ಕನ್ನಡದಲ್ಲಿ ಪ್ರತಿಯೊಬ್ಬ ನಾಯಕ ನಟನಿಗೂ ಅವರವರ ಅಭಿಮಾನಿಗಳು ಒಂದೊಂದು ಬಿರುದು ಕೊಡುವ ಮೂಲಕ ಪ್ರೀತಿಯಿಂದ ಕರೆಯುತ್ತಾರೆ. ಬಹುತೇಕ ಸ್ಟಾರ್ ನಟರಿಂದ ಹಿಡಿದು, ಈಗೀಗ ಸಿನಿಮಾಗೆ ಎಂಟ್ರಿಕೊಡುತ್ತಿರುವ ಯುವ ನಾಯಕರೂ ಸಹ ಒಂದೊಂದು ಬಿರುದು ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಬಹುತೇಕ ನಟರ ಅಭಿಮಾನಿಗಳು ಅಭಿಮಾನದಿಂದ “ಸ್ಟಾರ್’ ಅಂತ ಕರೆಯುವಾಗ, ಶರಣ್ ಮಾತ್ರ ಅದರಿಂದ ಬಲು ದೂರವೇ ಉಳಿದಿದ್ದಾರೆ.
ಹೌದು, ಸಾಲು ಸಾಲು ಯಶಸ್ವಿ ಚಿತ್ರಗಳನ್ನು ಕೊಟ್ಟರೂ ಈ ತಮ್ಮ ಹೆಸರಿನ ಮುಂದೆ ಯಾವುದೇ ಸ್ಟಾರ್ ಬಿರುದು ಬೇಡವೇ ಬೇಡ ಅಂತ ದೂರ ಸರಿಯುತ್ತಿದ್ದಾರೆ ಶರಣ್. ತಮ್ಮ ಹಾಸ್ಯ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಡುತ್ತ, ಮನರಂಜಿಸುತ್ತಲೇ ಇರುವ ಶರಣ್‌ಗೆ ಯಾವ ಬಿರುದೂ ಬೇಕಿಲ್ಲ. ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ, ಪ್ರೀತಿ ಮಾತ್ರ ಸಾಕು ಎಂಬುದು ಅವರ ಮಾತು.
ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ಯುವ ನಟರು ಸೇರಿದಂತೆ ಬಹುತೇಕರಿಗೆ ತಮ ಹೆಸರ ಮುಂದೆ ಆ “ಸ್ಟಾರ್’, ಈ “ಸ್ಟಾರ್’ ಎಂಬ ಬಿರುದು ಇದೆ. ಅದು ಅಭಿಮಾನಿಗಳೇ ಕೊಟ್ಟ ಪ್ರೀತಿಯ ಬಿರುದು. ಹೀಗಿರುವಾಗ, ಈವರೆಗೆ ಕನ್ನಡ ಚಿತ್ರರಂಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದ ಶರಣ್, ಕಳೆದ ಏಳೆಂಟು ವರ್ಷಗಳಿಂದ ಸಾಲು ಸಾಲು ಹಾಸ್ಯಮಯ ಚಿತ್ರಗಳನ್ನು ಕೊಟ್ಟಿರುವ ಶರಣ್ ಯಾಕೆ ತಮ್ಮ ಹೆಸರಿನ ಮುಂದೆ ಯಾವುದೇ “ಸ್ಟಾರ್’ ಬಿರುದು ಹಾಕಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದಕ್ಕೆ ತಮ್ಮದೇ ಧಾಟಿಯಲ್ಲಿ ಶರಣ್ ಉತ್ತರಿಸಿದ್ದು ಹೀಗೆ.
