ಪ್ರತಿದಿನ ವ್ಯಾಯಾಮ ಮಾಡುವುದು ಉತ್ತಮ ಅಭ್ಯಾಸವಾಗಿದ್ದು, ಅದು ಮನುಷ್ಯನನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಮೂಲಕ ದೀರ್ಘಕಾಲದ ಕಾಯಿಲೆಗಳನ್ನು ದೂರವಿರಿಸಲು ಅಗತ್ಯವಾಗಿ ಬೇಕಾಗಿದೆ. ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಹಲವಾರು ರೀತಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಉನ್ನತಿಗೆ ಕಾರಣವಾಗುತ್ತದೆ. ಅದೂ ಅಲ್ಲದೆ ವಯಸ್ಸಿಗೆ ಸಂಬಂಧಿಸಿದ ಮತ್ತು ಅನೇಕ ನರಗಳ ಕಾಯಿಲೆಗಳನ್ನೂ ಕೂಡ ತಡೆಯಬಹುದು. ವ್ಯಾಯಾಮದ ತೀವ್ರತೆಯನ್ನು ಗಮನಕ್ಕೆ ತೆಗೆದುಕೊಂಡರೆ ನಾವು ಮಾಡುವ ಚಟುವಟಿಕೆಯು ಕಡಿಮೆ ಅಥವಾ ಮಧ್ಯಮ ತೀವ್ರತೆ ಹೊಂದಿದ್ದರೆ ಮತ್ತು ಆನಂದದಾಯಕವಾಗಿ ಮಾಡುತ್ತಿದ್ದರೆ ವ್ಯಾಯಾಮವನ್ನು ಖಂಡಿತವಾಗಿ ಮುಂದುವರಿಸಬೇಕು. ಒಳಾಂಗಣ ವ್ಯಾಯಾಮಕ್ಕಿಂತ ಹೊರಾಂಗಣ ವ್ಯಾಯಾಮವೇ ಹೆಚ್ಚು ಆನಂದದಾಯಕವಾಗಿದೆ ಮತ್ತು ತೃಪ್ತಿಯ ಭಾವನೆಗಳನ್ನು ಹೊಂದಿದೆ ಎಂದು ಮಂಡಿಸಲ್ಪಟ್ಟ ಸಂಶೋಧನೆಗಳು ದೃಢಪಡಿಸಿವೆ. ನಿಯಮಿತವಾದ ಹೊರಾಂಗಣ ವ್ಯಾಯಾಮವು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಲು ಪರಿಣಾಮಕಾರಿ ವಿಧಾನವಾಗಿದ್ದು, ವಿಟಮಿನ್ ಡಿ ಕೊರತೆಯನ್ನು ತಡೆಗಟ್ಟುವಂತಹ ಇತರ ಕಾರಣಗಳಿಗಾಗಿಯೂ ಪ್ರಯೋಜನಕಾರಿಯಾಗಿದೆ.
ಆದಾಗ್ಯೂ ಒಬ್ಬ ವ್ಯಕ್ತಿಗೆ ನಿಯಂತ್ರಿಸಲು ಕಷ್ಟಕರವಾದ ಅಥವಾ ಅಸಾಧ್ಯವಾದ ಹಲವಾರು ಅಂಶಗಳಿಂದ ಹೊರಾಂಗಣ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕಷ್ಟ ಆಗಬಹುದು. ಅವು ಯಾವುದೆಂದರೆ ನಿರ್ಮಿತ ಪರಿಸರ, ಬದಲಾಗುತ್ತಿರುವ ಋತುಗಳು, ದಿನದ ಸಮಯ ಮತ್ತು ತಾಪಮಾನ, ಗಾಳಿಯ ತೀವ್ರತೆ ಮತ್ತು ಮಳೆಯಂತಹ ಹವಾಮಾನ ಬದಲಾವಣೆಗಳು. ಕಾಯಿಲೆಗೆ ತುತ್ತಾದವರು ಮತ್ತು ಹಿರಿಯ ವಯಸ್ಕರಂತಹ ದುರ್ಬಲ ಗುಂಪುಗಳಲ್ಲಿ ಹೊರಾಂಗಣ ದೈಹಿಕ ಚಟುವಟಿಕೆಗಳು ಕೆಟ್ಟದಾಗಿ ಪರಿಣಮಿಸಬಹುದು. ಮಳೆಗಾಲದ ತಿಂಗಳುಗಳಲ್ಲಿ ಏನೂ ಮಾಡಲು ಅಸಾಧ್ಯವಾಗಿ ಜಾರುವಂಥ ನೆಲ, ಸರಿಯಾಗಿಲ್ಲದ ಜಾಗ ಅಥವಾ ನೀರಿನ ಮೇಲೆ ಬೀಳುವ ಭಯಗಳೆಲ್ಲ ಪರಿಣಾಮ ಬೀರುತ್ತದೆ.
