Advertisement

ವಿಶ್ವ ಟಿ20 ಕೂಟದತ್ತ ಎಲ್ಲರ ಚಿತ್ತ: ಕ್ರಿಕೆಟ್‌ ಅಭಿಮಾನಿಗಳಿಗೆ ಇಷ್ಟ ಹೊಡಿಬಡಿ ಚುಟುಕು ಆಟ

12:05 PM Jun 22, 2020 | mahesh |

ನವದೆಹಲಿ: ಆಸ್ಟ್ರೇಲಿಯ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವ ಕಪ್‌ ಆಯೋಜಿಸುವುದರ ಬಗ್ಗೆ ಇನ್ನೂ ಅಧಿಕೃತವಾಗಿ ಯಾವ ನಿರ್ಧಾರಕ್ಕೂ ಬರಲಾಗಿಲ್ಲ. ಕೋವಿಡ್ ವೈರಸ್‌ ಆತಂಕದ ನಡುವೆ ಕೂಟ ಆಯೋಜಿಸುವ ಬಗ್ಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಹಿಂದೆ ಮುಂದೆ ನೋಡುತ್ತಲೇ ಇದೆ, ಈ ವಿಚಾರ ವಾಗಿ ಎರಡು ಸಲ ಐಸಿಸಿ ಸಭೆ ಕರೆದಿದ್ದರೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ತಿಂಗಳು ಪರಿಸ್ಥಿತಿ ಅವಲೋಕಿಸಿಕೊಂಡು ತೀರ್ಮಾನಕ್ಕೆ ಬರುವುದಾಗಿ ಐಸಿಸಿ ತಿಳಿಸಿದೆ.

Advertisement

ಟಿ20 ವಿಶ್ವ ಕಪ್‌ ಕ್ರಿಕೆಟ್‌ ಕೂಟವನ್ನು 2007ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಮೊದಲ ಆವೃತ್ತಿಯಲ್ಲಿಯೇ ಎಂ.ಎಸ್‌.ಧೋನಿ ನಾಯಕತ್ವದ ಭಾರತೀಯ ತಂಡ ಪ್ರಚಂಡ ಪ್ರದರ್ಶನ ನೀಡಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವಕಪ್‌ ಟಿ20 ಕೂಟದ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಹಲವು ಅನುಮಾನಗಳ ದಾಟಿ ಕೂಟ ನಡೆಯುವುದೇ ಎನ್ನುವುದರ ಪ್ರಶ್ನೆಯಾಗಿದೆ. ಹಾಗಿದ್ದರೆ ಈ ಕೂಟದ ವಿಶೇಷತೆಗಳೇನು?, ಭಾರತದ ಪಾಲಿಗೆ ಈ ಕೂಟ ಎಷ್ಟು ಅವಿಸ್ಮರಣೀಯ?, ಇದುವರೆಗೆ ಎಷ್ಟು ಆವೃತ್ತಿಗಳು ನಡೆದಿವೆ?, ಯಾವ್ಯಾವ ತಂಡಗಳು ಟ್ರೋಫಿ ಮೇಲೆ ಹಿಡಿತ ಸಾಧಿಸಿವೆ ಎನ್ನುವ ಸಂಕ್ಷಿಪ್ತ ವರದಿಯ ನೋಟ ಇಲ್ಲಿದೆ ಓದಿ.

ಹೊಡಿಬಡಿ ಮನರಂಜನೆ: 2007ಕ್ಕೂ ಮೊದಲು ಏಕದಿನ ವಿಶ್ವಕಪ್‌ ಕೂಟ ಮಾತ್ರವಿತ್ತು. ಟಿ20 ವಿಶ್ವಕಪ್‌ ಕೂಟವನ್ನು ಪರಿಚಯಿಸಿದ ಬಳಿಕ ಅಭಿಮಾನಿಗಳು
ಹೊಸದೊಂದು ಅನುಭವ ಪಡೆದುಕೊಂಡರು. ಹೊಡಿಬಡಿ ಆಟದಿಂದ ಹೆಚ್ಚಿನ ಮನರಂಜನೆ ಸಿಕ್ಕಿತು, ಈ ಕೂಟ ಹೆಚ್ಚಿನ ಯಶಸ್ಸನ್ನು ಪಡೆಯಿತು. ಈ ಕೂಟದಲ್ಲಿ
ಒಟ್ಟಾರೆ 16 ರಾಷ್ಟ್ರಗಳು ಪಾಲ್ಗೊಳ್ಳುತ್ತವೆ, ಲೀಗ್‌, ಸೂಪರ್‌ ಲೀಗ್‌ ಹಾಗೂ ಪ್ಲೇಆಫ್ ಸುತ್ತನ್ನು ಕೂಟವು ಒಳಗೊಂಡಿದೆ. ಕೂಟದಲ್ಲಿ ಅತೀ ಹೆಚ್ಚು ಯಶಸ್ವಿಯಾಗಿರುವ ತಂಡ ಎಂದರೆ ಅದು ವೆಸ್ಟ್‌ ಇಂಡೀಸ್‌. ವಿಂಡೀಸ್‌ ತಂಡವು 2012ರಲ್ಲಿ ಹಾಗೂ 2016ರಲ್ಲಿ ಚಾಂಪಿಯನ್‌ ಆಗಿದೆ.

