ವಿಜಯಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಕೌನ್ ಬನೇಗಾ ವಿದ್ಯಾಪತಿ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಮಾದರಿ ಕೆಲಸ ಎಂದು ಮೇಲ್ಮನೆ ಸದಸ್ಯ ಅರುಣ ಶಹಾಪುರ ಹೇಳಿದರು.
ಮಂಗಳವಾರ ನಗರದ ಪಿಡಿಜೆ ಪ್ರೌಡಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ತಾಲೂಕು
ಹಂತದಿಂದ ಜಿಲ್ಲಾ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕೊನೆಯ ಹಂತದ ಕೌನ್ ಬನೇಗಾ ವಿದ್ಯಾಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುವುದಕ್ಕಾಗಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅನುಕರಣೀಯ ಎಂದರು.
ಇಂದಿನ ಆಧುನಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಹೊಂದಿಕೊಳ್ಳುವಂತೆ ಮಾಡಲು ವಿವಿಧ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೌನ್ ಬನೇಗಾ ವಿದ್ಯಾಪತಿ ಎಂಬ ಕಾರ್ಯಕ್ರಮದ ಮೂಲಕ ಸರ್ಧೆ ನಡೆಸುತ್ತಿರುವ ಕಾರ್ಯ ಸ್ವಾಗತಾರ್ಹ ಕ್ರಮವಾಗಿದೆ. ಈ ಮೂಲಕ ವಿಜಯಪುರದ ಡಯಟ್ ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಇಂತಹ ವಿದ್ಯಾರ್ಥಿಗಳ ಒದುವ ಕಸುವು ಹೆಚ್ಚಿಸುವ ವಿನೂತನ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಲ್ಲಿ ಓದುವ ಹವ್ಯಾಸದೊಂದಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದು ಅವಶ್ಯವಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆ ಸಭೆಗಳಲ್ಲಿ ಈ ಯೋಜನೆ ಕುರಿತು ಪ್ರಸ್ತಾಪಿಸಿ ರಾಜ್ಯದೆಲ್ಲೆಡೆ ಅನ್ವಯವಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಡಯಟ್ ಪ್ರಾಚಾರ್ಯ ಎಂ.ಎಂ. ಸಿಂಧೂರ ಮಾತನಾಡಿ, ಫಲಿತಾಂಶ ಸುಧಾರಿಸಲು ಈ ಕಾರ್ಯಕ್ರಮ ಯೋಜಿಸಲಾಗಿದ್ದು, ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಹಮ್ಮಿಕೊಂಡು ಕೊನೆಯಲ್ಲಿ ಮೂರು ವಿದ್ಯಾರ್ಥಿಗಳನ್ನು ಕೌನ್ ಬನೇಗಾ ವಿದ್ಯಾಪತಿ ಘೋಷಣೆ ಮಾಡಲಾಗುವುದು. ಇದರಿಂದ ಫಲಿತಾಂಶ ಸುಧಾರಣೆಯಲ್ಲಿ ಬದಲಾವಣೆ ತಂದು ಈ ಸಲ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಎಂ.ಎ. ಗುಳೇದಗುಡ್ಡ ಪ್ರಾಸ್ತಾವಿಕ ಮಾತನಾಡಿ, ಈ ಕಾರ್ಯಕ್ರಮವು ಕಳೆದ ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿದ್ದು, ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ 1050 ವಿದ್ಯಾರ್ಥಿಗಳು ಪಾಲ್ಗೊಂಡು ಸ್ಪಂಧಿಸಿದ್ದಾರೆ. ಜಿಲ್ಲಾ ಹಂತಕ್ಕೆ 210 ವಿದ್ಯಾರ್ಥಿಗಳು ಆಗಮಿಸಿದ್ದು, ವಿವಿಧ ಹಂತಗಳಲ್ಲಿ ನಡೆಸಿ ಕೊನೆ ಹಂತದಲ್ಲಿ 9 ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಬುಧವಾರ ಕೊನೆ ಫಲಿತಾಂಶ ಘೋಷಣೆಯಾಗಲಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಇಡಿ ಕಾರ್ಯಕ್ರಮ ಡಯಟ್‌ನ ಮಾಗದರ್ಶನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎನ್.ವಿ. ಹೊಸೂರ, ಆರ್. ವೈ. ಕೊಣ್ಣೂರ, ಎಸ್.ಎಸ್. ವಾಡೇದ, ವಿಜಯ ಆಲಗೂರ, ಮುಜಾವರ, ಸುನೀತಾ ಪೂಜಾರಿ, ಹುಡೇದ, ಡಿ.ಜಿ. ಚಾಳಿಕಾರ, ಪಿ.ಎಸ್. ಇಜೇರಿ, ಬಸವರಾಜ ಚಲವಾದಿ, ಎಂ.ಆರ್. ಬಡಿಗೇರ ಸೇರಿದಂತೆ ಶಿಕ್ಷಣ ಇಲಾಖೆ ಅಧಿ ಕಾರಿಗಳು, ಜಿಲ್ಲೆಯ ವಿವಿಧ ಪ್ರೌಡಶಾಲೆಗಳಿಂದ ಆಗಮಿಸಿದ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.