ಮೂರು ವರ್ಷದ ಡಿಗ್ರಿ ಮುಗಿದಿತ್ತು. ಅಸೈನ್ಮೆಂಟ್, ಸೆಮಿನಾರ್‌ಗಳಿಂದ ಮುಕ್ತಿ ದೊರೆಯಿತು ಅಂತ ತುಂಬಾನೇ ಖುಷಿಯಾಗಿದ್ದು ನಿಜ. ಆದರೆ, ಕೆಲವೇ ದಿನಗಳಲ್ಲಿ ಮನೆಯಲ್ಲಿಯೇ ಇದ್ದು ಇದ್ದು ಬೇಸರವಾಗತೊಡಗಿತು. ರಜೆಯಲ್ಲಿ ಸುಮ್ಮನೆ ಕಾಲ ಕಳೆಯುವ ಬದಲು ಎಲ್ಲಾದರೂ ಕೆಲಸಕ್ಕೆ ಸೇರಿ, ಬಂದ ಹಣದಿಂದ ಏನಾದರೂ ತೆಗೆದುಕೊಳ್ಳೋಣ ಎಂದು ಯೋಚಿಸಿದೆ.
ನಾನು ಮಾಡಿರುವ ಡಿಗ್ರಿಗೆ ತಕ್ಕನಾದ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಅಹಂ ಒಂದು ಕಡೆ ಇತ್ತು. ಆದರೆ, ಕೆಲಸ ಹುಡುಕುವುದಕ್ಕೆ ಶುರು ಮಾಡಿದಾಗಲೇ ತಿಳಿದಿದ್ದು ನಾವು ಅಂದುಕೊಂಡ ಹಾಗೆ ಯಾವುದೂ ಆಗುವುದಿಲ್ಲ ಅಂತ. ಪಾಲಿಗೆ ಬಂದ ಕೆಲಸವನ್ನೇ ಶ್ರದ್ಧೆಯಿಂದ, ನಿಷ್ಟೆಯಿದ ಮಾಡಿದರೆ ಜೀವನ ಸಾರ್ಥಕ ಎಂಬ ಅನಿಸಿಕೆ ಕೂಡ ಆಗಲೇ ಜೊತೆಯಾಯಿತು.
ಕೊನೆಗೆ ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಕೆಲಸ ಸಿಕ್ಕಿದ್ದಕ್ಕೇ, ಏನೋ ಸಾಧಿಸಿಬಿಟ್ಟೆ ಅನ್ನಿಸುವಷ್ಟು ಸಂತೋಷವಾಯಿತು. ಯಾರ ಜೊತೆಯಲ್ಲೂ ಚಟಪಟ ಮಾತಾಡುವುದನ್ನು ಕಲಿತಿರದಿದ್ದ ನನಗೆ ಬಟ್ಟೆ ಅಂಗಡಿಯಲ್ಲಿ ಗ್ರಾಹಕರೊಂದಿಗೆ ಯಾವ ರೀತಿ ಮಾತನಾಡಬೇಕು, ಯಾವ್ಯಾವ ರೀತಿಯ ಬಟ್ಟೆಗಳಿವೆ ಎಂದು ತಿಳಿದುಕೊಳ್ಳಲು ಕೆಲವು ದಿನಗಳೇ ಬೇಕಾಯ್ತು.
ಸಾಧ್ಯವಾದಷ್ಟು ನಯವಾದ ಮಾತುಗಳಿಂದ ಗ್ರಾಹಕರ ಮನ ಒಲಿಸಿ ಹೆಚ್ಚು ಬಟ್ಟೆಗಳನ್ನು ಮಾರಬೇಕು ಎಂಬ ಆದೇಶ ಮಾಲೀಕರದ್ದಾಗಿತ್ತು. ವ್ಯಾಪಾರ ಕಡಿಮೆಯಾಯಿತು ಎಂಬ ಕಾರಣಕ್ಕೆ ಯಜಮಾನರಿಂದ ಬೈಸಿಕೊಂಡ ದಿನಗಳೂ ಇವೆ. ಆದರೆ ಯಾವುದಕ್ಕೂ ಪ್ರತಿ ಉತ್ತರ ಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಕಾರಣ, ಎಲ್ಲಿ ಕೆಲಸದಿಂದ ತೆಗೆದು ಹಾಕಿ ಬಿಡುತ್ತಾರೋ ಎಂಬ ಭಯ. ಆದರೆ ಕೆಲಸ ಮಾಡುತ್ತಾ, ಬೈಸಿಕೊಳ್ಳುತ್ತಾ, ಬಟ್ಟೆಗಳ ಬಗ್ಗೆ, ಬಟ್ಟೆ ಅಂಗಡಿಯಲ್ಲಿ ಯಾವ ರೀತಿ ಗ್ರಾಹಕರನ್ನು ಮರುಳು ಮಾಡುತ್ತಾರೆ ಎಂಬುದರ ಬಗ್ಗೆ ಅರಿತುಕೊಂಡೆ.
ಹೀಗೆ ಕೆಲಸ ಮಾಡುತ್ತಿರುವಾಗಲೇ ಕೊನೆಗೆ ತಿಂಗಳ ಸಂಬಳ ಪಡೆಯುವ ದಿನ ಬಂದೇ ಬಿಟ್ಟಿತು. ಸಂಜೆ ನನ್ನ ಕೈಗೆ ಬಂದ ಹಣ ನೋಡಿ ಏನೋ ಒಂದು ರೀತಿಯ ತೃಪ್ತಿ, ಹೆಮ್ಮೆಯ ಭಾವನೆ. ನನ್ನ ದುಡಿಮೆಗೆ ಸಿಕ್ಕ ಸಂಬಳ 3,500 ರೂ. ಅದು ನನ್ನ ಮೊದಲ ಸಂಪಾದನೆ. ಅದರಲ್ಲಿ ಅಮ್ಮನಿಗೆ ಏನಾದರೂ ತೆಗೆದುಕೊಂಡು ಹೋಗಬೇಕೆಂದು ತುಂಬಾನೇ ಆಸೆ ಇತ್ತು. ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಈಗ ಕೂಡ ಆ ಕೊರತೆ ಕಾಡುತ್ತಲೇ ಇದೆ.
* ಅಂಜಲಿ. ಡಿ.ವಿ, ಶಂಕರಘಟ್ಟ