Advertisement

ಬಜೆಟ್‌ ಮೇಲೆ ನೂರಾರು ನಿರೀಕ್ಷೆ

09:13 AM Feb 14, 2019 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೇ ಸಾಲಿನ ಬಜೆಟ್‌ ಫೆ.18 ರಂದು ಮಂಡನೆಯಾಗುವ ನಿರೀಕ್ಷೆಯಿದ್ದು, ರಾಜಧಾನಿಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಶಾಶ್ವತ ಪರಿಹಾರ, ಪರಿಸರ ಸಂರಕ್ಷಣೆ, ಸಮರ್ಪಕ ಘನತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆ ರೂಪಿಸಬೇಕು ಎಂದು ನಾಗರಿಕ ಸಂಘಟನೆಗಳು, ಮಾಜಿ ಮಹಾಪೌರರು, ಪರಿಸರ ವಾದಿಗಳು ಸಲಹೆ ನೀಡಿದ್ದಾರೆ.

Advertisement

ಬೆಂಗಳೂರು ವೇಗವಾಗಿ ಬೆಳೆಯುವ ಜತೆಗೆ ನಗರದ ಜನಸಂಖ್ಯೆಯೂ ಹೆಚ್ಚಾಗುತ್ತಿದ್ದು, ತೀವ್ರ ಜನದಟ್ಟಣೆ ಉಂಟಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಶಾಶ್ವತ ಪರಿಹಾರ ರೂಪಿಸಬೇಕು. ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವುದರ ಜತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ನಗರದ ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಮಳೆ ನೀರು ಕೊಯ್ಲು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೊದಲು ಪಾಲಿಕೆಯ ಎಲ್ಲ ಕಟ್ಟಡಗಳಿಗೆ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿ ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಳೆಗೇರಿ ಮುಕ್ತವಾಗಲಿ: ನಗರದಲ್ಲಿ ಅಸಮತೋಲನ ಹಾಗೂ ಮಾಲಿನ್ಯ ಹೆಚ್ಚಾಗುವಲ್ಲಿ ಕೊಳೆಗೇರಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಪಾಲಿಕೆ ಬಜೆಟ್‌ನಲ್ಲಿ ಕೊಳೆಗೇರಿ ಮುಕ್ತ ನಗರವನ್ನಾಗಿಸಲು ಯೋಜನೆ ರೂಪಿಸಬೇಕಿದೆ. ಆ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಜತೆಗೆ ಕೊಳೆಗೇರಿಗಳಲ್ಲಿ ಸಮುದಾಯ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಯಲು ಶೌಚ ಮುಕ್ತಗೊಳಿಸಬೇಕಿದೆ ಎಂದು ಸಿವಿಕ್‌ ಸಂಸ್ಥೆ ತಿಳಿಸಿದೆ. 

ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡುವುದನ್ನು ಬಿಟ್ಟು, ತ್ಯಾಜ್ಯ ವಿಲೇವಾರಿಗೆ ಅಗತ್ಯವಿರುವ ವಾಹನಗಳನ್ನು ಪಾಲಿಕೆಯಿಂದಲೇ ಖರೀದಿಸುವ ಮೂಲಕ ಸಬಲವಾಗಬೇಕಿದೆ. ಇದರೊಂದಿಗೆ ಆಟೋ ಟಿಪ್ಪರ್‌ ಚಾಲಕರು ಹಾಗೂ ಗ್ಯಾಂಗ್‌ಮನ್‌ಗಳನ್ನು ಪೌರಕಾರ್ಮಿಕರೆಂದು ಗುರುತಿಸಿ ಪಾಲಿಕೆಯಿಂದಲೇ ನೇರವಾಗಿ ವೇತನ ಪಾವತಿಸಬೇಕು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಏನಿರಬೇಕು?
ವಾರ್ಡ್‌ಗೊಂದು ಡೇ ಕೇರ್‌ ಬೇಕು
ನಗರದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು ಹೆಚ್ಚಾಗಿರುವುದರಿಂದ ಅವರ ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ವಾರ್ಡ್‌ ನಲ್ಲಿ ಮಕ್ಕಳ “ಡೇ ಕೇರ್‌ ಸೆಂಟರ್‌’ ತೆರೆಯಬೇಕು. ಅಂಗನ ವಾಡಿಗಳು ಸಂಜೆ 4 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ 6 ವರ್ಷ ದೊಳಗಿನ ಮಕ್ಕಳಿಗಾಗಿ ಇಂತಹ ಕೇಂದ್ರಗಳನ್ನು ತೆರೆಯಬೇಕಿದ್ದು, ಪಾಲಿಕೆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಬಲಪಡಿಸಬೇಕಿದೆ.
 ●ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌ ಸಂಸ್ಥೆ ಟ್ರಸ್ಟಿ 

