“ಮನೆಯಲ್ಲಿ ಅಪ್ಪ- ಅಮ್ಮ ಗಂಡು ನೋಡುತ್ತಿದ್ದಾರೆ. ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನನ್ನನ್ನು ನೋಡಲು ಬರುವ ಗಂಡುಗಳಿಗೆ ಕೇಸರಿಬಾತ್ ಉಪ್ಪಿಟ್ಟು ಕೊಡುತ್ತಾ ಕೂರುವ ಬದಲು ಎರಡು ವರ್ಷ ಮಾಸ್ಟರ್ ಡಿಗ್ರಿ ಓದಲು ಬಂದಿದ್ದೇನೆ.’
ಪರಿಮಳ ಮೂಲತಃ ಹಾಸನದವಳು. ಮಾತಿನ ಮಲ್ಲಿ. ತುಂಬಾ ಬೋಲ್ಡ್ ಹಾಗೂ ಒಳ್ಳೆಯ ಹುಡುಗಿ. ಸ್ನೇಹಮಯಿ. ಇವನ್ಯಾರಪ್ಪ ಆರಂಭದಲ್ಲೇ ಈ ರೀತಿ ಪೀಠಿಕೆ ಹಾಕ್ತಾ ಇದ್ದಾನೆ, ಇವನ್ಯಾರೋ ಪರಿಮಳಳ ದೇವದಾಸನಿರಬೇಕು ಎಂದುಕೊಂಡಿರಾ? ಖಂಡಿತವಾಗಿಯೂ ಅಂಥದ್ದೇನಿಲ್ಲ. ನಮ್ಮ ಕ್ಲಾಸಿನ ಹುಡುಗಿ ಪರಿಮಳಳ ಬಗ್ಗೆ ಎಲ್ಲಾ ವಿಚಾರ ತಿಳಿದರೆ, ಖಂಡಿತವಾಗಿಯೂ ಆಕೆ ನಿಮಗೂ ಇಷ್ಟವಾಗುತ್ತಾಳೆ.
ನಾವು ಮೊದಲನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾಗ ಸೀನಿಯರ್‌ಗಳು ನಮಗಾಗಿ ಟೀ ಪಾರ್ಟಿ ಏರ್ಪಡಿಸಿದ್ದರು. ಅಲ್ಲಿ ನಾವೆಲ್ಲ ಪರಸ್ಪರ ಪರಿಚಯ ಮಾಡಿಕೊಳ್ಳಬೇಕಿತ್ತು. ಹಾಗೆಯೇ ನಾವೆಲ್ಲ ಪತ್ರಿಕೋದ್ಯಮವನ್ನು ಏಕೆ ಆಯ್ಕೆ ಮಾಡಿಕೊಂಡೆವು ಎಂಬುದನ್ನು ತಿಳಿಸಬೇಕಿತ್ತು. ಎಲ್ಲರೂ ತಾವು ಸಮಾಜ ಸುಧಾರಣೆ ಮಾಡಲು, ಗ್ರಾಮಗಳ ಸುಧಾರಣೆ ಮಾಡಲು, ಧ್ವನಿಯಿಲ್ಲದ ಜನರ ಧ್ವನಿಯಾಗಲು ಅಂತೆಲ್ಲಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೊನೆಗೆ ಪರಿಮಳಳ ಸರದಿ. ಆಕೆ ಏನು ಹೇಳಿದಳು ಗೊತ್ತಾ?- “ಮನೆಯಲ್ಲಿ ಅಪ್ಪ- ಅಮ್ಮ ಗಂಡು ನೋಡುತ್ತಿದ್ದಾರೆ. ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನನ್ನನ್ನು ನೋಡಲು ಬರುವ ಗಂಡುಗಳಿಗೆ ಕೇಸರಿಬಾತ್ ಉಪ್ಪಿಟ್ಟು ಕೊಡುತ್ತಾ ಕೂರುವ ಬದಲು ಎರಡು ವರ್ಷ ಮಾಸ್ಟರ್ ಡಿಗ್ರಿ ಓದಲು ಬಂದಿದ್ದೇನೆ.’ ಎಂದು ಬಹಿರಂಗವಾಗಿ ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಳು ಪರಿಮಳ. ಅವಳ ಈ ಮಾತನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು. ಅಂದಿನಿಂದ ಪರಿಮಳ ಅಂದರೆ ಎಲ್ಲರಿಗೂ ಏನೋ ಕುತೂಹಲ.
