Advertisement

‘ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸಿ’

12:53 PM Jun 06, 2018 | Team Udayavani |

ಸವಣೂರು : ಪರಿಸರ ಸಮತೋಲನವಾಗಿರಲು ಸಸ್ಯ ಸಂರಕ್ಷಣೆ ಅಗತ್ಯ. ಪರಿಸರ ಉಳಿದರೆ ನಾವೂ ಉಳಿದೇವು. ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸ ಬೇಕು. ಎಲ್ಲವನ್ನೂ ಸರಕಾರ ಮಾಡುತ್ತೆ ಎಂದು ಸುಮ್ಮನಿರುವುದು ಸರಿಯಲ್ಲ. ನಮ್ಮಿಂದ  ಸಮಾಜಕ್ಕೆ ಏನು ಕೊಡಬಹುದು ಎಂಬುದರ ಕುರಿತು ಆಲೋಚಿಸಬೇಕು. ಎಲ್ಲರಲ್ಲೂ ಪರಿಸರ ಜಾಗೃತಿ ಮೂಡಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು.

Advertisement

ಅವರು ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ, ಸರಕಾರಿ ಪ.ಪೂ. ಕಾಲೇಜು ಮತ್ತು ಪ್ರೌಢಶಾಲೆ ಸವಣೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ಆಶ್ರಯದಲ್ಲಿ ಸವಣೂರು ಸ.ಪ.ಪೂ. ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸಸಿ ವಿತರಣೆ ಮಾಡಿ ಮಾತನಾಡಿದರು.

ಹಚ್ಚ ಹಸಿರು
ಕಾಂಕ್ರೀಟ್‌ ಕಾಡಿನಿಂದಾಗಿ ನಮ್ಮ ಅಸ್ತಿತ್ವವನ್ನು ಉಳಿಸಲು ನಾವು ಹೆಣಗಾಡುವ ಸ್ಥಿತಿ ಬಂದಿದೆ. ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಗಳು ಬೋಳಾಗಿವೆ. ಮೊದಲೆಲ್ಲ ಎಪ್ರಿಲ್‌ ತನಕವೂ ತೊರೆ, ಹಳ್ಳಗಳಲ್ಲಿ ನೀರು ಹರಿಯುತ್ತಿತ್ತು. ಆದರೆ ಈಗ ಬೇಗನೆ ಬತ್ತಿಹೋಗುತ್ತಿದೆ. ಇದು ಭವಿಷ್ಯಕ್ಕೆ ಆತಂಕಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಪರಿಸರ ಉಳಿಸಲು ಹಸುರಿಕರಣಕ್ಕೆ ಒತ್ತು ನೀಡಬೇಕು. ಇಲಾಖೆಯ ಜತೆ ಸಾರ್ವಜನಿಕರೂ ಸಹಭಾಗಿಗಳಾಗಬೇಕು ಎಂದರು.

ಇಲಾಖೆ ವತಿಯಿಂದ ಗಿಡ
ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌. ಸುಬ್ರಹ್ಮಣ್ಯ ರಾವ್‌ ಹಾಗೂ ಪುತ್ತೂರು ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ ಮಾತನಾಡಿದರು. ಅಗತ್ಯ ಇರುವಲ್ಲಿಗೆ ಇಲಾಖೆಯ ವತಿಯಿಂದಲೇ ಗಿಡಗಳ ಪೂರೈಕೆ ಮಾಡಲಾಗುವುದು ಎಂದರು.  

ಜಾಗೃತಿ ಮೂಡಿಸಿ
ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್‌ ಬಿ.ಎಸ್‌. ಮಾತನಾಡಿ, ಶಾಲೆ ಕಾಲೇಜುಗಳಿಗೆ ಮಕ್ಕಳನ್ನು
ಸೇರ್ಪಡೆಗೊಳಿಸುವಾಗ ಅವರ ಕೈಯಲ್ಲಿ ಗಿಡ ನೆಡಿಸುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಒಂದನೇ ತರಗತಿಗೆ ಮಗುವನ್ನು ಸೇರ್ಪಡೆ ಮಾಡುವಾಗ ಗಿಡ ನೆಟ್ಟರೆ ಆತ ಶಾಲೆ ಬಿಡುವ ಸಮಯದಲ್ಲಿ ದೊಡ್ಡ ಮರವಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next