ಮುಖ್ಯವಾಗಿ ಬೇಸಗೆಯಲ್ಲಿ ಮಾಡುವ ವ್ಯಾಯಾಮಗಳು ಶಾಖ-ಸಂಬಂಧಿತ ಕಾಯಿಲೆಗಳ ಹುಟ್ಟಿಗೆ ಕಾರಣವಾಗಬಹುದು. ತಲೆ ತಿರುಗುವಿಕೆ, ಶಾಖ ಸೆಳೆತ, ಬಿಸಿ ಗುಳ್ಳೆ, ಉಷ್ಣ ನಿಶ್ಶಕ್ತಿ, ಬಿಸಿಲಿನ ಹೊಡೆತ ಇವೇ ಮೊದಲಾದ ಶಾಖ-ಸಂಬಂಧಿತ ಕಾಯಿಲೆಗಳು ಸೌಮ್ಯವಾಗಿ ಪ್ರಾರಂಭವಾಗುತ್ತವೆ, ಆದರೆ ಚಿಕಿತ್ಸೆ ನೀಡದೆ ಬಿಟ್ಟರೆ ಹದಗೆಡುತ್ತವೆ. ಸಾಮಾನ್ಯ ಸಂದರ್ಭಗಳಲ್ಲಿ, ನಾವು ವ್ಯಾಯಾಮವನ್ನು ಮಾಡುವಾಗ ನಮ್ಮ ಚರ್ಮ ಮತ್ತು ರಕ್ತನಾಳಗಳು ಶಾಖಕ್ಕೆ ಹೊಂದಿಕೊಳ್ಳುತ್ತವೆ. ಹೆಚ್ಚು ಕಾಲ ತಾಪಮಾನ ಮತ್ತು ತೇವಾಂಶಕ್ಕೆ ಒಡ್ಡಿಕೊಂಡರೆ, ನೈಸರ್ಗಿಕವಾಗಿ ತಂಪಾಗಿಸುವ ವ್ಯವಸ್ಥೆಗಳು ವಿಫಲವಾಗುತ್ತದೆ.
ಆಯಾಸ, ಚರ್ಮ ತೆಳುವಾಗುವುದು, ತಲೆನೋವು, ಅತಿಯಾದ ಬೆವರುವಿಕೆ, ಸ್ನಾಯು ಸೆಳೆತ, ಕಡಿಮೆ ರಕ್ತದೊತ್ತಡ, ತ್ವರಿತ ಹೃದಯ ಬಡಿತ, ದೃಷ್ಟಿ ಸಮಸ್ಯೆಗಳು, ವಾಕರಿಕೆ ಅಥವಾ ವಾಂತಿ, ದೌರ್ಬಲ್ಯ, ತಲೆತಿರುಗುವಿಕೆ, ಗೊಂದಲ, ಸಿಡುಕುತನ, ಭಾರೀ ಬೆವರುವಿಕೆ ಇವುಗಳು ಗಮನಹರಿಸಬೇಕಾದ ಕೆಲವು ಅನಾರೋಗ್ಯದ ಚಿಹ್ನೆಗಳು. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಮನುಷ್ಯನ ಸ್ಥಿತಿಯು ಹದಗೆಡಬಹುದು, ಇದು ವೈದ್ಯಕೀಯ ತುರ್ತುಸ್ಥಿತಿಗೆ ಕಾರಣವಾಗುತ್ತದೆ.
ಪ್ರಥಮ ಚಿಕಿತ್ಸೆ
– ಮೇಲಿನ ರೋಗಲಕ್ಷಣಗಳಲ್ಲಿ ಯಾವುದನ್ನಾದರೂ ಅನುಭವಿಸುತ್ತಿದ್ದರೆ, ತತ್‌ಕ್ಷಣವೇ ವಿಶ್ರಾಂತಿ ಪಡೆಯಬೇಕು.
-ಕಾಲುಗಳನ್ನು ಸ್ವಲ್ಪ ಎತ್ತರಿಸಿ ಆರಾಮವಾಗಿ ಕುಳಿತುಕೊಳ್ಳುವಂತೆ ಅಥವಾ ಮಲಗುವಂತೆ ಮಾಡಬೇಕು.
-ತೆಂಗಿನಕಾಯಿ ನೀರು, ಎಳನೀರು, ನಿಂಬೆ
-ಪಾನಕದಂತಹ ದ್ರವಗಳನ್ನು ನಿಧಾನವಾಗಿ ಕುಡಿಯಿರಿ
-ವ್ಯಾಯಾಮದ ಸಮಯದಲ್ಲಿ, ಮೊದಲು ಮತ್ತು ಅನಂತರ ಸಾಕಷ್ಟು ನೀರನ್ನು ಕುಡಿಯಿರಿ ಮತ್ತು ಅದರೊಂದಿಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಬೇಕು.
ನಿಯಮಿತ ಸ್ನಾನ
-ದೀರ್ಘಕಾಲದವರೆಗೆ ಬೆವರಿನಿಂದ ತೇವವಾಗಿರುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
-ತ್ವಚೆಯನ್ನು ಒಣಗಿಸಲು ಕ್ರೀಮ್‌ಗಳನ್ನು ಬಳಸಿ.
-ದದ್ದುಗಳು, ತುರಿಕೆ ಅಥವಾ ಗುಳ್ಳೆಗಳು ಆಗಾಗ್ಗೆ ಸಂಭವಿಸಿದರೆ, ಸರಿಯಾದ ನಿರ್ವಹಣೆಗಾಗಿ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.
-ಮೆದುಳಿನ ಹಾನಿ, ಅಂಗ ವೈಫಲ್ಯದಂತಹ ಪ್ರಮುಖ ಸಮಸ್ಯೆಗಳನ್ನು ತಡೆಗಟ್ಟಲು ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ
-ಮುಂದಿನ ವಾರಕ್ಕೆ
ಡಾ| ರಾಜೇಶ್ ನಾವಡ ಜಿ.ವಿ.
ಅಸಿಸ್ಟೆಂಟ್ ಪ್ರೊಫೆಸರ್,
ಫಿಸಿಯೋಥೆರಪಿ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