾರೆ.

ಯಾದಗಿರಿ ತಾಲೂಕಿನಿಂದ ಬೇರ್ಪಟ್ಟು ಗುರುಮಠಕಲ್‌ ನೂತನ ತಾಲೂಕು ಘೋಷಣೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯಲ್ಲಿಯೇ ಗುರುಮಠಲ್‌ ಕೈಗಾರಿಕೆ ಕೇಂದ್ರವಾಗುವತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಳನಿ ವಹಿಸಬೇಕಾಗಿದೆ. ತಾಲೂಕಿನಲ್ಲಿ ಈಗಾಗಲೇ ವಿಶೇಷ ತಹಶೀಲ್ದಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ.

Advertisement

ಅದನ್ನು ಮೇಲೆಜೇಗೇರಿಸಿ ತಾಲೂಕು ಆಡಳಿತ ಕಚೇರಿಯನ್ನಾಗಿ ತಾತ್ಕಾಲಿಕವಾಗಿ ಮಾಡಲಾಗಿದೆ. ಸ್ಥಳ ಗುರುತಿಸಿ ನೂತನ ತಾಲೂಕು ಆಡಳಿತ ಕಚೇರಿ ನಿರ್ಮಾಣ ಮಾಡುವತ್ತ ಗಮನಹರಿಸಬೇಕು. 

ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಫೀಯೇಟ್‌ ಬೋಗಿ ತಯಾರಿಕಾ ಕಾರ್ಖಾನೆ ಪ್ರಾರಂಭಗೊಂಡಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವತ್ತ ಕ್ರಮ ಕೈಗೊಳ್ಳಬೇಕು. ಟೆಕ್ಸ್‌ಟೈಲ್‌ ಪಾರ್ಕ್‌, ಕೋಕಾ ಕೋಲಾ ಹಾಗೂ 45 ಫಾರ್ಮಾ ಕಂಪನಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ಈ ಎಲ್ಲ ಕೈಗಾರಿಕೆಗಳು ಆರಂಭವಾದರೆ ಭವಿಷ್ಯದಲ್ಲಿ ಸ್ಥಳಿಯರಿಗೆ ಉದ್ಯೋಗ ದೊರೆತು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗುತ್ತದೆ. ಹಾಗಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕಾಗಿದೆ.

ಕಾಂಗ್ರೆಸ್‌ನ ಪ್ರಭಾವಿ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು 8 ಬಾರಿ ಹಾಗೂ ಸಪ್ತ ಖಾತೆ ಸಚಿವ ಬಾಬುರಾವ ಚಿಂಚನಸೂರ ಎರಡು ಬಾರಿ ಆಡಳಿತ ನಡೆಸಿದ ಕ್ಷೇತ್ರವಾಗಿದ್ದರೂ ಕೂಡ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರಕಾರಿ ಕಚೇರಿಗಳು, ರಸ್ತೆಗಳು, ಭೀಮಾ ನದಿಯಿಂದ ಕುಡಿಯುವ ನೀರು ಹೊರತು ಪಡಿಸಿದರೆ, ರೈತರಿಗೆ ನೀರಾವರಿ ಅನುಕೂಲ, ನಿರುದ್ಯೋಗಿಗಳಿಗೆ ಅರ್ಹ ಉದ್ಯೋಗ, ಕಲಿಯುವವರಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು ಇಲ್ಲದೇ ಸ್ಥಳೀಯರು ಪರದಾಡುವುದಂತೂ ಇನ್ನೂ ತಪ್ಪಿಲ್ಲ. 

ಗುರುಮಠಕಲ್‌ ಪಟ್ಟಣದಲ್ಲಿ 50 ಹಾಸಿಗೆಯ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಕಾರ್ಯಾಲಯ, ಸೈದಾಪುರದಲ್ಲಿ ರೈಲ್ವೆ ನಿಲ್ದಾಣ, ಗುರುಮಠಕಲ್‌ ಪಟ್ಟಣದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಪಿಯುಸಿ ಮತ್ತು ಡಿಗ್ರಿ ಕಾಲೇಜು ಇದೆ. ಆದರೆ ಸ್ನಾತಕೋತ್ತರ ಪದವಿಗೆ ಬೇರೆಡೆ ತೆರಳಬೇಕು. ಆದ್ದರಿಂದ ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ತಾಲೂಕು ಕೇಂದ್ರಕ್ಕೆ ಪ್ರಮುಖವಾಗಿ ನೋಂದಣಿ ಕಚೇರಿ, ನ್ಯಾಯಾಲಯ, ತಾಪಂ ಕಚೇರಿ, ಬಂಧಿಖಾನೆ, ತೋಟಗಾರಿಕೆ, ಕೃಷಿ, ಅಗ್ನಿ ಶಾಮಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಸೇರಿದಂತೆ ವಿವಿಧ ಇಲಾಖೆ ತಾಲೂಕು
ಕಚೇರಿಗಳು ಕಾರ್ಯಾರಂಭಿಸಬೇಕಿದೆ. ಅಭಿವೃದ್ಧಿಗೆ ಪೂರಕವಾದ ವಾತಾರಣದವಿದ್ದು, ಸಮರ್ಪಕವಾಗಿ
ಬಳಸಿಕೊಳ್ಳುವತ್ತ ನೂತನ ಶಾಸಕರು ಗಮನಹರಿಸಬೇಕಾಗಿದೆ. ಈಗ ಸ್ಥಳೀಯರೇ ನೂತನ ಶಾಸಕರಾಗಿ ಆಯ್ಕೆಯಾಗಿರುವುದರಿಂದ ನಾಗನಗೌಡ ಕಂದಕೂರ ಅವರ ಮೇಲೆ ಇಲ್ಲಿಯ ಮತದಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಅದು ಹುಸಿಯಾಗದಿರಲಿ.
 
ಮತಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ಬಾಡಿಯಾಳ- ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. 
 ನಾಗನಗೌಡ ಕಂದಕೂರ, ನೂತನ ಶಾಸಕರು

ಗುರುಮಠಕಲ್‌ ಮತಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿವೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ನೂತನ ಶಾಸಕರು ಕ್ಷೇತ್ರದ ಸಮಸ್ಯೆ ಜತೆಗೆ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು.
 ಸುದರ್ಶನ ರೆಡ್ಡಿ, ಗುರುಮಠಕಲ್‌ ನಿವಾಸಿ 

ರಾಜೇಶ ಪಾಟೀಲ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next