Advertisement
ಜಿಲ್ಲೆ ಮೊದಲೇ ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿದೆ. ಮಳೆಯ ಅಭಾವದಿಂದ ಈ ಭಾಗದಲ್ಲಿ ಅಂತರ್ಜಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕೆರೆ, ಬಾವಿ ನೀರಿನ ಮೂಲಗಳನ್ನೇ ನಂಬಿ ಜೀವನ ನಡೆಸುವ ಜನತೆ ಕೊಡ ನೀರಿಗೆ ತೋಟ, ಗದ್ದೆಗಳಿಗೆ ಅಲೆದಾಡುತ್ತಿದ್ದಾರೆ.
Related Articles
Advertisement
•ಕೋಟಿ ಕೋಟಿ ಬಂದರೂ, ಸಮಸ್ಯೆ ಕಗ್ಗಂಟು
ಜಿಲ್ಲೆಯ 737 ಜನವಸತಿ ಪ್ರದೇಶಗಳಲ್ಲಿ 282 ಗ್ರಾಮಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಜಿಲ್ಲಾಡಳಿತದ ವರದಿಯೇ ಹೇಳುತ್ತದೆ. ಪ್ರತಿ ಬೇಸಿಗೆಯಲ್ಲಿ ಏಪ್ರಿಲ್, ಮೇನಲ್ಲಿ ಸಮಸ್ಯಾತ್ಮಕ ಹಳ್ಳಿಗಳ ಸಂಖ್ಯೆ 330ರ ಗಡಿದಾಟುತ್ತದೆ. ನೀರಿನ ಹಾಹಾಕಾರ ಉಲ್ಭಣಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಎದ್ದು ಬಿದ್ದು ಕ್ರಿಯಾಯೋಜನೆ ರೂಪಿಸಲು ಓಡಾಡುತ್ತಿರುತ್ತಾರೆ. ಆದರೆ ಪೂರ್ವ ಯೋಜನೆ ಅವರಲ್ಲಿ ಕಾಣಲ್ಲ.
ವಿಶೇಷವೆಂಬಂತೆ, ತುಂಗಭದ್ರಾ ಡ್ಯಾಂ ಜಿಲ್ಲೆಯಲ್ಲೇ ಇದ್ದರೂ ನೀರಿನ ಬವಣೆ ಮಾತ್ರ ನೀಗಿಲ್ಲ. ಕಳೆದ ವರ್ಷ ಡ್ಯಾಂ ಭರ್ತಿಯಾದರೂ ಜಿಲ್ಲೆಯ ಜನ ತೋಟ, ಗದ್ದೆ, ಕೆರೆ, ಬಾವಿಗಳಲ್ಲಿ ನಿಂತ ನೀರನ್ನೇ ಬಳಸುತ್ತಿದ್ದಾರೆ. ಪರ ಊರುಗಳಿಂದ ಜನರು ನೀರು ತಂದು ಜೀವನ ನಡೆಸುವಂತಹ ಸ್ಥಿತಿಯಿದೆ. ಇಲ್ಲಿನ ಶಾಸಕ, ಸಂಸದರು ಶಾಶ್ವತ ಯೋಜನೆ ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಕ್ರಿಯಾಯೋಜನೆ: ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಬವಣೆ ನಿವಾರಿಸಲು ಸರ್ಕಾರ ಜಿಪಂನ ಟಾಸ್ಕ್ ಫೋರ್ಸ್‌ನಡಿ 3.75 ಕೋಟಿ, ಎಸ್‌ಡಿಆರ್‌ಎಫ್‌ನಡಿ 1.30 ಕೋಟಿ, ಜಿಲ್ಲಾಧಿಕಾರಿ ಬರ ಪರಿಹಾರದಲ್ಲಿ 3.43 ಕೋಟಿ ಸೇರಿದಂತೆ ಒಟ್ಟು ಕುಡಿಯುವ ನೀರು ಪೈಪ್‌ಲೈನ್ ದುರಸ್ತಿ, ಕೊಳವೆ ಬಾವಿ ಬಾಡಿಗೆ, ಕೊಳವೆಬಾವಿ ಕೊರೆಯಿಸುವುದು ಸೇರಿ ಜನರಿಗೆ ನೀರು ಪೂರೈಕೆಗೆ 8.48 ಕೋಟಿ ರೂ.ನಲ್ಲಿ ಕ್ರಿಯಾಯೋಜನೆ ರೂಪಿಸಿ ಬಿಡುಗಡೆಯನ್ನೂ ಮಾಡಿದೆ. ಆದರೆ ಜಿಲ್ಲೆಯ 110 ಗ್ರಾಮಗಳಲ್ಲಿ 138 ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸುವಂತಹ ಸ್ಥಿತಿಯಿದೆ. ಇನ್ನೂ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪುರ, ಹನುಮನಾಳ, ಸಾಸ್ವಿಹಾಳ, ಅಡವಿಬಾವಿ, ರ್ಯಾವಣಕಿ, ಚಂದ್ರಗಿರಿ ಸೇರಿ ಜಿಲ್ಲೆಯ 13 ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಮೇ ಕೊನೆಯಲ್ಲಿ ಈ ಹಳ್ಳಿಗಳ ಸಂಖ್ಯೆ 40ರ ಗಡಿ ದಾಟಬಹುದು ಎಂದು ಜಿಲ್ಲಾಡಳಿತ ಲೆಕ್ಕಾಚಾರ ಹಾಕಿಕೊಂಡಿದೆ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಹಲವು ಕಡೆ ಕೆಟ್ಟಿವೆ. ದುರಸ್ತಿಗೆ ಗ್ರಾಪಂಗಳು ನರಳಾಡುತ್ತಿದ್ದರೆ, ಸಂಘ-ಸಂಸ್ಥೆಗಳ ಆಶ್ರಯದಲ್ಲಿರುವ ಘಟಕಗಳು ಸರಿಯಾಗಿವೆ. ಹಲವೆಡೆ ಘಟಕಗಳಿಗೆ ನೀರಿಗೆ ಬರ ಬಂದಿದೆ. ಪ್ರತಿ ವರ್ಷ ಕುಡಿಯುವ ನೀರಿಗೆ ಕೋಟಿ ಕೋಟಿ ಅನುದಾನ ಬಂದರೂ ಸಮಸ್ಯೆ ಕಗ್ಗಂಟಾಗುತ್ತಿದೆ.
•ದತ್ತು ಕಮ್ಮಾರ