ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಜನಮೆಚ್ಚುಗೆಗೆ ಪಾತ್ರವಾಗಿದ್ದು, ಮತ್ತೊಮ್ಮೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆ ಮತ್ತು ಬೆಂಗಳೂರಿನ ಪ್ರಮುಖರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮತ್ತು ಅವರ ಬೆಂಬಲಿಗರು ಬಿಜೆಪಿಗೆ ಬಂದ ನಂತರ ನಮಗೆ ಭೀಮಬಲ ಬಂದಿದೆ. ಖ್ಯಾತ ನೇತ್ರ ತಜ್ಞರಾದ ಡಾ.ಅಪ್ಪಾಜಿಗೌಡರ ಮೂಲಕ ಹಳೆಮೈಸೂರು ಭಾಗದಲ್ಲಿ ಪಕ್ಷದ ಬಲ ವೃದ್ಧಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷ ಸೇರಿದ ಎಲ್ಲರಿಗೂ ಅವರವರ ಸ್ಥಾನಮಾನಕ್ಕೆ ಚ್ಯುತಿ ಆಗದಂತೆ ನೋಡಿಕೊಳ್ಳಲಾಗುವುದು. ಕಾರ್ಯಕರ್ತರಾಗಿ ಪಕ್ಷದ ಕಾರ್ಯ ಮಾಡಬೇಕು. ಪಾರ್ಟಿ ಬೆಳೆಸಿ ಗಟ್ಟಿ ಮಾಡಲು ಸಮಯ ವಿನಿಯೋಗಿಸಿ ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪ್ರಮುಖರಾದ ಕೃಷ್ಣ ನಾಯ್ಕ, ಪರಮೇಶ್ವರಪ್ಪ, ಎನ್.ಕೋಟೆಪ್ಪ, ಬೆಂಗಳೂರಿನ ಖ್ಯಾತ ನೇತ್ರ ತಜ್ಞ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಅವರು ಪಕ್ಷ ಸೇರ್ಪಡೆಗೊಂಡರು.
ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬಿಜೆಪಿ ಸೇರಿದ ಎಲ್ಲರಿಗೂ ಸ್ವಾಗತ ಮತ್ತು ಅಭಿನಂದನೆಗಳು. ನಂದಿಹಳ್ಳಿ ಹಾಲಪ್ಪ 2009ರಲ್ಲಿ ನಮ್ಮ ಜೊತೆಗಿದ್ದವರು. ಅವಳಿ ಜಿಲ್ಲೆಯಲ್ಲಿ 10ಕ್ಕೆ ಹೆಚ್ಚು ಸ್ಥಾನ ಗೆಲ್ಲಲು ಅವರ ಸೇರ್ಪಡೆ ಸಹಕಾರಿ ಎಂದರು.
ಲೋಕಸಭಾ ಸದಸ್ಯ ದೇವೇಂದ್ರಪ್ಪ, ಸ್ಥಳೀಯ ಪ್ರಮುಖರು ಇದ್ದರು.