ಅರಕಲಗೂಡು: ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು. ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತ, ಹಾಸನ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
12-13 ಸಾವಿರ ಜನರು ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಶಿಬಿರದಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ, ಹಾಸನ ಮತ್ತು ಬೆಂಗಳೂರಿಗೆ ಕಳುಹಿಸಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದರು.
500ಕ್ಕೂ ಹೆಚ್ಚು ವೈದ್ಯರಿಂದ ತಪಾಸಣೆ: ಈ ಶಿಬಿರದಲ್ಲಿ ಸುಮಾರು 22 ವಿಭಾಗದ ನುರಿತ 500 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು. ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ 40-50 ಲಕ್ಷ ಬೆಲೆಯ ಉಚಿತ ಔಷಧಿ ವಿತರಿಸಲಾಗಿದೆ ಎಂದರು.
ಕಣ್ಣು, ಕ್ಯಾನ್ಸರ್, ಮೂಳೆ ತಜ್ಞರಿಗೆ ಬೇಡಿಕೆ: ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಹುತೇಕ ರೋಗಿಗಳು ಕಣ್ಣು ಮತ್ತು ಕ್ಯಾನ್ಸರ್ ಹಾಗೂ ಕೀಲು ಮತ್ತು ಮೂಳೆ ತಪಾಸಣಾ ಕೊಠಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯವರು ಎರಡು ಬಸ್‌ಗಳಲ್ಲಿ ಉಪಯುಕ್ತ ತಂತ್ರಜ್ಞಾನವುಳ್ಳ ಯಂತ್ರಗಳೊಂದಿಗೆ ಆಗಮಿಸಿ ಸ್ಥಳದಲ್ಲೇ ಕ್ಯಾನ್ಸರ್ ರೋಗದ ಬಗ್ಗೆ ತಪಾಸಣೆಗೆ ಮುಂದಾದರು. ಸಾವಿರಾರು ಮಹಿಳೆಯರು ತಪಾಸಣೆ ಮಾಡಿಸಿಕೊಂಡರು. ಅದೇ ರೀತಿ ಕಣ್ಣು ಮತ್ತು ಮೂಳೆ ಪರೀಕ್ಷೆಗೂ ಜನರು ಸಾಲುಗಟ್ಟಿ ನಿಂತಿದ್ದರು.
ಕಾರ್ಯಕ್ರಮದಲ್ಲಿ ಚಿಲುಮೆ ಮಠಾದ್ಯಕ್ಷರಾದ ಜಯದೇವ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಮಠದ ಬಸವಲಿಂಗ ಶಿವಯೋಗಿಗಳು, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾ ಶಿವ ಸ್ವಾಮೀಜಿ, ಹಾಗೂ ವೈದ್ಯಾಧಿಕಾರಿಗಳಾದ ಡಾ. ರವಿಕುಮಾರ್, ಡಾ.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್‌ಕುಮಾರ್, ತಾಲೂಕು ಆರೋಗ್ಯಧಿಕಾರಿ ಸ್ವಾಮೀಗೌಡ, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್‌ಬಾಬು ಮೊದಲಾದವರು ಭಾಗವಹಿಸಿದರು.
ಶಾಸಕ ರಾಮಸ್ವಾಮಿ ಹುಟ್ಟುಹಬ್ಬ: ಶಾಸಕ ಎ.ಟಿ.ರಾಮಸ್ವಾಮಿಯವರು ಇಂದು 69 ನೇ ಹುಟ್ಟು ಹಬ್ಬವನ್ನ ಕಾರ್ಯಕರ್ತರು ಸರಳವಾಗಿ ಆಚರಿಸಿದರು, ಎಂದೂ ಹುಟ್ಟುಹಬ್ಬಕ್ಕೆ ಆದ್ಯತೆ ನೀಡದ ಎ.ಟಿ. ರಾಮಸ್ವಾಮಿ ಕಾರ್ಯಕರ್ತರ ಒತ್ತಡದ ಮೇರೆಗೆ ಕೇಕ್ ಕತ್ತರಿಸಿಕೊಳ್ಳುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು.
ಗ್ರಾಮೀಣ ಜನರಿಗೆ ನೆರವು: ಕೃಷಿ ಚಟುವಟಿಕೆಯಲ್ಲಿ ತೊಡಗುವ ಗ್ರಾಮೀಣ ಭಾಗದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದನ್ನು ಮನಗಂಡು ಪ್ರತಿ ಗ್ರಾಮಗಳಲ್ಲೂ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು. ಗ್ರಾಮೀಣ ಜನರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ತಾಲೂಕು ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಉಚಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ರಾಮಸ್ವಾಮಿ ಹೇಳಿದರು.
ಸರ್ಕಾರಿ ಕಾಲೇಜು ಮೈದಾನದಲ್ಲಿ ಜನ ಜಾತ್ರೆ: ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮೀಣ ಪ್ರದೇಶಗಳಿಂದ ವಾಹನ ಸೌಲಭ್ಯ ಕಲ್ಪಿಸಿದ್ದರಿಂದ 12 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರಿಂದ ಸರ್ಕಾರಿ ಕಾಲೇಜು ಮೈದಾನದಲ್ಲಿ ಜನ ಜಾತ್ರೆ ಉಂಟಾಗಿತ್ತು. ಆರೋಗ್ಯ ತಪಾಸಣೆಗೆ ಬಂದವರಿಗೆ ತಿಂಡಿ, ಊಟ, ಮಜ್ಜಿಗೆ ಮತ್ತು ನೀರನ್ನು ಸಮರ್ಪಕವಾಗಿ ವಿತರಿಸಲು ವಿವಿಧ ಇಲಾಖಾ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ನೇಮಿಸಲಾಗಿತ್ತು.