Advertisement
ತುಸು ಬೇಗನೇ ಚಿತ್ರಕ್ಕೆ ಮಧ್ಯಂತರ ಬರುವುದರಿಂದ ನೋಡುಗರಿ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಸಿಗುತ್ತೆ ಎಂಬುದೇ ಸಮಾಧಾನ. ಇಷ್ಟು ಹೇಳಿದ ಮೇಲೆ ಇಷ್ಟೊತ್ತಿಗಾಗಲೇ “ಸರ್ವಸ್ವ’ದೊಳಗಿನ “ಸ್ವಾದ’ ಹೇಗಿದೆ ಅನ್ನೋದು ಗೊತ್ತಾಗಿರುತ್ತೆ. ನಿರ್ದೇಶಕರು ಇಲ್ಲಿ ಸಿನಿಮಾದೊಳಗೊಂದು ಸಿನಿಮಾ ಕಥೆ ಹೇಳಿದ್ದಾರೆ. ಆರಂಭದಲ್ಲೇ ಸಾಕಷ್ಟು ಪ್ರಶ್ನೆಗಳಿಗೆ ಕಾರಣರಾಗುತ್ತಾರೆ. ಎಲ್ಲೋ ಒಂದು ಕಡೆ ಇಬ್ಬರು ಹುಡುಗರು ಹಾಸ್ಟೆಲ್‌ನಿಂದ ಓಡಿ ಹೋಗುತ್ತಾರೆ.
Related Articles
Advertisement
ಇಲ್ಲಿ ಕೆಲವು ದೃಶ್ಯಗಳಿಗೆ ಸ್ಪಷ್ಟತೆಯೇ ಇಲ್ಲ. ಅಲ್ಲೆಲ್ಲೋ ಓಡಿ ಬರುವ ಹುಡುಗರು, ಯಾಕೆ ತಪ್ಪಿಸಿಕೊಂಡು ಹೊರ ಬರುತ್ತಾರೆ, ಇನ್ನೆಲ್ಲೋ ಕಿಡ್ನಾಪ್ ಆಗಿರುವ ಆ ಹುಡುಗಿ ಯಾರು, ಅವಳನ್ನೇಕೆ ಕಿಡ್ನಾಪ್ ಮಾಡುತ್ತಾರೆ ಎಂಬೆಲ್ಲಾ ಗೊಂದಲಕ್ಕೆ ಉತ್ತರವೇ ಇಲ್ಲ. ಆದರೆ, ಹದಿನೈದು ವರ್ಷಗಳ ಬಳಿಕ ಆ ಇಬ್ಬರು ಹುಡುಗರಿಗೆ ಆಕೆ ಮತ್ತೆ ಸಿಗುತ್ತಾಳೆ. ಆ ಪೈಕಿ ಹೀರೋ ಆಗಲು ಕನಸು ಕಂಡಿದ್ದ ಆಯುಷ್ (ಚೇತನ್)ಗೆ ಅವಳ ಮೇಲೆ ಪ್ರೀತಿ ಅಂಕುರವಾಗಿರುತ್ತೆ.
ಚಿಕ್ಕಂದಿನಲ್ಲಿ ಕಿಡ್ನಾಪ್ ಆಗಿದ್ದ ಹುಡುಗಿಯನ್ನು ರಕ್ಷಿಸುವ ವೇಳೆ, ಆಕೆಗಾಗಿ ಒದೆ ತಿಂದದ್ದು ಆಯುಷ್ ಅಂತ ಗೊತ್ತಾದಾಗ, ಆ ಪ್ರೀತಿ ಇನ್ನಷ್ಟು ಗಟ್ಟಿಯಾಗುತ್ತೆ. ಅತ್ತ ನಿರ್ದೇಶಕನಾಗೋ ಕನಸು ಕಂಡಿದ್ದ ಗುರು (ತಿಲಕ್)ಗೆ ಗುರಿ ತಲುಪುವ ಹಂಬಲ, ಪ್ರೀತಿ-ಗೀತಿ ಅಂತ ಸುತ್ತಾಡೋ ಆಯುಷ್‌ಗೆ ಪ್ರೀತಿ ಬಿಟ್ಟು, ಮೊದಲು ಹೀರೋ ಆಗುವ ಗುರಿ ತಲುಪು ಎಂಬ ಬುದ್ಧಿವಾದ ಹೇಳುತ್ತಲೇ, ಜಗಳಕ್ಕಿಳಿಯುತ್ತಾನೆ.
