ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಿ ವಿಜಯ ಮಲ್ಯರ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ನೆರವಾಗಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ನೆರವಾಗಿದ್ದಾರೆ. ಹೀಗೆಂದು ಬಿಜೆಪಿ ಆರೋಪಿಸಿದೆ. ಅದಕ್ಕೆ ಸಂಬಂಧಿಸಿದಂತೆ ಎರಡು ಪತ್ರಗಳ ಅಂಶಗಳನ್ನೂ ಅದು ಸೋಮವಾರ ಬಿಡುಗಡೆ ಮಾಡಿದೆ. ಈ ಮೂಲಕ ಮಲ್ಯರ ಮುಳುಗುತ್ತಿದ್ದ ಹಡಗಾಗಿದ್ದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ನೆರವಿನ ಹಸ್ತ ಚಾಚಲಾಗಿದೆ ಎಂದು ಅದು ಆರೋಪಿಸಿದೆ.
ಹೀಗಾಗಿ ಈ ಅಂಶಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ವಕ್ತಾರ ಸಂಭಿತ್ ಪಾತ್ರ ಆಗ್ರಹಪಡಿಸಿದ್ದಾರೆ.
ಮಲ್ಯ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಬರೆದಿರುವ ಪತ್ರವೊಂದರಲ್ಲಿ, ಬ್ಯಾಂಕ್‌ಗಳು ಸಾಲ ನೀಡಲು ಮಧ್ಯಪ್ರವೇಶಿಸಿ ನೆರವಾಗಬೇಕೆಂದು ಕೋರಿದ್ದರು ಎಂದು ಹೇಳಲಾಗಿದೆ. ಇನ್ನೊಂದು ಪತ್ರದಲ್ಲಿ ತಮಗೆ ಪೂರಕ ಬೆಳವಣಿಗೆಗಳಾಗಿದ್ದರಿಂದ ನಿರಾಳಗೊಂಡಿದ್ದೇನೆಂದು ತಿಳಿಸಿದ್ದಾರೆ. ಇದರ ಜತೆಗೆ ಕಿಂಗ್‌ಫಿಶರ್‌ನ ಆದಾಯ ತೆರಿಗೆ ದಾಖಲೆಗಳನ್ನು ಪರಿಶೀಲಿಸುವಲ್ಲಿ ಮನಮೋಹನ್ ಸಿಂಗ್ ಮಧ್ಯಪ್ರವೇಶದ ಬಳಿಕವೇ ಮೃದು ಧೋರಣೆ ತಳೆಯಲಾಯಿತೆಂದು ಸಂಬಿತ್ ಆರೋಪಿಸಿದ್ದಾರೆ.
ಮತ್ತೂಂದು ಪತ್ರ ಉಲ್ಲೇಖೀಸಿದ ಸಂಬಿತ್, ಪ್ರಕರಣದಲ್ಲಿ ಮಾಜಿ ಸಚಿವ ಚಿದಂಬರಂ ಪಾತ್ರದ ಬಗ್ಗೆಯೂ ವಿವರಿಸಿದ್ದಾರೆ. 2015ರಲ್ಲಿಯೇ ಭಾರತೀಯ ಸ್ಟೇಟ್ ಬ್ಯಾಂಕ್ ವಿಜಯ ಮಲ್ಯರ ವಿಮಾನ ಯಾನ ಸಂಸ್ಥೆಗೆ ಸಾಲ ನೀಡುವುದಕ್ಕೆ ವಿರೋಧಿಸಿದಾಗ ಚಿದಂಬರಂ ಆಕ್ಷೇಪಿಸಿದ್ದರು. ಜತೆಗೆ ಯುಬಿ ಸಮೂಹವನ್ನು ಡಿಯಾಜಿಯೋ ಕಂಪನಿಯೊಂದಿಗೆ ವಿಲೀನಗೊಳಿಸುವುದಕ್ಕಾಗಿ ಎಸ್‌ಬಿಐ ನಿರಾಕ್ಷೇಪಣಾ ಪತ್ರ ನೀಡಲು ಮಧ್ಯಪ್ರವೇಶ ಮಾಡಬೇಕೆಂದು ಅಂದಿನ ವಿತ್ತಮಂತ್ರಿ ಚಿದಂಬರಂಗೆ ಮಲ್ಯ ಮನವಿ ಮಾಡಿದ್ದರು ಎಂದು ಸಂಬಿತ್ ಹೇಳಿದ್ದಾರೆ.
ಆರೋಪ ನಿರಾಕರಣೆ
ಮಲ್ಯಗೆ ಸಾಲ ನೀಡುವಲ್ಲಿ ತಮ್ಮ ಪಾತ್ರವಿದೆಯೆಂದು ಬಿಜೆಪಿ ಮಾಡಿರುವ ಆರೋಪವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿರಾಕರಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮಾಡಿದ್ದರ ಕುರಿತು ಸಮಾಧಾನವಿದೆ. ನಾನು ಈ ದೇಶದ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ. ತನಗೆ ಬಂದಿದ್ದು ಸಾಮಾನ್ಯ ಪತ್ರಗಳು ಮಾತ್ರ. ನನ್ನ ಸ್ಥಾನದಲ್ಲಿ ಇರುವ ಯಾರೇ ಇದ್ದರೂ ಅಂತಹ ಪತ್ರಗಳೊಂದಿಗೆ ವ್ಯವಹರಿಸಬೇಕಾಗಿ ಬರುತ್ತಿತ್ತು ಎಂದು ಮಾಜಿ ಪ್ರಧಾನಿ ಸ್ಪಷ್ಟ ಪಡಿಸಿದ್ದಾರೆ.
ಶೀಘ್ರ ಮೊದಲ ಚಾರ್ಜ್‌ಶೀಟ್
ಐ ಡಿಬಿಐ ಸಾಲ ಪ್ರಕರಣದಲ್ಲಿ ಉದ್ಯಮಿ ವಿಜಯ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಶೀಘ್ರವೇ ಆರೋಪಪಟ್ಟಿ ಸಲ್ಲಿಸಲಿದೆ. ಅದರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಮತ್ತು ಐಡಿಬಿಐ ಬ್ಯಾಂಕ್‌ನ ಉದ್ಯೋಗಿಗಳ ಹೇಳಿಕೆಗಳು ಮತ್ತು ಎರಡೂ ಸಂಸ್ಥೆಗಳಿಗಾಗಿ ಖರೀದಿಸಿದ ಆಸ್ತಿ ವಿವರಗಳನ್ನು ಒಳಗೊಳ್ಳಲಿದೆ. ಅದಕ್ಕೆ ಪೂರಕವಾಗಿ ಇ.ಡಿ. ದಾಖಲೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.