ದಾವಣಗೆರೆ: ನಿನ್ನೆಯಷ್ಟೆ ಬೆಂಗಳೂರಿನಲ್ಲಿ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಶನಿವಾರ ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಸ್ವಪಕ್ಷ ಬಿಜೆಪಿ ವಿರುದ್ಧವೇ ಹರಿಹಾಯ್ದಿದ್ದಾರೆ.
ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ. ಇಷ್ಟು ದಿನವಾದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಯಡಿಯೂರಪ್ಪ ನವರನ್ನು ಕಡೆಗಣೆಸಿದ್ದು ಅದರ ಶಾಪದಿಂದಲೇ ಬಿಜೆಪಿಗೆ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮವರ ತಪ್ಪಿನಿಂದಲೇ ನಾವೆಲ್ಲರೂ ಸೋಲುವಂತಾಯಿತು.ಕಾಂಗ್ರೆಸ್ ಗೆ ನನ್ನ ಅವಶ್ಯಕತೆ ಇಲ್ಲ. ಸೋತವರನ್ನು ತೆಗೆದುಕೊಂಡು ಅವರು ಏನು ಮಾಡುತ್ತಾರೆ? ಅವರು ನನ್ನನ್ನು ಪಕ್ಷಕ್ಕೆ ಆಹ್ವಾನ ಮಾಡಿಲ್ಲ ನಾನೂ ಕೇಳಿಲ್ಲ. ಸಿದ್ದರಾಮಯ್ಯ, ಡಿಕೆಶಿ ಜತೆ ರಾಜಕೀಯ ಮೀರಿದ ಸ್ನೇಹ ಇದೆ ಎಂದರು.
ನಾನು ದಾವಣಗೆರೆ ಲೋಕಾಸಭೆ ಕ್ಷೇತ್ರದ ಬಿಜೆಪಿ ಯ ಪ್ರಬಲ ಟಕೆಟ್ ಅಕಾಂಕ್ಷಿ. ನನಗೇ ಟಿಕೆಟ್ ಸಿಗುವ ಆತ್ಮವಿಶ್ವಾಸ ಇದೆ. ಪ್ರತಿ ಬೂತ್ ಮಟ್ಟದಲ್ಲಿ ಮೋದಿ ಸಾಧನೆಯ ಕರಪತ್ರ ಹಂಚುವ ಕೆಲಸ ಮಾಡಿದ್ದೇವೆ.ರಾಜ್ಯದಲ್ಲಿ ನಾನು ಮಾಡಿದ ಕೆಲಸ ಯಾರೂ ಮಾಡಿಲ್ಲ ಎಂದರು.
ನನಗೆ ಪ್ರಧಾನಿ ಮೋದಿ ಎಷ್ಟು ಮುಖ್ಯವೋ ಅಷ್ಟೇ ಯಡಿಯೂರಪ್ಪ ಅವರು ಕೂಡ ಮುಖ್ಯ. ಕರ್ನಾಟಕದ ರಾಜಕಾರಣವನ್ನು ಎಲ್ಲೋ ಕೂತು ಯಾರೋ ಕಂಟ್ರೋಲ್ ಮಾಡ್ತಾ ಇದಾರೆ. ಇದು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ವರ್ಚಸ್ಸು ಇರುವ ನಾಯಕರು ಬೇಕು.ಯಡಿಯೂರಪ್ಪ ನವರ ನಾಯಕತ್ವದಿಂದ ಮಾತ್ರ ಲೋಕಸಭಾ ಚುನಾವಣೆ ಗೆಲ್ಲಲು ಸಾಧ್ಯ. ಯಡಿಯೂರಪ್ಪ ನವರನ್ನು ಕಡೆಗಣಿಸಿ ಚುನಾವಣೆ ಗೆ ಹೋದರೆ ಬಹಳ ಕಷ್ಟ ಇದೆ ಎಂದರು.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನನಗೆ ಸಿಗುವ ಸಚಿವ ಸ್ಥಾನವನ್ನು ನಮ್ಮವರೇ ತಪ್ಪಿಸಿದ್ದಾರೆ. ಜಿಲ್ಲೆಯಲ್ಲಿ ನನಗೆ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಗೆ ಸಚಿವ ಸ್ಥಾನ ತಪ್ಪಿಸಿದ್ದರು. ಅದರ ಬಗ್ಗೆ ನನಗೆ ಬಹಳ ನೋವು ಇದೆ ಎಂದರು ರೇಣುಕಾಚಾರ್ಯ ಬೇಸರ ಹೊರಹಾಕಿದರು.