ಆಗ ಗುರು, ಆಯುಷ್‌ನನ್ನು ಕಾರಿನಿಂದ ಕೆಳಗೆ ತಳ್ಳುತ್ತಾನೆ. ಆ ಘಟನೆಯಿಂದಆಯುಷ್ ನಡೆದಾಡದ ಸ್ಥಿತಿ ತಲುಪುತ್ತಾನೆ. ಅದರಿಂದ ಪಾಪಪ್ರಜ್ಞೆ ಕಾಡುವ ಗುರುಗೆ, ಆಯುಷ್‌ನನ್ನು ಹೀರೋ ಮಾಡಲೇಬೇಕು ಎಂಬ ಛಲ ಬರುತ್ತೆ. ಒಂದು ಸಿನಿಮಾನೂ ಶುರುವಾಗುತ್ತೆ. ಆಯುಷ್ ದೊಡ್ಡ ಹೀರೋ ಆಗ್ತಾನೆ. ಕೊನೆಗೊಂದು ಡ್ರಾಮಾ ನಡೆದು ಹೋಗುತ್ತೆ. ಅದೇ ಸಿನಿಮಾದ ಟ್ವಿಸ್ಟ್. ಮಿಕ್ಕಿದ್ದೆಲ್ಲಾ ವೇಸ್ಟ್!
ಇಲ್ಲಿ ತಿಲಕ್ ತುಂಬಾ ಸ್ಟೈಲಿಷ್ ಆಗಿ ಕಾಣುತ್ತಾರೆ ಅನ್ನೋದು ಬಿಟ್ಟರೆ, ಆ ಪಾತ್ರಕ್ಕೆ ಅವರು ಸರಿಯಾಗಿ ಒಗ್ಗಿಕೊಂಡಿಲ್ಲ. ಹೆಚ್ಚು ಮಾತನಾಡದ ಪಾತ್ರವದು. ಒಮ್ಮೊಮ್ಮೆ ರೊಮ್ಯಾಂಟಿಕ್ ಆಗಿ ಕಾಣುವ ತಿಲಕ್, ಆ್ಯಂಗ್ರಿ ಮೂಡ್‌ನಲ್ಲೂ ಕಾಣುತ್ತಾರೆ. ಬಹುಶಃ, ಆ್ಯಂಗ್ರಿಮೂಡ್ ಪಾತ್ರ ಇರದೇ ಹೋಗಿದ್ದರೆ, ತಿಲಕ್ ಇಷ್ಟವಾಗುತ್ತಿರಲಿಲ್ಲ. ಇನ್ನು, ಚೇತನ್‌ಗೆ ಮೊದಲ ಚಿತ್ರವಾದರೂ, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ರನೂಷಾ ಕುರುಡಿ ಪಾತ್ರವನ್ನು ಇನ್ನೂ ಚೆನ್ನಾಗಿ ನಿರ್ವಹಿಸಲು ಸಾಧ್ಯವಿತ್ತು.
ಅಂಧೆಯಾಗಿ ನಟಿಸುವುದಕ್ಕೆ ಹೆಚ್ಚು ಒತ್ತು ಕೊಡುವುದಕ್ಕಿಂತ, ಗ್ಲಾಮರ್‌ಗೇ ಹೆಚ್ಚು ಒತ್ತು ಕೊಟ್ಟಿರುವುದೇ ಹೆಗ್ಗಳಿಕೆ. ಸಾತ್ವಿಕಾ ಅಪ್ಪಯ್ಯ ಕೂಡ ಗ್ಲಾಮರ್ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತಿದೆ. ಮಿಕ್ಕಂತೆ ಬರುವ ಪಾತ್ರಗಳಾವೂ ಗುರುತಿಸಿಕೊಳ್ಳುವುದಿಲ್ಲ. ಶ್ರೀಧರ್ ವಿ.ಸಂಭ್ರಮ್ ಸಂಗೀತ ಎರಡು ಹಾಡು ಪರವಾಗಿಲ್ಲ, ಉಳಿದಂತೆ ಹಿನ್ನೆಲೆ ಸಂಗೀತಕ್ಕಿನ್ನೂ ಗಮನಕೊಡಬೇಕಿತ್ತು. ಭುಪಿಂದರ್ ಪಾಲ್ ಸಿಂಗ್ ರೈನಾ ಕ್ಯಾಮೆರಾವೇ ಇಲ್ಲಿ ಸರ್ವಸ್ವ!
ಚಿತ್ರ: ಸರ್ವಸ್ವನಿರ್ಮಾಣ: ವಿಮಲ್- ವಾಮ್ದೇವ್
ನಿರ್ದೇಶನ: ಶ್ರೇಯಸ್ ಕಬಾಡಿ
ತಾರಾಗಣ: ತಿಲಕ್, ರನೂಷಾ, ಸಾತ್ವಿಕಾ ಅಪ್ಪಯ್ಯ, ಚೇತನ್ ಮುಂತಾದವರು * ವಿಜಯ್ ಭರಮಸಾಗರ