ಯಲಹಂಕ: ಕಲಿಕೆಯ ಜತೆ ಸೃಜನಶೀಲತೆ ಬೆಳೆಸಿಕೊಂಡು ಪ್ರತಿಯೊಬ್ಬರೂ ಉದ್ಯೋಗ ಅರಸದೆ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಾಗಿ ಎಂದು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಹೇಳಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು “ಕಲಿಕೆಯ ಜತೆ ಗಳಿಕೆಯ ಸ್ಟಾರ್ಟ್‌ಅಪ್ ಕಂಪನಿ “ಇಗ್ನಿಸ್ ಇನ್ನೋವೇಶನ್ ಲ್ಯಾಬ್’ ಅನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಪ್ರತಿನಿತ್ಯ ಬಿಲಿಯನ್‌ಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತಿವೆ.
ಹಾಗೇ ಅಷ್ಟೇ ಸಂಖ್ಯೆಯಲ್ಲಿ ಮಾರುಕಟ್ಟೆ ಅಥವಾ ಮುಂದುವರಿದ ತಂತ್ರಜ್ಞಾನಗಳ ಕಾರಣವಾಗಿ ಉದ್ಯೋಗಗಳು ಕಣ್ಮರೆಯಾಗುತ್ತಿವೆ. ಅದರಿಂದ ಮೊದಲಿನಿಂದ ಕಲಿಕೆಯ ಜತೆ ಸೃಜನಶೀಲತೆ ಬೆಳೆಸಿಕೊಂಡು ಪ್ರತಿಯೊಬ್ಬರೂ ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗಿ ಎಂದು ಸಲಹೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಆರ್.ಶೆಟ್ಟಿ ಮಾತನಾಡಿ, ಪ್ರತಿಯೊಂದು ವಿದ್ಯಾಸಂಸ್ಥೆಯೂ ಹೊಸ ಹೊಸ ಸ್ಟಾರ್ಟ್-ಅಪ್ ಕಂಪನಿಗಳನ್ನು ವಿದ್ಯಾಸಂಸ್ಥೆಯ ಆವರಣದಲ್ಲಿಯೇ ಅಭಿವೃದ್ಧಿಪಡಿಸಿ ಅವುಗಳ ನಿರ್ವಹಣೆ ವಿದ್ಯಾರ್ಥಿಗಳಿಗೆ ವಹಿಸಬೇಕು.
ಅನೇಕ ಕಾರ್ಪೋರೆಟ್ ವಲಯದ ಸಂಸ್ಥೆಗಳು ಪ್ರಾಜೆಕ್ಟ್ಗಳನ್ನು ನೀಡಲು ಕಾತುರದಿಂದ ಕಾಯುತ್ತಿವೆ. ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ತಾನೇ ನಿರ್ವಹಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸಂಜಯ್ ಇಗ್ನಿàಸ್ ಇತರರು ಇದ್ದರು.