ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ ಕಾಲೇಜುಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಆಟೋ ಚಾಲಕರು ಸೇರಿ ಬೆಳಗ್ಗೆ ವೇಳೆ ದುಡಿಮೆ ಮಾಡುವವರು ಉನ್ನತ ವ್ಯಾಸಂಗ ಮಾಡಿ ಪದವಿ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಗಳಲ್ಲಿ ಸಂಜೆ ಕಾಲೇಜು ಆರಂಭಿಸುವ ಆಲೋಚನೆ ಸರ್ಕಾರದ ಮುಂದಿದೆ.
ಖಾಸಗಿ ಕಾಲೇಜುಗಳು ಏಪ್ರಿಲ್ 1ರಿಂದಲೇ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುತ್ತಿದ್ದು, ಈ ವ್ಯವಸ್ಥೆಯನ್ನು ಸರ್ಕಾರಿ ಶಾಲೆಗಳಲ್ಲೂ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು. ಮಕ್ಕಳ ಭವಿಷ್ಯತ್ತಿನ ದೃಷ್ಟಿಯಿಂದ ಸರ್ಕಾರ ಎಲ್‌ಕೆಜಿ, ಯುಕೆಜಿಯಿಂದಲೇ ಆಂಗ್ಲಭಾಷೆ ಕಲಿಕೆಗೆ ತೀರ್ಮಾನಿಸಿದೆ. ಈಗಾಗಲೇ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೆ ಆಂಗ್ಲ ಭಾಷೆ ಕಲಿಕೆಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳು
ಇರಲಿವೆ ಎಂದರು.