ನವಲಗುಂದ: ಲೋಕೋಪಯೋಗಿ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ತಾಲೂಕಿನಲ್ಲಿ ಕೈಗೊಂಡ ಕಾಮಗಾರಿಗಳು ಅವಧಿ ಮುಗಿದರೂ ಇನ್ನೂ ಪೂರ್ಣಗೊಂಡಿಲ್ಲ.
ಯಮನೂರ ಹಾಳಕುಸುಗಲ್ಲ ರಸ್ತೆ ಸುಧಾರಣೆಗೆ 2 ಕೋಟಿ ರೂ., ರೋಣ ಕ್ರಾಸ್‌ದಿಂದ ದಾಟನಾಳ ಗ್ರಾಮದ ರಸ್ತೆಗೆ 2 ಕೋಟಿ ರೂ., ಹೆಬ್ಟಾಳದಿಂದ ಹಂಚಿನಾಳ ರಸ್ತೆಗೆ 1 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಗ್ರಾಮೀಣ ಮುಖ್ಯರಸ್ತೆಗಳ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮೀಣ ರಸ್ತೆಗಳಿಗೆ ಕೋಟಿಗಟ್ಟಲೇ ಅನುದಾನ ಬಂದರೂ ಕಾಮಗಾರಿ ಅವಧಿಯೊಳಗೆ ಮುಗಿದಿಲ್ಲ.
ರಸ್ತೆ ಸರಿ ಇದ್ದ ಗ್ರಾಮಗಳಿಗೆ ಬಸ್ ಸಂಚಾರ ಸುಗಮವಾಗಿದ್ದರೆ, ರಸ್ತೆಗಳು ಕೆಟ್ಟಿರುವ ಗ್ರಾಮಗಳಿಗೆ ಬಸ್ ಸಂಚಾರ ವಿರಳವಾಗಿದೆ. ಮಕ್ಕಳು ಶಾಲೆ ಕಲಿಯಲು ಪಟ್ಟಣಕ್ಕೆ ಹೋಗಲು ತೀವ್ರ ತೊಂದರೆಯಾಗಿದೆ. ರೈತರು, ಮಹಿಳೆಯರು, ವೃದ್ಧರಾದಿಯಾಗಿ ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ.
ಮಳೆ ಇರುವುದರಿಂದ ಕಾಮಗಾರಿ ಆಗಿರುವುದಿಲ್ಲ. ಗುತ್ತಿಗೆದಾರರು ಅವಧಿ ವಿಸ್ತರಣೆ ಪತ್ರ ತೆಗೆದುಕೊಂಡು ಕೆಲಸವನ್ನು ಮುಂದುವರಿಸುತ್ತಾರೆ. –
ಎಸ್.ಎನ್.ಸಿದ್ದಾಪುರ, ಎಇಇ, ಲೋಕೋಪಯೋಗಿ ಇಲಾಖೆ
ಯಮನೂರ, ಪಡೇಸೂರ, ಹಾಳಕುಸಗಲ್ಲ ರಸ್ತೆ ಕಾಮಗಾರಿಗೆ ಎಷ್ಟು ಬಾರಿ ಅನುದಾನ ಹಾಕಲಾಗಿದೆ. ಕಾಮಗಾರಿ ಮಾಡಿ ಮುಗಿಸುವುದರೊಳಗೆ ರಸ್ತೆ ಡಾಂಬರ್ ಕಿತ್ತು ಹೋಗಿರುತ್ತದೆ. ಈ ಭಾಗದ ಸಾರ್ವಜನಿಕರು ಮಾತ್ರ ತೊಂದರೆ ಅನುಭವಿಸುತ್ತಿರುವುದು ತಪ್ಪಿಲ್ಲ. –
ರಮೇಶ ನವಲಗುಂದ, ಪಡೇಸೂರ ಗ್ರಾಮದ ರೈತ
ನಾಗನೂರ, ಸೊಟಕನಾಳ, ಅರಹಟ್ಟಿ, ಕಡದಳ್ಳಿ, ಕೊಂಗವಾಡ, ತಡಹಾಳ ರಸ್ತೆಗಳಲ್ಲಿ ಮಳೆಗಾಲದಲ್ಲಿ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ. ವಾಹನಗಳು ಹೋಗಲು ರಸ್ತೆ ಇಲ್ಲದಂತಾಗಿದೆ. ದೊಡ್ಡ ದೊಡ್ಡ ತಗ್ಗುಗಳಿಂದ ಸಂಚಾರ ದುಸ್ತರವಾಗಿದೆ. ಕ್ಷೇತ್ರದ ಶಾಸಕರು, ಸಚಿವರು ಈ ಭಾಗ ಮರೆತಿದ್ದಾರೆ. –
ಮುತ್ತು ಕಿರೇಸೂರ, ಸೊಟಕನಾಳ ಗ್ರಾಮಸ್ಥ
-ಪುಂಡಲೀಕ ಮುಧೋಳೆ