7ನೇ ಆವೃತ್ತಿ ನಡೆಯುವುದೇ?: ಎರಡು ವರ್ಷಕ್ಕೊಮ್ಮೆ ವಿಶ್ವಕಪ್‌ ಟಿ20 ಕೂಟವನ್ನು ಆಯೋಜಿಸಲಾಗುತ್ತದೆ. ಇದುವರೆಗೆ 6 ಆವೃತ್ತಿ ಕೂಟಗಳು ನಡೆದಿದೆ. ಈಗಾಗಲೇ ಹೇಳಿದಂತೆ ಮೊದಲ ಆವೃತ್ತಿಯಲ್ಲಿ ಭಾರತ ಟ್ರೋಫಿ ಗೆದ್ದುಕೊಂಡಿತ್ತು. 2009ರಲ್ಲಿ ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆದಿದ್ದ ವಿಶ್ವ ಕಪ್‌ ಟಿ20 ಕೂಟದಲ್ಲಿ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ಮೊದಲ ಸಲ ಟ್ರೋಫಿ ಗೆದ್ದಿತ್ತು. ಸತತ ಎರಡನೇ ಸಲ ಫೈನಲ್‌ಗೆ ಹೋಗಿ ಪಾಕ್‌ ಗೆದ್ದಿದ್ದು ವಿಶೇಷ.

2010ರ ಕೂಟದಲ್ಲಿ ವಿಂಡೀಸ್‌ ಆತಿಥ್ಯದಲ್ಲಿ ನಡೆದ ಕೂಟದ ಫೈನಲ್‌ನಲ್ಲಿ ಇಂಗ್ಲೆಂಡ್‌ 7 ವಿಕೆಟ್‌ಗಳಿಂದ ಆಸ್ಟ್ರೇಲಿಯ ತಂಡವನ್ನು ಮಕಾಡೆ ಮಲಗಿಸಿ ಟ್ರೋಫಿ ಜಯಿಸಿತ್ತು. 2012ರಲ್ಲಿ ಲಂಕಾ ಆತಿಥ್ಯದಲ್ಲಿ ನಡೆದ ಕೂಟದಲ್ಲಿ ಆತಿಥೇಯ ಲಂಕಾ ತಂಡವನ್ನು ವಿಂಡೀಸ್‌ ಫೈನಲ್‌ನಲ್ಲಿ 36 ರನ್‌ಗಳಿಂದ ಸೋಲಿಸಿ ಟ್ರೋಫಿಗೆ
ಮುತ್ತಿಟ್ಟಿತ್ತು. 2014ರಲ್ಲಿ ಬಾಂಗ್ಲಾದೇಶ ಆತಿಥ್ಯದ ಕೂಟದಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಫೈನಲ್‌ನಲ್ಲಿ ಸೋಲಿಸಿದ ಲಂಕಾ ಚಾಂಪಿಯನ್‌ ಆಗಿತ್ತು. 2016ರಲ್ಲಿ ಭಾರತ ಆತಿಥ್ಯದಲ್ಲಿ ನಡೆದಿದ್ದ ಕೂಟದಲ್ಲಿ ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ 4 ವಿಕೆಟ್‌ ಜಯಗಳಿಸಿತ್ತು. ಸದ್ಯ 7ನೇ ಆವೃತ್ತಿ ಕೂಟದಲ್ಲಿ ಚಾಂಪಿಯನ್‌
ಯಾರಾಗಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆಯಾದರೂ ಈ ಕೂಟ ನಡೆಯುವ ಬಗ್ಗೆ ಇದುವರೆಗೆ ಯಾವುದೇ ಖಚಿತತೆ ಇಲ್ಲ.

Advertisement

ಭಾರತಕ್ಕೆ ಅವಿಸ್ಮರಣೀಯ
2007ರ ವಿಶ್ವಕಪ್‌ ಭಾರತದ ಪಾಲಿಗೆ ಹೆಚ್ಚು ಅವಿಸ್ಮರಣೀಯ, ಇದಕ್ಕೆ ಕಾರಣ ಮೊದಲನೆಯದ್ದು ಕೂಟದ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿರುವುದು, ಮತ್ತೂಂದು 1983ರಲ್ಲಿ ಕಪಿಲ್‌ ನಾಯಕತ್ವದ ತಂಡ ಏಕದಿನ ವಿಶ್ವಕಪ್‌ ಗೆದ್ದ ಬಳಿಕ ಭಾರತಕ್ಕೆ ಕ್ರಿಕೆಟ್‌ನಲ್ಲಿ ಸಿಕ್ಕಿದ 2ನೇ ದೊಡ್ಡ ಯಶಸ್ಸು, ಧೋನಿ ನಾಯಕತ್ವದಲ್ಲಿ 2007ರಲ್ಲಿ ಜೋಹಾನ್ಸ್‌ ಬರ್ಗ್‌ನಲ್ಲಿ ನಡೆದಿದ್ದ ವಿಶ್ವ ಟಿ20 ಕೂಟದ ಫೈನಲ್‌ನಲ್ಲಿ ಭಾರತ 5 ರನ್‌ಗಳಿಂದ ಪಾಕಿಸ್ತಾನ ತಂಡದ ಹೆಡೆಮುರಿ ಕಟ್ಟಿ ವಿಶ್ವ ಸಾಮ್ರಾಟನಾಗಿ ಮೆರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next