Advertisement

ಅರಸು ರಾಜ್ಯ ಕಂಡ ಮುತ್ಸದ್ಧಿ ರಾಜಕಾರಣಿ: ನಾಗೇಶ ಹುಬ್ಬಳ್ಳಿ

05:24 PM Aug 27, 2024 | Team Udayavani |

ಉದಯವಾಣಿ ಸಮಾಚಾರ
ಮುಂಡರಗಿ: ರಾಜ್ಯದ ಮುತ್ಸದ್ಧಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸು ಕೂಡ ಒಬ್ಬರಾಗಿದ್ದಾರೆ. ನಾಡಿನ ಬಡವರು, ರೈತರು, ಶೋಷಿತ ಜನಾಂಗದ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ, ಹಿಂದುಳಿದವರ ಆಶಾಕಿರಣ ಡಿ. ದೇವರಾಜ ಅರಸು ಅವರು ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಪುರಸಭೆ ಆವರಣದ ಗಾಂಧಿ ಭವನದಲ್ಲಿ ಕರ್ನಾಟಕ ಸರಕಾರ, ತಾಲೂಕಾಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಡಿ. ದೇವರಾಜ ಅರಸು ಅವರ 109ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.

ಜನರ ನಾಡಿ ಮಿಡಿತ ಅರಿತು ಕೆಲಸ ಮಾಡಿದ ಆಡಳಿತ ತಜ್ಞ ಡಿ. ದೇವರಾಜ ಅರಸು ಅವರು ಪ್ರಜೆಗಳ ಮನೆಗೆ ಬಾಗಿಲಿಗೆ ಆಡಳಿತ
ತೆಗೆದುಕೊಂಡು ಹೋಗಿ ಕೆಲಸ ಮಾಡಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು, ಕೂಲಿಯರನ್ನು ಮಾತನಾಡಿಸಿ, ಕಷ್ಟ-ಸುಖ ವಿಚಾರಿಸಿ, ಅವರ ಸಂಕಷ್ಟಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸಿ ಆಡಳಿತ ನಡೆಸಿದ ಕೀರ್ತಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.

ತಾಪಂ ಇಒ ವಿಶ್ವನಾಥ ಹೊಸಮನಿ ಮಾತನಾಡಿ, ಡಿ. ದೇವರಾಜ ಅರಸು ಭೂ ಒಡೆತನವನ್ನು ಹಿಂದುಳಿದ ವರ್ಗಗಳಿಗೆ ನೀಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಹಿಂದುಳಿದ ಜನಾಂಗದ ಗ್ರಾಮೀಣ ಮಕ್ಕಳು ಶಿಕ್ಷಣ ಮುಂದುವರಿಸಲು ವಸತಿ ನಿಲಯಗಳ ಬಲ ತುಂಬಿದರು ಎಂದರು.

ತಹಶೀಲ್ದಾರ್‌ ಪಿ.ಎಸ್‌. ಎರ್ರೀಸ್ವಾಮಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಸತಿ ನಿಲಯ ಸ್ಥಾಪನೆ, ಭೂಸುಧಾರಣೆ,
ಭಾಗ್ಯಜ್ಯೋತಿ, ಮಾಸಾಶನದಂತಹ ಕೆಲಸ ಮಾಡಿ, ವೃದ್ಧಾಪ್ಯದಲ್ಲಿ ಇರುವ ಜನರಿಗೆ ಆಸರೆಯಾದರು. ಡಿ. ದೇವರಾಜ ಅರಸು ಕಂಡ ಕನಸು ನನಸಾಗಬೇಕಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸತತ ಅಧ್ಯಯನಶೀಲರಾಗಿ ಸಾಧನೆ ಗುರಿ ತಲುಪಬೇಕು ಎಂದರು.

Advertisement

ಡಾ| ಆರ್‌.ಎಚ್‌. ಜಂಗನವಾರಿ ಉಪನ್ಯಾಸ ನೀಡಿ, ಈ ದೇಶ ಕಂಡ ಮಹಾನ್‌ ನಾಯಕ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳ ಆರಾಧ್ಯ ವ್ಯಕ್ತಿ ಡಿ. ದೇವರಾಜ ಅರಸು ಊಳುವವನೇ ಭೂ ಒಡೆಯ ಎನ್ನುವ ಕಾನೂನು ತರುವ ಮೂಲಕ ಭೂಹೀನರಿಗೆ ಆಶಾಕಿರಣವಾದರು. ಪ್ರವಾಸದಲ್ಲಿದ್ದಾಗ ಡಿ. ದೇವರಾಜ ಅರಸು ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರೆಂದರು.

ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಪ್ರಲ್ಹಾದ ಹೊಸಮನಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೋರ್ಲಹಳ್ಳಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿ ಕಾರಿ ಶಿವಯೋಗಿ, ವಿ.ಕಲ್ಮಠ, ಪಿಎಸ್‌ಐ ವಿ.ಜೆ. ಪವಾರ, ನಾಗರಾಜ ಹೊಂಬಳಗಟ್ಟಿ, ಸಮಾಜ ಕಲ್ಯಾಣಾಧಿಕಾರಿ ಅರುಣಾ ಸೊರಗಾಂವಿ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಸವಿತಾ ಸಾಸ್ವೀಹಳ್ಳಿ, ಲಕ್ಷ್ಣಣ ತಗಡಿನಮನಿ ಸೇರಿ ಇನ್ನಿತರರಿದ್ದರು. ವಸತಿ ನಿಲಯದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿವಯೋಗಿ ಕಲ್ಮಠ ಸ್ವಾಗತಿಸಿ, ವಿಜಯಕುಮಾರ ಜಾಧವ್‌ ನಿರೂಪಿಸಿದರು. ಪಿ.ಎಫ್‌. ಗುಮ್ಮಗೋಳ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next