ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ನಡೆದ ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ರಾಶಿಗಟ್ಟಲೇ ತ್ಯಾಜ್ಯ ಸೃಷ್ಟಿಯಾಗಿದ್ದು, ವಿಲೇವಾರಿಗೆ ಪೌರಕಾರ್ಮಿಕರು ಪರದಾಡುವಂತಾಯಿತು.
ಭಾನುವಾರ ಮಧ್ಯರಾತ್ರಿ ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ನಡೆದ ಹೊಸ ವರ್ಷಾಚರಣೆಯಲ್ಲಿ ಸಾವಿರಾರು ಜನರು ಭಾಗಿಯಾಗಿ, ಹೂಸ ವರ್ಷ ಸಡಗರದಿಂದ ಸ್ವಾಗತಿಸಿದ್ದು, ಇದರೊಂದಿಗೆ ತಾವು ಸೇವಿಸಿದ ಪಾನೀಯ ಬಾಟಲಿ, ಆಹಾರದ ಪ್ಲೇಟ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ.
ತ್ಯಾಜ್ಯವನ್ನು ತೆರವುಗೊಳಿಸಲು ಪೌರಕಾರ್ಮಿಕರು ಕಷ್ಟ ಅನುಭವಿಸಬೇಕಾಯಿತು. ಸಾಮಾನ್ಯ ದಿನಗಳಲ್ಲಿ ಈ ರಸ್ತೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಮುಗಿಯುತ್ತಿದ್ದ ಸ್ವತ್ಛತಾ ಕಾರ್ಯ, ಸೋಮವಾರ ಸಂಜೆಯವರೆಗೆ ನಡೆಯಿತು.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಸೇರಿದಂತೆ ಇಂದಿರಾನಗರ, ಕೋರಮಂಗಲ ಸೇರಿ ನಗರದ ಪ್ರಮುಖ ಬಡಾವಣೆಗಳಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿರುವುದರಿಂದ ಲಾರಿಗಟ್ಟಲೇ ತ್ಯಾಜ್ಯ ಸೃಷ್ಟಿಯಾಗಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ನುಸುಕಿನಿಂದಲೇ ಸೋಮವಾರ ಸ್ವತ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ತ್ಯಾಜ್ಯ ವಿಲೇವಾರಿಗಾಗಿ ಹೆಚ್ಚುವರಿ ಪೌರಕಾರ್ಮಿಕರು ಹಾಗೂ ವಾಹನಗಳನ್ನು ನಿಯೋಜಿಸರಿದರಿಂದ ಶೀಘ್ರ ತ್ಯಾಜ್ಯ ತೆರವುಗೊಳಿಸಲು ಸಾಧ್ಯವಾಯಿತು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.