Advertisement
ಅನೇಕರು ಯಾವುದಾದರೂ ಆದೀತೂ ಈ ಕೆಮಿಸ್ಟ್ರಿಯ ಸಹವಾಸವಂತೂ ಬೇಡವೆ ಬೇಡ ಎಂದು ಕುಳಿತುಬಿಡುತ್ತಾರೆ. ಅದಕ್ಕೆ ಮುಖ್ಯ ಕಾರಣವೇ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯದ ನೂರಾರು ರಾಸಾಯನಿಕ ಕ್ರಿಯೆಗಳು. ಅರ್ಥಮಾಡಿಕೊಂಡು ಓದಿದರೆ ಎಲ್ಲವೂ ಸರಳ ಎಂದು ಎಷ್ಟೋ ಬಾರಿ ಉಪನ್ಯಾಸಕರು ಬೊಬ್ಬೆ ಹೊಡೆದರೂ ರಸಾಯನಶಾಸ್ತ್ರವನ್ನು ಹಲವರು ಅಸ್ಪಶ್ಯವೆಂಬಂತೆ ಕಂಡು ಸಮೀಪಕ್ಕೆ ಹೋಗಲೂ ಹೆದರುತ್ತಾರೆ.
Related Articles
Advertisement
ಕೆಲವೊಮ್ಮೆ ಕೆಲವೊಂದು ವಿಷಯಗಳು ಗಾಬರಿ ಹುಟ್ಟಿಸಿದರೂ ನಮ್ಮ ದೇಹದ ಮೇಲೆ ಗಂಭೀರವಾದ ಪರಿಣಾಮವನ್ನೇನೂ ಉಂಟುಮಾಡಲಾರದು. ಕೆಲ ದಿನಗಳ ಹಿಂದೆಯಷ್ಟೇ ಪಿಕ್ರಿಕ್ ಆಮ್ಲ ಎಂಬ ರಾಸಾಯನಿಕದ ಒಂದೆರಡು ಹನಿಗಳು ಅಚಾನಕ್ಕಾಗಿ ನನ್ನ ಅಂಗೈಯ ಮೇಲೆ ಬಿದ್ದವು. ಎಷ್ಟೇ ತೊಳೆದರೂ ಆ ರಾಸಾಯನಿಕದ ಗಾಢ ಹಳದಿ ಬಣ್ಣ ಮಾಸಲೇ ಇಲ್ಲ. ದಿನ ಒಂದಾಯಿತು ಎರಡಾಯಿತು ಆ ಬಣ್ಣ ನನ್ನ ಕೈಯನ್ನು ಬಿಟ್ಟು ಹೋಗಲು ಸರ್ವಥಾ ಕೇಳಲಿಲ್ಲ!
ಇನ್ನೇನು ಇದು ಶಾಶ್ವತವಾಗಿ ನನ್ನ ಕೈಯಲ್ಲೇ ಉಳಿಯಬಹುದೇ ಎಂದು ಒಮ್ಮೆ ಯೋಚಿಸುತ್ತಿರುವಾಗಲೇ ಒಂದೆರಡು ದಿನಗಳಲ್ಲಿ ಆಮ್ಲ ಬಿದ್ದ ಜಾಗದ ಚರ್ಮ ಬಣ್ಣಸಮೇತವಾಗಿ ಎದ್ದುಹೋಗಿ ಹೊಸ ಚರ್ಮ ಕೈಯ ಭಾಗವನ್ನು ಹೊದ್ದುಕೊಂಡಿತು. ಈ ರೀತಿಯ ತರಲೆ ಬುದ್ಧಿಯೂ ಕೆಲವು ರಾಸಾಯನಿಕಗಳಿಗಿದೆ!
ಪ್ರಯೋಗಗಳನ್ನು ಉದಾಸೀನತೆಯಿಂದ ಮಾಡದೇ ಅನುಭವಿಸುತ್ತಾ ಅದರಿಂದ ಉಂಟಾಗುವ ಬದಲಾವಣೆಗಳನ್ನು ಕಂಡು ಖುಷಿಪಡಬೇಕು ಎಂದು ಪ್ರತಿನಿತ್ಯವೂ ಉಪನ್ಯಾಸಕರೊಬ್ಬರು ಹೇಳುತ್ತಲೇ ಇರುತ್ತಾರೆ. ಅದು ಅಕ್ಷರಶಃ ಸತ್ಯವೂ ಹೌದು. ನಾವು ಸರಿಯಾದ ಗಮನವಹಿಸಿ ಪ್ರಯೋಗಗಳನ್ನು ಮಾಡುತ್ತಾ ಹೋದಂತೆ ಕೆಲವೊಂದು ಸನ್ನಿವೇಷಗಳಲ್ಲಿ ಉಂಟಾಗುವ ಬದಲಾವಣೆಗಳು ಸಹಜವಾಗಿ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ.
ಪ್ರಯೋಗಗಳನ್ನು ಮಾಡುವಾಗ ಸ್ವಲ್ಪ ಮೈಮರೆತರೂ ಏನಾದರೊಂದು ಅಚಾತುರ್ಯ ನಡೆದಿರುತ್ತದೆ. ಪ್ರಯೋಗಶಾಲೆಯಲ್ಲಿ ನಡೆಯುವ ಅವಾಂತರಗಳನ್ನು ಹೇಳಲು ಹೊರಟರೆ ಅದೊಂದು ದೀರ್ಘ ಕಾದಂಬರಿಯೇ ಆಗಬಹುದು. ಕಾದಂಬರಿಗೆ ಒಪ್ಪುವ ಪಾತ್ರಗಳೂ ಅಲ್ಲಿ ಬಹಳಷ್ಟು ಸಿಗುತ್ತವೆ. ರಸಾಯನಶಾಸ್ತ್ರವೆಂಬ ಜಗತ್ತಿನಲ್ಲಿ ಹೊರಳುತ್ತಿರುವ ಪುಟ್ಟ ಹುಳು ನಾನು. ಅದರ ಆಳ ಅಗಲ ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ಆದರೆ ರಸಾಯನಶಾಸ್ತ್ರದ ರಸಪಾಕದ ಅಲ್ಪ ಸವಿಯುಂಡ ತೃಪ್ತಿ ನನಗಿದೆ.
-ವಿಕಾಸ್ ರಾಜ್
ವಿ.ವಿ. ಕಾಲೇಜು, ಮಂಗಳೂರು