Advertisement

ಸಂಜೆ-ಬೆಳಗ್ಗೆ ಚುಮುಚುಮು ಚಳಿ;ಹಗಲಲ್ಲಿ ಸುಡುಬಿಸಿಲು!

02:20 PM Dec 31, 2017 | |

ಸುಬ್ರಹ್ಮಣ್ಯ : ಸಂಜೆ ಮತ್ತು ಬೆಳಗ್ಗೆ ಚಳಿ. ಹಗಲಿನಲ್ಲಿ ಸುಡುಬಿಸಿಲು. ಮನೆಯಿಂದ ಹೊರಗೆ ಬರಲು ಅಸಾಧ್ಯವಾದಷ್ಟು ಚಳಿ. ಇತ್ತೀಚಿನ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಚಳಿ ಅಧಿಕ. ಎಲ್ಲರ ಬಾಯಲ್ಲೂ ಈಗ ಚಳಿಯದ್ದೆ ಮಾತು. ಚಳಿ ಯಥೇತ್ಛವಾಗಿದೆ. ಜತೆಗೆ ಬಿಸಿಲಿನ ಆಟವೂ ಇದೆ. ಜಿಲ್ಲೆಯಲ್ಲಿ ವಾರದಿಂದ ಚಳಿ ವಿಪರೀತವಾಗಿ ಶುರುವಾಗಿದೆ. ಅದರಲ್ಲೂ ಸಂಜೆಯಾಗುತ್ತಿದ್ದಂತೆ ಚಳಿ ಪ್ರಮಾಣ ಏರತೊಡಗಿದೆ. ಕಾರಣ ರಾಜ್ಯದಲ್ಲಿ ಅಕಾಲಿಕ ಚಳಿಗಾಲ ಇದೆ. ಮಳೆಗಾಲ ಸಂಪೂರ್ಣ ಮುಗಿಯುವ ಮುಂಚಿತವೇ ಚಳಿ ಪ್ರಮಾಣ ಅಪಾರವಾಗಿ ಕಾಣಿಸಿಕೊಂಡಿದೆ.

Advertisement

ಶುಕ್ರವಾರ ಬೆಳಗ್ಗೆ 16 ಡಿಗ್ರಿ ಸೆ. ಉಷ್ಣಾಂಶ ಸುಳ್ಯದಲ್ಲಿ ದಾಖಲಾಗಿದೆ. ದಿನದ ವಾತಾವರಣದಲ್ಲಿ ಅಷ್ಟೇನೂ ಏರಿಕೆ ಕಂಡಿಲ್ಲ. ಅಂದ ಮಾತ್ರಕ್ಕೆ ಇದನ್ನು ಚಳಿಗಾಲ ಎನ್ನಲಾಗದು. ಈ ಅವಧಿಯನ್ನು ಹವಾಮಾನ ಶಾಸ್ತ್ರದ ಪ್ರಕಾರ ಮುಂಗಾರೋತ್ತರ ಮಳೆಗಾಲ ಎನ್ನಲಾಗುತ್ತಿದೆ. ಡಿಸೆಂಬರ್‌ ಬಳಿಕದ ಫೆಬ್ರವರಿ ತನಕ ಚಳಿಗಾಲ.

ಈಗಿನದು ಮಳೆಗಾಲದೊಳಗಿನ ಚಳಿಗಾಲ. ಇದಕ್ಕೆ ಕಾರಣ ಹಗಲು-ರಾತ್ರಿಗಳ ಅವಧಿಯಲ್ಲಿನ ವ್ಯತ್ಯಾಸ. ಈಗ ಹಗಲಿಗಿಂತ ರಾತ್ರಿ ಅವಧಿ ಹೆಚ್ಚು. ಹೀಗಾಗಿ ಭೂಮಿ ಹೆಚ್ಚು ತಂಪಾಗಿ ಚಳಿ ಅನುಭವ ಉಂಟಾಗುತ್ತಿದೆ. ಈ ವಾತಾವರಣ ಇನ್ನು ಕೆಲದಿನವಷ್ಟೆ ಇರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ದಿನದ 24 ತಾಸುಗಳಲ್ಲಿ ರಾತ್ರಿ ಮತ್ತು ಹಗಲುಗಳ ಅವಧಿ ಸಮವಾಗಿರುತ್ತದೆ. ಆದರೆ ಸೂರ್ಯನ ಚಲನೆಯನ್ನಾಧರಿಸಿ ಈ ಅವಧಿಯಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತದೆ. ಈಗ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಸೋಕುವುದಿಲ್ಲ. ಹಗಲಿನ ಅವಧಿ ಕಡಿಮೆಯಾಗಿ ರಾತ್ರಿ ಅವಧಿ 25 ನಿಮಿಷಗಳಷ್ಟು ಹೆಚ್ಚಾಗಿದೆ.

