ಚಾಮರಾಜನಗರ: ಯಾವುದೇ ಚುನಾವಣೆ ಯಶಸ್ಸು ಕಾಣಬೇಕಾದರೆ ಅಧಿಕಾರಿಗಳಿಗೆ ಸಮರ್ಪಕ ಹಾಗೂ ಪರಿಣಾಮಕಾರಿ ತರಬೇತಿ ಬಹಳ ಮುಖ್ಯವಾಗಿದೆ. ಚುನಾವಣೆ ಸುಗಮವಾಗಿ ನಡೆಯಲು ತರಬೇತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಚಾಮರಾಜನಗರ ಲೋಕಸಭಾ ಚುನಾವಣೆಯ ಕ್ಷೇತ್ರ ವ್ಯಾಪ್ತಿಗೆ ಬರುವ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ನಿಯೋಜಿತರಾಗಿರುವ ಜಿಲ್ಲಾ ಮಟ್ಟದ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಹಮ್ಮಿ ಕೊಳ್ಳಲಾಗಿದ್ದ ತರಬೇತಿ, ಕಿರು ಪರೀಕ್ಷೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಚುನಾವಣೆಯ ಕರ್ತವ್ಯ ಅತ್ಯಂತ ಜವಾಬ್ದಾರಿಯುತವಾಗಿದೆ. ಅಧಿಕಾರಿ ಗಳಿಗೆ ಮಾಹಿತಿಗಳ ಕೊರತೆ ಆಗಬಾರದು. ತರಬೇತಿಯನ್ನು ಲಘುವಾಗಿ ಪರಿಗಣಿ ಸದೇ, ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲಾ ಮಾಹಿತಿ ತಿಳಿದುಕೊಳ್ಳಬೇಕು. ನಿಮ್ಮ ಮೂಲಕ ಮುಕ್ತ ಶಾಂತಿಯುತ, ನ್ಯಾಯ ಸಮ್ಮತ ಚುನಾವಣೆ ನಡೆಯಲು ಇಂತಹ ತರಬೇತಿ ಸಹಾಯಕವಾಗಲಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಇದೇ ರೀತಿ ಹೆಚ್ಚಿನ ತರಬೇತಿ ಕಾರ್ಯಾಗಾರಗಳು ನಡೆದು ಜಿಲ್ಲೆಯಲ್ಲಿ ಯಶಸ್ವಿ ಮತದಾನವಾಗಲಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಪ್ರೋ. ಕೃ.ಪ.ಗಣೇಶ್ ಮಾತನಾಡಿ, ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ವಿವರವಾಗಿ ಅಧಿಕಾರಿಗಳಿಗೆ ತಿಳಿಸಿದರು. ಅಂಚೆ ಮತ ಪತ್ರ ಮತ್ತು ಇ.ಡಿ.ಸಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ವಿದ್ಯಾಯಿನಿ ಮಾತನಾಡಿ, ಅಂಚೆ ಮತ ಪತ್ರ ಮತ್ತು ಇ.ಡಿ.ಸಿ ಕುರಿತಂತೆ ವಿವರವಾಗಿ ತಿಳಿಸಿದರು. ಕರ್ತವ್ಯದಲ್ಲಿ ನಿರತರಾದ ಸಿಬ್ಬಂದಿವರ್ಗ ಇದರ ಪ್ರಯೋಜನ ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೋ. ಸವೀನ್ ವಿದ್ಯುನ್ಮಾನ ಮತಯಂತ್ರದ ಕುರಿತು ವಿವರವಾಗಿ ತಿಳಿಸಿ ಪ್ರಾತ್ಯಕ್ಷಕೆ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸಮ್ಮುಖದಲ್ಲಿ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಕಿರುಪರೀಕ್ಷೆ ನಡೆಸಲಾಯಿತು. ನೋಡಲ್ ಅಧಿಕಾರಿ ವೃಷಭೇಂದ್ರ ಉಪಸ್ಥಿತರಿದ್ದರು.