ಅಥಣಿ: ಕನ್ನಡದ ಅನ್ನ ತಿಂದು, ಕನ್ನಡದ ನೆಲದಲ್ಲಿ ಇದ್ದು ನಾಡದ್ರೋಹದ ಕೆಲಸ ಮಾಡುತ್ತಿರುವ ಬೆಳಗಾವಿ ಎಂಇಎಸ್, ಶಿವಸೇನಾ ಸಂಘಟನೆಗಳನ್ನು ನಿಷೇಧಿಸಿ, ನಾಡದ್ರೋಹದ ಅಡಿಯಲ್ಲಿ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಎಂದು ನಾರಾಯಣ ಗೌಡ ಬಣದಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ (ಬಮನಾಳ ) ಸರ್ಕಾರಕ್ಕೆ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಕನ್ನಡದ ಅಸ್ಮಿತೆಯಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ರವಿವಾರ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಶಿವಸೇನೆ ಕಾರ್ಯಕರ್ತರು ಹಲ್ಲೆ ಮಾಡುತ್ತಿದ್ದು, ಕರ್ನಾಟಕ ಸರ್ಕಾರ ತಕ್ಷಣವೇ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಗವಾಡ ಶಾಸಕರು ಸಚಿವ ಸ್ಥಾನಕ್ಕಾಗಿ ಮರಾಠಾ ಸಮಾಜದ ಮುಖಂಡರ ಸಭೆ ಕರೆದ ಕೆಲವೇ ಗಂಟೆಗಳಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ಅಧಿಕಾರಕ್ಕಾಗಿ ಪ್ರತಿಭಟನೆ ಮಾಡುವ ಶ್ರೀಮಂತ ಪಾಟೀಲ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನೊಬ್ಬ ಮುಖಂಡ ಶಬ್ಬೀರ ಸಾಥಬಚ್ಚೆ ಮಾತನಾಡಿ, ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ಕೆಲಸವನ್ನು ಯಾರೂ ಮಾಡಬಾರದು. ಬೆಳಗಾವಿಯಲ್ಲಿ ಕನ್ನಡಿಗರ ಹೆಮ್ಮೆಯಾದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ ಮಾಡಿರುವುದು ಖಂಡನೀಯವಾಗಿದೆ ಎಂದು ಹೇಳಿದರು. ಮುಖಂಡರಾದ ಸಿದ್ಧಗೌಡಾ ಹಿಪ್ಪರಗಿ, ಸಚಿನ್ ಪಾಟೀಲ, ಯೂನಸ್ ಮೋಳೆ, ಸಂಜು ಮಾಳಿ, ದಾವಲ್ ಮೋಳೆ, ಅಯುಬ್ ಪಟೇಲ, ಅಶದವುಲ್ಲಾ ಬಿರಾದಾರ, ಬಾಳಾಗೌಡ
ಮಗದುಮ್ ಹಾಗೂ ಕರವೇ ಕಾರ್ಯಕರ್ತರು ಇದ್ದರು.