ಮಾತನಾಡುವಾಗ ಆಕೆಗೆ ಜಗತ್ತಿನ ಪರಿವೆಯೇ ಇರುವುದಿಲ್ಲ. ಹಿಂದೆ ಮುಂದೆ ನೋಡದೆ ಗಟ್ಟಿಯಾಗಿ ಮಾತನಾಡುವುದು, ಜೋರಾಗಿ ನಗುವುದು ಅವಳ ಗುಣ. ಅವುಗಳಿಂದಾಗಿ ನಾವು ಎಷ್ಟು ಸಲ ಲೆಕ್ಚರರ್ ಕಡೆಯಿಂದ ಬೈಯಿಸಿಕೊಂಡಿದ್ದೇವೋ ಲೆಕ್ಕವಿಲ್ಲ. ನಮ್ಮ ಡಿಪಾರ್ಟ್‌ಮೆಂಟ್ ಮೂರನೆಯ ಮಹಡಿಯಲ್ಲಿರುವುದರಿಂದ ನಾವು ಕೆಳಗಡೆ ನಿಂತಾಗ, ಮೇಲೆ ಕ್ಲಾಸು ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳದುಕೊಳ್ಳಬಹುದು. ಹೇಗೆ ಗೊತ್ತಾ? ಒಂದು ವೇಳೆ ಮೇಲಿನಿಂದ “ಪರಿಮಳ’ಳ ಧ್ವನಿ ಕೇಳುತ್ತಿದ್ದರೆ ಅಲ್ಲಿ ಕ್ಲಾಸು ನಡೆಯುತ್ತಿಲ್ಲವೆಂದರ್ಥ. ಒಂದು ವೇಳೆ ತುಂಬಾ ಪ್ರಶಾಂತವಾಗಿದ್ದರೆ ಆಗ ಅಲ್ಲಿ ಕ್ಲಾಸುಗಳು ನಡೆಯುತ್ತಿವೆ ಎಂದರ್ಥ! ಫ್ರೆಶರ್ ಪಾರ್ಟಿಯಲ್ಲಿ ಜೂನಿಯರ್ ಹುಡುಗಿಯರೆಲ್ಲ ಸೀನಿಯರ್ ಹುಡುಗರಿಗೆ ತಮಾಷೆಗಾಗಿ ಪ್ರಪೋಸ್ ಮಾಡುವ ಟಾಸ್ಕ್ಗಳನ್ನು ನೀಡುತ್ತಿದ್ದೆವು. ನಮ್ಮ ಕ್ಲಾಸಿನ ಎಲ್ಲ ಹುಡುಗಿಯರು ತುಂಬಾ ಮುಜುಗರ ಮತ್ತು ನಾಚಿಕೆಯಿಂದ ಹಿಂದೆ ಸರಿಯುತ್ತಿದ್ದರೆ ಪರಿಮಳ ಮಾತ್ರ ಸೀನಿಯರ್‌ಗಳೇ ನಾಚಿ ನೀರಾಗುವ ಹಾಗೇ ಪ್ರಪೋಸ್ ಮಾಡಿದ್ದಳು.
