ನವದೆಹಲಿ: ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಬದಲಾಗಬೇಕೆಂಬ ಕೂಗು ಶುರುವಾಗಿ ಬಹಳ ವರ್ಷಗಳೇ ಆದವು. ಅಷ್ಟಾದರೂ ನಾಯಕತ್ವದಲ್ಲೇನು ಬದಲಾವಣೆ ಕಾಣುತ್ತಿಲ್ಲ. ಇದರ ನಡುವೆ ಪ್ರತೀ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲೂ ಮುಂದುವರಿದಿದೆ.
ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬೆನ್ನಲ್ಲೇ ಹಿರಿಯ ತಲೆಗಳ ಅಸಮಾಧಾನ ಮತ್ತೂಮ್ಮೆ ತೀವ್ರವಾಗಿದೆ. ಕಳೆದ ವರ್ಷವಷ್ಟೇ ಕಾಂಗ್ರೆಸ್ ತೊರೆದಿದ್ದ ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್, ನೇರವಾಗಿ ಕಾಂಗ್ರೆಸ್ ಸೋಲನ್ನು ಟೀಕಿಸಿದ್ದಾರೆ. ಅಲ್ಲದೇ ತೃಣಮೂಲ ಕಾಂಗ್ರೆಸ್ ಮತ್ತು ಆಪ್ ಅನ್ನು ರಾಷ್ಟ್ರೀಯ ಪರ್ಯಾಯ ಪಕ್ಷಗಳು ಎಂದು ಗುರ್ತಿಸಿದ್ದಾರೆ.
ಇದು ಬದಲಾವಣೆಯನ್ನು ಸೂಚಿಸುತ್ತಿರುವ ಫಲಿತಾಂಶ. ಇದನ್ನು ಒಪ್ಪಿಕೊಳ್ಳಬೇಕು. ಒಂದಂತೂ ಸ್ಪಷ್ಟ , ಗಾಂಧಿ ನಾಯಕತ್ವ ಕಾಂಗ್ರೆಸ್ ಅನ್ನು ಗೆಲ್ಲಿಸುವ ಸ್ಥಿತಿಯಲ್ಲಿಲ್ಲ, ಅವರು ಭದ್ರಸ್ಥಿತಿಯಲ್ಲಿಲ್ಲ. ಪ್ರಸ್ತುತ ಕಾಂಗ್ರೆಸನ್ನು ನಿಯಂತ್ರಿಸುತ್ತಿರುವ ವ್ಯಕ್ತಿಗಳನ್ನು ದೀರ್ಘಾವಧಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸೋನಿಯಾ ಗಾಂಧಿಗೆ ಪಕ್ಷದ ನಿರ್ಧಾರಗಳಲ್ಲಿ ತಮ್ಮ ಮುದ್ರೆಯೊತ್ತುವ ಶಕ್ತಿಯುಳಿದಿಲ್ಲ ಎಂದು ಅಶ್ವನಿ ಹೇಳಿದ್ದಾರೆ. ಇದರ ಮಧ್ಯೆ ತಮ್ಮನ್ನು ಸೋನಿಯಾ ನಿಷ್ಠಾವಂತ ಎಂದೂ ಕರೆದುಕೊಂಡಿದ್ದಾರೆ.
ಪ್ರಸ್ತುತ ಪಂಜಾಬ್‌ನಲ್ಲಿನ ಫಲಿತಾಂಶವನ್ನು ತಾನು ಮೊದಲೇ ಹೇಳಿದ್ದೆ ಎಂದೂ ಅಶ್ವನಿ ಹೇಳಿದ್ದಾರೆ. ನನ್ನನ್ನು ನಾನೇ ಹೊಗಳಿಕೊಳ್ಳಲು ಬಯಸುವುದಿಲ್ಲ. ಆದರೆ ಪಂಜಾಬನ್ನು ಅಪ್ಪಳಿಸಲು ಕಾದಿರುವ ಸುನಾಮಿಯೇ ಆಪ್ ಎಂದು ಮೊದಲೇ ಹೇಳಿದ್ದೆ. ನಮಗೆಲ್ಲ ಪಂಜಾಬ್‌ನಲ್ಲಿ ಆಪ್ 75 ಸ್ಥಾನಗಳನ್ನು ದಾಟಿ ಹೋಗಲಿದೆ ಎಂದು ಗೊತ್ತಿತ್ತು. ಆದರೆ ಬಹಿರಂಗವಾಗಿ ಹೇಳುವ ಧೈರ್ಯವಿರಲಿಲ್ಲ ಎಂದಿದ್ದಾರೆ.
ಜಾತ್ಯತೀತತೆ ವ್ಯಾಖ್ಯಾನವನ್ನು ಮರುಪರಿಶೀಲಿಸಬೇಕು: ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೇರಿರುವುದನ್ನು ಅಶ್ವನಿ ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಳುಗುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದನ್ನು ಗಮನಿಸಿದಾಗ, ಜಾತ್ಯತೀತತೆಯ ಕುರಿತ ನಮ್ಮ ವ್ಯಾಖ್ಯಾನವನ್ನು ಮತ್ತೂಮ್ಮೆ ಪರಿಶೀಲನೆಗೊಳಪಡಿಸಬೇಕು ಅನಿಸುತ್ತದೆ ಎಂದಿದ್ದಾರೆ.