Advertisement

ಚಾಮರಾಜನಗರ ಎವರ್‌ಗ್ರೀನ್‌ ಅಭಿಯಾನ

04:41 AM May 23, 2020 | Lakshmi GovindaRaj |

ಚಾಮರಾಜನಗರ: ಆರಂಭದಿಂದ  ಇಲ್ಲಿಯವರೆಗೂ ಜಿಲ್ಲೆ ಕೋವಿಡ್‌ 19 ಸೋಂಕುಮುಕ್ತವಾಗಿ ಮುಂದುವರಿದಿದ್ದು, ಮುಂದೆಯೂ ಹಸಿರು ವಲಯವಾಗಿಯೇ  ಉಳಿಸಿಕೊಳ್ಳಲು ಜಿಲ್ಲಾಡಳಿತ “ಎವರ್‌ ಗ್ರೀನ್‌’ ಚಾಮರಾಜನಗರ  ಅಭಿಯಾನ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ಹೊಸ ಕಾರ್ಯಪಡೆ: ಹೊರ ರಾಜ್ಯಗಳಿಂದ ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಿಲ್ಲೆಗೆ ಆಗಮಿಸುವ ಸಂಭವ ಇದ್ದು, ಸಾಮಾಜಿಕ ಅಂತರವೂ ಸಾಮಾಜಿಕ ಹೊಣೆಗಾರಿಕೆಯಾಗಿ ಬದಲಾಗಬೇಕು.  ಪ್ರತಿಯೊಬ್ಬರೂ ಸ್ವಯಂ ಘೋಷಿತ ಕೋವಿಡ್‌ 19 ವಾರಿಯರ್‌ಗಳಾಗಿ ಕೆಲಸ ಮಾಡಬೇಕು. ಗ್ರಾಮ ಮಟ್ಟದಲ್ಲಿರುವ ಗ್ರಾಮ ಕಾರ್ಯಪಡೆ ಮತ್ತು ಕೋವಿಡ್‌ 19 ಸೈನಿಕರನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ ನಗರ ಮತ್ತು ಪಟ್ಟಣಗಳಲ್ಲಿ  ಹೊಸದಾಗಿ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ.

ಜನಜಾಗೃತಿ: ಮನೆ ಮನೆ ಭೇಟಿ, ಆರೋಗ್ಯ ವಿಚಾರಣೆ, ಕರ ಪತ್ರಗಳು ಹಾಗೂ ಟಾಂಟಾಂ ಮೂಲಕ ನಿರಂತರ ಜಾಗೃತಿ ಮೂಡಿಸುವುದು. ಶಾಸಕರು, ಸಂಸದರು  ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ  ಸಹಭಾಗಿತ್ವದಲ್ಲಿ ಜನಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ನಿಯಮ ಉಲ್ಲಂಘಿಸಿದರೆ ಕ್ರಮ: ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌, ತಾಪಂ ಇಒ, ಆರೋಗ್ಯಾಧಿಕಾರಿಗಳು ತಂಡವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತಾಲೂಕಿನ  ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸುವುದು. ಲಾಕ್‌ಡೌನ್‌ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸೆಕ್ಟರ್‌ ಮ್ಯಾಜಿಸ್ಟ್ರೇಟರ್‌ಗಳು ನಗರ, ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸುವುದು. ಸಾರ್ವಜನಿಕರು ಹಾಗೂ  ವಾಹನಗಳ ತಪಾಸಣೆ, ವೈದ್ಯಕೀಯ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಸೂಚಿಸಲಾಗಿದೆ.

ಅಭಿಯಾನದ ಉದ್ದೇಶವಿದು…: ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಸ್ವತ್ಛಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಅಪರಿಚಿತ ವ್ಯಕ್ತಿಗಳನ್ನು  ಪತ್ತೆಹಚ್ಚಿ ಸ್ಥಳೀಯ ವೈದ್ಯರಿಗೆ ಮಾಹಿತಿಯನ್ನು ನೀಡುವುದು. ಆರೋಗ್ಯ ಸೇತು, ಆ್ಯಪ್‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೂಚನೆ, ನಿರ್ದೇಶನ ನೀಡಲಾಗಿದೆ.

Advertisement

60 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು ಹಾಗೂ 10 ವರ್ಷ  ಒಳಪಟ್ಟ ಮಕ್ಕಳು ಮನೆಯಲ್ಲಿಯೇ ಇರುವಂತೆ ಮನವರಿಕೆ ಮಾಡುವುದು. ಜ್ವರ, ಶೀತ, ಕೆಮ್ಮು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಲಕ್ಷಣಗಳಿರುವವರು ಕಂಡು ಬಂದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಅಥವಾ ಜಿಲ್ಲಾ  ಕಂಟ್ರೋಲ್‌ ಟೋಲ್‌ ಫ್ರೀ ಸಂಖ್ಯೆ 1077 ಗೆ ನೀಡುವುದು ಎವರ್‌ಗ್ರೀನ್‌ ಅಭಿಯಾನದ ಪ್ರಮುಖ ಉದ್ದೇಶಗಳು.

ಜಿಲ್ಲೆಯನ್ನು ಕೋವಿಡ್‌ 19 ಮುಕ್ತವಾಗಿ ಉಳಿಸಿಕೊಳ್ಳಲು ಶ್ರಮಿಸಲಾಗುತ್ತಿದೆ. ಸಾರ್ವ ಜನಿಕರ ಸಹಕಾರ ಮುಖ್ಯ. ಪ್ರತಿ ಯೊಬ್ಬರೂ ಕೋವಿಡ್‌ 19 ವಾರಿಯರ್ಸ್‌ ಆಗಿ ಬದಲಾಗಬೇಕು. ಇದಕ್ಕಾಗಿ ಹತ್ತು ಹಲವು ಕಾರ್ಯಾಚರಣೆ  ಕೈಗೊಳ್ಳಲಾಗಿದೆ.
-ಡಾ. ಎಂ.ಆರ್‌. ರವಿ, ಜಿಲ್ಲಾಧಿಕಾರಿ

* ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next