ಅಷ್ಟಕ್ಕೂ ಪರಿಮಳ ಎಂಬುದು ಅವಳ ನಿಜವಾದ ಹೆಸರಲ್ಲ. ಅವಳ ನಿಜವಾದ ಹೆಸರು ಚೈತ್ರಾ ಅಂತ. ಅರೆ! ಮತ್ತೇಕೆ ಆಗಿನಿಂದ ಅವಳನ್ನು ಪರಿಮಳ ಅಂತ ಸಂಬೋಧಿಸುತ್ತಿದ್ದೀರಿ ಅಂತ ನೀವು ಕೇಳಬಹುದು. ಅದಕ್ಕೊಂದು ಹಿನ್ನೆಲೆಯಿದೆ. ಆಕೆ ಒಮ್ಮೆ ರಂಗಾಯಣ ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿದ್ದಳು. ನಾಟಕದಲ್ಲಿ ಅವಳು “ಪರಿಮಳ’ ಅನ್ನೋ ಪಾತ್ರ ಮಾಡಿದ್ದಳು. ಆ ಹೆಸರೇ ಈಗ ಪರ್ಮನೆಂಟಾಗಿ ಬಿಟ್ಟಿದೆ. ಎಷ್ಟೋ ಜನರಿಗೆ ಪರಿಮಳಳ ನಿಜವಾದ ಹೆಸರು ಗೊತ್ತೇ ಇಲ್ಲ. ಪರಿಮಳಳ ವಿಷಯದಲ್ಲಿ ಎಲ್ಲರೂ ಆಕೆಯನ್ನು ರೇಗಿಸುವವರೇ. ಆಕೆ ಏನಾದರೂ ಪ್ರಶ್ನೆ ಕೇಳಲು ಎದ್ದು ನಿಂತರೆ ಸಾಕು, ಕ್ಲಾಸಿನಲ್ಲಿ ನಗೆಯ ಅಲೆ ಏಳುತ್ತದೆ. ಆಕೆ ಎಷ್ಟೇ ಗಂಭೀರವಾದ ಪ್ರಶ್ನೆ ಕೇಳಿದರೂ ಅದು ಬಾಲಿಶ ಪ್ರಶ್ನೆಯೆಂಬಂತೆ ಪ್ರತಿಕ್ರಿಯಿಸುತ್ತೇವೆ. ಆಕೆ ನಮ್ಮನ್ನು ಬೈಯುತ್ತಿದ್ದರೂ, ಆ ಸಮಯದಲ್ಲಿ ನಮ್ಮಲ್ಲಿ ಯಾರಾದರೂ ಸ್ವಲ್ಪ ನಕ್ಕರೆ ಸಾಕು, ಆಕೆಯ ಮುಖದಲ್ಲಿನ ಸಿಟ್ಟು ಮಾಯವಾಗಿಬಿಡುತ್ತದೆ. ಹುಡುಗರು ಎಷ್ಟೆಲ್ಲಾ ರೇಗಿಸಿದರೂ ಏನಾದರೂ ಸಮಸ್ಯೆ ಅಂತ ಬಂದಾಗ ಹುಡುಗರ ಪರವಾಗಿಯೇ ಆಕೆ ಬ್ಯಾಟ್ ಬೀಸುತ್ತಾಳೆ.
ಪರಿಮಳ ಆಗಾಗ, “ನನಗೆ 6 ಜನ ಮಾವಂದಿರಿದ್ದಾರೆ’ ಅಂತ ರೀಲು ಬಿಡುವುದುಂಟು. ಇದು, ಬಹುಶಃ ಹುಡುಗರನ್ನು ಹೆದರಿಸಲು ಆಕೆ ಮಾಡಿದ ಉಪಾಯವಿರಬಹುದು. ಕ್ಯಾಂಪಸ್‌ನಲ್ಲಿ ಏನೇ ಕಾರ್ಯಕ್ರಮ ನಡೆದರೂ ಅಲ್ಲಿ ಪರಿಮಳ ಹಾಜರ್. ನಮ್ಮ ವಿವಿಯಲ್ಲಿರುವ ಎಲ್ಲಾ ವಿಧ್ಯಾರ್ಥಿ ಸಂಘಟನೆಗಳ ಸದಸ್ಯತ್ವ ಪಡೆದಿರುವ ಏಕೈಕ ವಿದ್ಯಾರ್ಥಿನಿ ಪರಿಮಳ! ನಾವು ಎಷ್ಟು ರೇಗಿಸಿದರೂ, ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ಎಲ್ಲರೊಂದಿಗೆ ನಗುನಗುತ್ತಾ ಮಾತನಾಡುವ ಪರಿಮಳಳ ಬಗ್ಗೆ ಎಷ್ಟು ಹೇಳಿದರೂ ಸಾಲದು.
ಬಹುಶಃ ಈಗ ಪರಿಮಳ ನಿಮಗೂ ಇಷ್ಟವಾಗಿರಬಹುದು!
– ಹನಮಂತ ಕೊಪ್ಪದ, ಮೈಸೂರು