Advertisement

ಹನಿ ನೀರಿಗೂ ದೊಣ್ಣೆರಾಯನ ಅಪ್ಪಣೆ ಬೇಕು

11:33 PM Feb 18, 2023 | Team Udayavani |

ನೀರಿನ ಬಗ್ಗೆಯೇ ಮಾತು. ಮನೆಗೆ ಯಾರೇ ಬರಲಿ, ದೂರದಿಂದಾದರೂ ಬರಲಿ, ಹತ್ತಿರದವರೇ ಬರಲಿ. ಮೊದಲು ಕೇಳುವ ಉಪಚಾರವೆಂದರೆ, “ಕುಡಿಯಲು ನೀರು ಬೇಕೆ?’ ಅದು ನಮ್ಮ ಅತಿಥಿ ಸತ್ಕಾರದ ಮೊದಲ ಸಂಭಾಷಣೆ.
ನಮ್ಮ ಸಂಸ್ಕೃತಿ ಹಾಗೂ ಆಚರಣೆಯಲ್ಲಿ ನೀರಿಗೆ ಮಹತ್ವ ಕೊಟ್ಟಿದ್ದೇವೆ. ಬದುಕಲು ಬೇಕಾದ ಕನಿಷ್ಠ ಅಗತ್ಯವಾಗಿಯೂ ನೀರು ಪರಿಗಣಿಸಲ್ಪಟ್ಟಿದೆ. ಹಾಗಾಗಿ ನೀರಿನ ಲೆಕ್ಕ ಯಾರೂ ಕೇಳುವುದೂ ಇಲ್ಲ ಹಾಗೂ ಇಟ್ಟುಕೊಳ್ಳುವುದೂ ಇಲ್ಲ. ಇದು ಬರೀ ಮನೆಗಳ ಕಥೆಯಲ್ಲ, ಹೊಟೇಲ್‌ಗ‌ಳಲ್ಲೂ ಹಾಗೆ ಯೇ. ತಿಂಡಿ ಪಡೆದರೆ ದುಡ್ಡು ಪಾವತಿಸಬೇಕು, ಬಾಯಾರಿಕೆ ತಣಿಸಿಕೊಳ್ಳಲು ನೀರು ಕುಡಿಯಲು ಯಾವ ದರವೂ ನೀಡಬೇಕಿಲ್ಲ.

Advertisement

ಒಂದುವೇಳೆ ನೀರು ಕದಿಯುವವರಿದ್ದಾರೆ ಎಂದೇನಾದರೂ ಪ್ರಸ್ತಾವಿಸಿದರೆ, ನೀರು ಕಳ್ಳರಾ ಎಂದು ಅಚ್ಚರಿ ವ್ಯಕ್ತಪಡಿಸಿ ಅಂತಿಮವಾಗಿ, “ಹೋಗಲಿ ಬಿಡಿ, ನೀರಷ್ಟೇ ಕದ್ದದ್ದಲ್ಲವೇ? ಕದ್ದರೂ ಎಷ್ಟೆಂದು ಕದಿಯಬಲ್ಲ? ಕೆಲವು ಲೀಟರ್‌ಗಳಷ್ಟು. ಪರವಾಗಿಲ್ಲ’ ಎಂದು ಬಿಡುತ್ತೇವೆ. ಯಾಕೆಂದರೆ ನಮಗೆ ನೀರನ್ನು ಯಾರೂ ಕದಿಯಲಾರರು ಎಂಬ ನಂಬಿಕೆ ಹಾಗೂ ಕದ್ದರೂ ಅದು ಬದುಕಿಗೆ ಇರಬೇಕು ಎಂಬ ಮನೋಭಾವ. ಇಷ್ಟೆಲ್ಲ ಆದ ಮೇಲೂ ಪೊಲೀಸ್‌ ಠಾಣೆಗೆ ದೂರು ಕೊಟ್ಟರೆ ರಾಜಿ ಸಂಧಾನ. ಮೊಕದ್ದಮೆ ದಾಖಲಿಲ್ಲ. ಜಲ ಇಲಾಖೆ ಅಧಿಕಾರಿಗಳೂ ಅಷ್ಟೇ ಮೊದಲು ಎಚ್ಚರಿಕೆ, ಬಳಿಕ ಸಣ್ಣ ಮೊತ್ತದ ದಂಡ. ಆದರೆ ಒಂದು ಸ್ಪಷ್ಟ ವ್ಯವಸ್ಥೆಯ ಕೊರತೆಯಿಂದ ಈ ಜಲ ಕಳವೆಂಬ ರಕ್ಕಸ ಒಂದು ದಿನ ನಮ್ಮನ್ನೆಲ್ಲ ಜಲಕ್ಷಾಮದ ಬಲಿಗಂಬಕ್ಕೆ ಕರೆ ದೊಯ್ಯಬಹುದು ಎಂದರೆ ನಂಬಲೇಬೇಕು.

ದೂರದ ಕೀನ್ಯಾದಿಂದ ಸಮಾಚಾರವೊಂದು ಬಂದಿದೆ. ಜಲ ಕೊರತೆ ನಿಭಾಯಿಸಲು ಪ್ರತ್ಯೇಕವಾದ ನಿಗಮ ಸ್ಥಾಪಿಸಿದೆ. ಜತೆಗೆ ಜಲ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಉಸ್ತುವಾರಿಗಾಗಿ ಪ್ರತ್ಯೇಕ ಪೊಲೀಸ್‌ ