Advertisement

ಚೀನಾ ಉತ್ಪನ್ನಗಳ ಬಹಿಷ್ಕಾರ: ಒಂದಿಷ್ಟು ಒಳಸುಳಿಗಳು  

06:00 AM Dec 06, 2018 | |

ಮೇಕ್‌ ಇನ್‌ ಇಂಡಿಯಾ ಚಳವಳಿ ಯಾವತ್ತೋ ಬರಬೇಕಾಗಿದ್ದ‌ದ್ದು ತಡವಾಗಿಯಾದರೂ ಬಂದಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆ ಕೂಡಾ ಆಗಿದೆ  ನಿಜ. ಇವೆಲ್ಲವೂ ದೇಶದ ಸಮಗ್ರ ಬೆಳವಣಿಗೆಗೆ ಅಗತ್ಯ. ಆದರೆ ಈ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲು ತಡೆಯಾಗಿರುವ ಕೆಲವೊಂದು ಒಳಸುಳಿಗಳಿಗಳಿವೆ. ಮೊದಲಿಗೆ ಇಂತಹದೊಂದು ಪರಿವರ್ತನೆ ಕಾರ್ಯರೂಪಕ್ಕೆ ಬರುವಲ್ಲಿ ಆಗಿರುವ ವಿಳಂಬಕ್ಕೆ ಕಾರಣಗಳು ಹಲವು. ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿರಬಹುದು, ಸಂಪನ್ಮೂಲದ ಕೊರತೆಯೋ, ಸ್ವಾರ್ಥ ಸಾಧಕರ ಸಂಕುಚಿತ ಮನಸ್ಥಿತಿಯೋ ಅಥವಾ ಇನ್ನೇನೋ ಇರಬಹುದು. ಆದಾಗ್ಯೂ ಒಂದು ಉತ್ತಮ ಉದ್ದೇಶದೊಂದಿಗೆ ಆರಂಭವಾದ ಈ ಚಳವಳಿ ಬೃಹತ್‌ ಉದ್ದಿಮೆಗಳು ರೈಲ್ವೆ, ವೈಮಾನಿಕ, ಆಂತರಿಕ್ಷ ಯಾನಕ್ಕೆ ಸಂಬಂಧಿಸಿದ ಉಪಕರಣಗಳನ್ನು ದೇಶದೊಳಗೆ ಉತ್ಪಾದನೆ ಮಾಡುವುದರಲ್ಲಿ ಮತ್ತು ಬೃಹತ್‌ ಕಾಮಗಾರಿಗಳಲ್ಲಿ ಸ್ವದೇಶಿ ನಿರ್ಮಾಣಕ್ಕೆ ಆದ್ಯತೆ ನೀಡುವಲ್ಲಿ ಯಶಸ್ಸು ಸಾಧಿಸಿದರೂ ತಳಮಟ್ಟದಲ್ಲಿ ಚಿಕ್ಕಪುಟ್ಟ ಪರಿಕರಗಳು ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಆಗದಿರುವುದರಿಂದ ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ. 

Advertisement

ತೊಂಭತ್ತರ ದಶಕದಲ್ಲಿ ಆಂತರಾಷ್ಟ್ರೀಯ ವಾಣಿಜ್ಯ ಒಪ್ಪಂದದ ಮೂಲಕ ಸಿಕ್ಕ ಅವಕಾಶವನ್ನು ಉಪಯೋಗಿಸಿ ವಿಶ್ವ ಮಾರುಕಟ್ಟೆ ಪ್ರವೇಶಿಸಿದ ಹಲವಾರು ದೇಶಗಳಂತೆ ಚೀನಾದ ವೈವಿಧ್ಯಮಯ ಉತ್ಪನ್ನಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು ಮಾತ್ರವಲ್ಲ, ಚೀನಾ ಉತ್ಪನ್ನಗಳನ್ನು ಬಿಟ್ಟಿರಲಾಗದಷ್ಟು ಮಟ್ಟಿಗೆ ಅವುಗಳು ವ್ಯವಸ್ಥೆಯೊಳಗೆ ಹಾಸುಹೊಕ್ಕಾಗಿದೆ. ಕಳಪೆ ಗುಣಮಟ್ಟದವುಗಳಾದರೂ ಈ ಉತ್ಪನ್ನಗಳು ಇಷ್ಟೊಂದು ಗಟ್ಟಿಯಾಗಿ ತಳವೂರಲು ಕಾರಣಗಳು ಬಹಳಷ್ಟಿವೆ. 

ಇತ್ತೀಚೆಗೆ ಅಮೆರಿಕ ಪ್ರವಾಸದ ಸಂದರ್ಭದಲ್ಲಿ  ಕೆಲವು ಶಾಪಿಂಗ್‌ ಮಳಿಗೆಗಳಲ್ಲಿ ಬಹಳಷ್ಟು ವಸ್ತುಗಳನ್ನು ನೋಡಿದೆ. ಸಂಖ್ಯೆಗಿಂತಲೂ ವೈವಿಧ್ಯತೆ, ಚಿತ್ತಾಕರ್ಶಕ ಹೊರಹೊದಿಕೆ, ಗಾಜಿನ, ಪಿಂಗಾಣಿಯ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ವಿದ್ಯುನ್ಮಾನ ಸಾಮಗ್ರಿಗಳ ಅಗಾಧ ಸಂಗ್ರಹ! ಇದರಲ್ಲಿ ಶೇಕಡಾ 90 ಚೀನಾ ತಯಾರಿಕೆಯವುಗಳು. ಅಂಕಿಅಂಶಗಳು ಹೇಳುವಂತೆ ಚೀನಾದ ಆಮದು ಪ್ರಮಾಣ ಅಮೆರಿಕದ ಒಟ್ಟು ಆಮದಿನ ಅರ್ಧಕ್ಕಿಂತ ಹೆಚ್ಚಂತೆ.ಬಹುಶಃ ಎರಡನೇ ಸ್ಥಾನ ಭಾರತಕ್ಕೆ. ಆದರೆ ಭಾರತದ ವಸ್ತುಗಳು ಕೇವಲ ಆಹಾರ ಸಾಮಗ್ರಿಗಳು ಮತ್ತು ವಸ್ತ್ರಗಳಿಗೆ, ಒಂದಿಷ್ಟು ಸಾಮಗ್ರಿಗಳಿಗೆ ಸೀಮಿತ. ಆದರೆ ಚೀನಾದ ಉತ್ಪನ್ನಗಳ ಗಾತ್ರ ಮಾತ್ರ ಅಗಾಧ, ಆಕರ್ಷಣೆ ಹೊರನೋಟಕ್ಕೆ ಮಾತ್ರ. ಗುಣಮಟ್ಟ ತೀರಾ ಕಡಿಮೆ. ಆದರೂ ಅಮೆರಿಕದಂತಹ ಬೃಹತ್‌ ರಾಷ್ಟ್ರದ ಮಾರುಕಟ್ಟೆಯನ್ನು ಇಷ್ಟು ದೊಡ್ಡ ಮಟ್ಟಿಗೆ ಆಕ್ರಮಿಸಿಕೊಂಡಿರುವುದು ಆಶ್ಚರ್ಯವೆನಿಸಿದರೂ, ಅವರದು ಬಾಹ್ಯ ಆಕರ್ಷಣೆಯಾದರೆ ಭಾರತದ ತಯಾರಿಕೆಯ ಸೀಮಿತ ವಸ್ತುಗಳ ಗುಣಮಟ್ಟ ಮಾತ್ರ ಅತ್ಯುತ್ತಮ. ಒಂದೇ ಮಾದರಿಯ, ಭಾರತದಲ್ಲಿ ಹೆಚ್ಚು ಬೆಲೆಗೆ ಸಿಗುವ ವಸ್ತುಗಳ ಗುಣಮಟ್ಟಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ದುಪ್ಪಟ್ಟು. ಅದೂ ಕೂಡಾ ಭಾರತದಲ್ಲಿ ತಯಾರಾದ ವಸ್ತುಗಳು ದೇಶದೊಳಗೆ ಸಿಗುವುದಕ್ಕಿಂತ ಕಡಿಮೆ ದರದಲ್ಲಿ? ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ, ಆದರೆ ಉತ್ತರ ಒಂದೇ. ವಿದೇಶಿ ವಸ್ತುಗಳ ಬಗ್ಗೆ ನಮಗೆ ಇರುವ ವ್ಯಾಮೋಹ  ಇವಿಷ್ಟು ಹೊರಗಡೆ ಕಾಣಿಸುವ ಕಾರಣಗಳಾದರೆ, ಚೀನಾ ಉತ್ಪನ್ನಗಳ ಉಪಯೋಗ, ಅದರಿಂದ ಆ ದೇಶಕ್ಕೆ ದೊರಕುವ ಆದಾಯ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಉಪಯೋಗಿಸಲ್ಪಡುತ್ತದೆ. 

 ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲಿ ಯಶಸ್ವಿಯಾಗಿದ್ದ ಸ್ವದೇಶಿ ಚಳುವಳಿ ಮಾದರಿಯ ಏಕತೆ ಈಗ ಸಾಧ್ಯವಿಲ್ಲ, ಏಕೆಂದರೆ ಆಗ ಸ್ವಾತಂತ್ರ್ಯ ಒಂದೇ ಗುರಿಯಾಗಿತ್ತು, ಬೇರೆಲ್ಲಾ ಗೌಣ, ಆದರೆ ಈಗ  ಜಾತಿ, ರಾಜಕೀಯ ಹಗ್ಗ ಜಗ್ಗಾಟ, ಇಂತಹ ಚಳವಳಿ ಯಶಸ್ವಿಯಾಗಲು ಅಡ್ಡವಾಗಿದೆ.  

ಇದಕ್ಕಿಂತಲೂ ಚೀನಾದ ಉತ್ಪನ್ನಗಳ ಪ್ರಚಾರಕ್ಕೆ ಮಾಡುವ ವಿಧಾನ ಮತ್ತು ವೆಚ್ಚ ಈ ಚಳವಳಿಯ ಯಶಸ್ಸಿಗೆ ದೊಡ್ಡ ತಡೆಯಾಗಿದೆ. ಉದಾಹರಣೆಗೆ ಒಪ್ಪೊ, ವೀವೋ ಮೊಬೈಲುಗಳನ್ನು  ಜಾಹೀರಾತು ಮಾಡಲು ಕ್ರೀಡಾರಂಗದ ಪ್ರಾಯೋಜಕತ್ವಕ್ಕೆ, ಟಿವಿ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ವೆಚ್ಚ ಮಾಡುತ್ತಾರೆ, ಇವುಗಳ ಪ್ರಚಾರ ಮಾಡುವ ಸಿನಿಮಾ ನಟ-ನಟಿಯರ, ಕ್ರಿಕೆಟ್‌ ಆಟಗಾರರ ಅಭಿಮಾನಿಗಳು ಅವರ ಆರಾಧ್ಯ ದೇವರುಗಳು ಶಿಫಾರಸು ಮಾಡುವ ಉತ್ಪನ್ನಗಳನ್ನು ಕಣ್ಣು ಮುಚ್ಚಿ ನಂಬುವುದ‌ರಿಂದ ಇಂತಹ ಉತ್ಪನ್ನಗಳಿಗೆ ಪರ್ಯಾಯ ಲಭ್ಯವಿದ್ದರೂ ಬಹಿಷ್ಕಾರ ಹೇಗೆ ನಿರೀಕ್ಷಿಸಲು ಸಾಧ್ಯ? ಇದೊಂದು ಏಳು ಸುತ್ತಿನ ಕೋಟೆಗೂ ಮಿಗಿಲಾದ ವಿಷ ವರ್ತುಲದಂತೆ. ಮೇಲಾಗಿ ಮಾರಾಟಗಾರರಿಗೆ ಲಾಭಾಂಶದ ಆಮಿಷ, ಪ್ರಚಾರದ ಭರಾಟೆ ಇವುಗಳನ್ನು ದಾಟಿ ಬರುವುದು ಸುಲಭ ಸಾಧ್ಯವೇ?

Advertisement

ಇನ್ನೂ ಆಘಾತಕಾರಿ ಸಂಗತಿಯೆಂದರೆ ಭಾರತವೂ ಸೇರಿ ಹಲವಾರು ದೇಶಗಳ ಪತ್ರಕರ್ತರಿಗೆ ಚೀನಾದಲ್ಲಿ ಒಂದು ಕಾರ್ಯಾಗಾರ ಏರ್ಪಡಿಸಿ ಹತ್ತು ತಿಂಗಳ ಕಾಲ ಸುದೀರ್ಘ‌ ತರಬೇತಿ ನೀಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ವರದಿಯಾಗಿದೆ. ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವ ಪತ್ರಿಕಾ ಮಾಧ್ಯಮಗಳ ಪ್ರತಿನಿಧಿಗಳಿಗೆ ವೈಭವೋಪೇತ ಸೌಲಭ್ಯಗಳನ್ನು ನೀಡಿ ತರಬೇತಿಯ ಹೆಸರಿನಲ್ಲಿ ಭಾರತವೂ ಸೇರಿದಂತೆ ಹಲವಾರು ದೇಶಗಳ ಮಾಧ್ಯಮ ವಲಯವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ವಾತಾವರಣದಲ್ಲಿ ಚೀನಾದ ಉತ್ಪನ್ನಗಳ ಜನಪ್ರಿಯತೆ ಕುಸಿಯುವುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ?

ಮೋಹನದಾಸ ಕಿಣಿ ಕಾಪು  

Advertisement

Udayavani is now on Telegram. Click here to join our channel and stay updated with the latest news.

Next