Advertisement

ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ
ತ್ಯಾಜ್ಯ ವಿಲೇವಾರಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ, ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು ಸಾಮಾನ್ಯ ವಾಗಿದೆ. ವಾರ್ಡ್‌ ವಾರು ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಿ, ಕಸ ವಿಂಗಡಣೆ ಕುರಿತಂತೆ ಜಾಗೃತಿ ಮೂಡಿಸ ಬೇಕು. ಉದ್ಯಾನಗಳಲ್ಲಿನ ಎಲೆಗಳನ್ನು ಸಾವಯವ ಗೊಬ್ಬರವಾಗಿಸುವ ಜತೆಗೆ, ಸಸಿ ನೆಡುವ ಮೂಲಕ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕಿದೆ.
 ●ಯಲ್ಲಪ್ಪರೆಡ್ಡಿ, ಪರಿಸರವಾದಿ

ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿ
ನಗರದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಆ ಮೂಲಕ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ಪಾಲಿಕೆಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದವರಿಗೆ ಘೋಷಿಸುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಜತೆಗೆ ಅಭಿವೃದ್ಧಿ ಕಾಮಗಾರಿಗಳ ಜತೆಗೆ ಪರಿಸರ ರಕ್ಷಣೆಗೂ ಒತ್ತು ನೀಡಬೇಕು.
 ●ರಾಮಚಂದ್ರಪ್ಪ, ಮಾಜಿ ಮೇಯರ್‌

ಅನುದಾನ ತಾರತಮ್ಯ ಮಾಡಬಾರದು
ಅನುದಾನ ಹಾಗೂ ಒಂಟಿ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡ ಬಾರದು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎಂದು ತಾರತಮ್ಯ ಮಾಡದೆ ಪ್ರತಿಯೊಂದು ವಾರ್ಡ್‌ ಗೂ ಸಮಾನವಾದ ಅನುದಾನ ನೀಡಬೇಕು. ವೈಟ್‌ಟಾಪಿಂಗ್‌ ಕಾಮಗಾರಿಯಂತಹ ಯೋಜ ನೆಗಳನ್ನು ಕೈಬಿಡಬೇಕಿದ್ದು, ಕಂದಾಯ ನಿವೇಶನದಾರ ರಿಂದ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಖಾತಾಮಾಡಿ ಕೊಡಲು ಮುಂದಾದರೆ ಪಾಲಿಕೆಗೆ ಆದಾಯ ಬರಲಿದೆ.
 ●ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌

ತಜ್ಞರ ಇತರೆ ಸಲಹೆಗಳು
„ ಸ್ವತ್ಛ ಭಾರತ್‌ ಯೋಜನೆಯಡಿ ದೊರೆಯುವ ಅನುದಾನ ಸಮರ್ಪಕ ಬಳಕೆ 
„ 198 ವಾರ್ಡ್‌ಗಳಲ್ಲಿ ಪರಿಸರ ಸ್ನೇಹಿ ತ್ಯಾಜ್ಯ ಸಂಸ್ಕರಣಾ ಅಥವಾ ಬಯೋ ಮಿಥನೈಸೇಷನ್‌ ಘಟಕ ಸ್ಥಾಪನೆ
„ ಸಗಟು ತ್ಯಾಜ್ಯ ಉತ್ಪಾದಕರ ಮೇಲಿನ ಹೆಚ್ಚುವರಿ ನಿಯಮಗಳನ್ನು ಸಡಿಲಗೊಳಿಸಬೇಕು
„ ಸಮುದಾಯ ಸಂಸ್ಕರಣಾ ಹಾಗೂ ಒಣತ್ಯಾಜ್ಯ ಘಟಕ ಸ್ಥಾಪನೆ 
„ ಕುಡಿಯುವ ನೀರು ನಿರ್ವಹಣೆಗೆ ಆದ್ಯತೆ 
„ ಕೆರೆಗಳಿಗೆ ತ್ಯಾಜ್ಯನೀರು ಪ್ರವೇಶಿಸುವುದನ್ನು ತಡೆಯಲು ಕ್ರಮ
„ ಪಾಲಿಕೆಯ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ
„ ರಾಜಕಾಲುವೆಗಳ ಅಭಿವೃದ್ಧಿಗೆ ಅನುದಾನ ಮೀಸಲು
„ ವಾರ್ಡ್‌ವಾರು ರಸ್ತೆಗಳ ಅಭಿವೃದ್ಧಿಗೆ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next