ಇದರಿಂದ ಭೂಮಿ ಸೂರ್ಯನಿಂದ ಕಾದು ತಾಪ ಹೆಚ್ಚಾಗುವ ಬದಲು ರಾತ್ರಿ ವೇಳೆ ತಂಪಾಗಿ ಚಳಿ ಉಂಟಾಗುವಂತೆ ಮಾಡುತ್ತದೆ. ಈ ಮಧ್ಯೆ ಮೋಡಗಳು ಇಲ್ಲದ ಕಾರಣ ಭೂಮಿಯ ತಾಪ ಹೊರ ಹೋಗುತ್ತದೆ. ಅಂದರೆ ಮೋಡಗಳು ದಟ್ಟವಾಗಿದ್ದರೆ ಸೂರ್ಯನಿಂದ ಭೂಮಿಗೆ ಬಂದ ತಾಪ ಹೊರಹೋಗದಂತೆ ಮೋಡಗಳು ತಡೆಯುತ್ತಿದ್ದವು. ಮೋಡಗಳೇ ಇಲ್ಲದ ಕಾರಣ ತಾಪಕ್ಕೆ ತಡೆಯೇ ಇಲ್ಲದಂತಾಗಿ ಭೂಮಿ ಬಹುಬೇಗ ತಂಪಾಗುತ್ತದೆ.ಸದ್ಯಕ್ಕೆ ಸಾಗರಗಳಿಂದ ಶೀತ ಮಾರುತವಿಲ್ಲ. ವಾಯುಭಾರ ಕುಸಿತ ವಿಲ್ಲ. ಹವಾಮಾನ ಇಲಾಖೆ ಪ್ರಕಾರ ಇನ್ನು ಹಲವು ಸಮಯದ ವರೆಗೆ ಇದೇ ರೀತಿ ಚಳಿ ವಾತವರಣ ಕಾಣಿಸಿಕೊಳ್ಳಲಿದೆ. ಹಗಲಿನಲ್ಲಿ ಬಿಸಿಲು ಕಾಣಿಸಿಕೊಂಡರೂ ರಾತ್ರಿ ಚಳಿ ಹೆಚ್ಚಾಗಿರುತ್ತದೆ.

Advertisement

ಕಾರಣ ತಿಳಿಯುತ್ತಿಲ್ಲ
ವಾಯುಭಾರ ಕುಸಿತ ಎಲ್ಲೂ ಕಂಡುಬರುತ್ತಿಲ್ಲ. ಇಷ್ಟಿದ್ದರೂ ಈ ಸಮಯದಲ್ಲಿ ಅಧಿಕ ಚಳಿ ಕಂಡು ಬರುತ್ತಿದೆ. ವಿಪರೀತ ಚಳಿಗೆ ಇಂತಹದೇ ಕಾರಣ ಎಂದು ಹೇಳಲಾಗದು. ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ ಬಳಿಕವಷ್ಟೆ ಕಾರಣ ತಿಳಿಯಬಹುದು.
– ಪಿ.ಜಿ.ಎಸ್‌.ಎನ್‌. ಪ್ರಸಾದ್‌ ಬೆಳ್ಳಾರೆ,
ಪ್ರಗತಿಪರ ಕೃಷಿಕ (ಹವ್ಯಾಸಿ ಮಳೆಮಾಪಕ)

ಇದೇ ಮೊದಲು
 ಕಳೆದ ಕೆಲ ವರ್ಷಗಳಲ್ಲಿ ಇಷ್ಟೊಂದು ಚಳಿ ಕಂಡು ಬಂದದ್ದು ಇಲ್ಲ. ಈ ಬಾರಿ ಹೆಚ್ಚು ಚಳಿ ಅನುಭವಕ್ಕೆ ಬಂದಿದೆ. ಚಳಿ ಹೆಚ್ಚು ದಿನ ಇರಲಿಕ್ಕಿಲ್ಲ ಎಂದೆನಿಸುತ್ತಿದೆ.
ಶಿವಪ್ರಸಾದ ಪೆರಾಲು,
  ಮಂಡೆಕೋಲು ಕೃಷಿಕ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next