“ನನಗೆ ಯಾವುದೇ ಹೀರೋಯಿಸಂ ಮೇಲೆ ನಂಬಿಕೆ ಇಲ್ಲ. ನನ್ನ ಪ್ರತಿ ಚಿತ್ರದ ಟೈಟಲ್ ಕಾರ್ಡ್‌ನಲ್ಲೂ ಶರಣ್ ಅಂತಾನೇ ಇರುತ್ತದೆ. ಪ್ರತಿಸಲ ಚಿತ್ರದ ಟೈಟಲ್ ಮಾಡುವಾಗ ಚಿತ್ರತಂಡದವರು, ನಿಮ್ಮ ಹೆಸರಿನ ಮುಂದೆ ಏನಾದ್ರೂ ಸೇರಿಸೋಣವಾ? ಅಂಥ ಕೇಳುತ್ತಾರೆ. ಆದರೆ, ನಾನೇ ಅದೆಲ್ಲ ಏನೂ ಬೇಡ ಅಂತ ಹೇಳುತ್ತೇನೆ. ಯಾಕೆಂದರೆ, ಈ ಹೆಸರಿನ ಹಿಂದೆ ಒಂದು ಕಥೆ ಇದೆ’ ಎನ್ನುತ್ತಲೇ ಅದರ ಒಂದು ಸಣ್ಣ ಕಥೆ ಹೇಳುತ್ತಾರೆ.
“ಗುಬ್ಬಿ ನಾಟಕ ಕಂಪೆನಿ ಯಾದಗಿರಿ ಕ್ಯಾಂಪ್‌ನಲ್ಲಿರುವಾಗ ನನ್ನ ತಾಯಿ ಗರ್ಭಿಣಿಯಾಗಿದ್ದರಂತೆ. ನಾನು ಅವರ ಹೊಟ್ಟೆಯಲ್ಲಿದ್ದಾಗ, ಏನಾಯ್ತೋ, ಏನೋ, ನನ್ನ ತಾಯಿಯನ್ನು ಪರೀಕ್ಷಿಸಿದ ಡಾಕ್ಟರ್ ಮಗು ಡೇಂಜರ್ ಸ್ಥಿತಿಯಲ್ಲಿದೆ. ತೆಗೆಸಿಬಿಡುವುದು ಒಳ್ಳೆಯದು. ಇಲ್ಲದಿದ್ರೆ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಎಂದರಂತೆ. ಆದರೆ, ನಮ್ಮ ತಾಯಿ ಮಾತ್ರ ಗರ್ಭದಲ್ಲಿದ್ದ ಮಗುವನ್ನು ತೆಗೆಸಲು ತಯಾರಿರಲಿಲ್ಲ.
ಕೂಡಲೇ ಅಲ್ಲಿಯೇ ಇದ್ದ ಶ್ರೀ ಶರಣ ಬಸವೇಶ್ವರ ಸನ್ನಿಧಿಗೆ ಹೋಗಿ ಯಾವುದೇ ತೊಂದರೆಯಾಗದೆ ಮಗು ಹುಟ್ಟಿದರೆ, ಅದಕ್ಕೆ ನಿನ್ನ ಹೆಸರು ಇಡುತ್ತೇನೆ ಎಂದು ಹರಕೆ ಕಟ್ಟಿಕೊಂಡು ಬಂದಿದ್ದಾರೆ. ಅದಾದ ನಂತರವೇ ನಾನು ಹುಟ್ಟಿದ್ದೇನೆ. ನಮ್ಮ ತಾಯಿಯ ಹರಕೆಯಂತೆ ನನಗೆ ಶರಣ ಅಂಥ ಹೆಸರಿಟ್ಟಿದ್ದಾರೆ. ಯಾವುದೇ ನಕ್ಷತ್ರ, ಗಳಿಗೆ, ಜಾತಕ ಅಂತ ನೋಡದೆ ಗರ್ಭದಲ್ಲಿರುವಾಗಲೇ ಈ ಹೆಸರು ಇಟ್ಟಿದ್ದರು. ಶರಣ್ ಎಂಬ ಹೆಸರೆ ಇಲ್ಲಿಯವರೆಗೆ ತುಂಬ ತಂದುಕೊಟ್ಟಿದೆ. ಇದಕ್ಕಿಂತ ಹೆಸರಿನ ಹಿಂದೆ ಮುಂದೆ ಏನು ಬೇಕು ಅಂಥ ಅನಿಸಲಿಲ್ಲ’ ಎಂದು ತಮ್ಮ ಹೆಸರಿನ ಹಿಂದಿನ ವೃತ್ತಾಂತವನ್ನು ತೆರೆದಿಡುತ್ತಾರೆ ಶರಣ್.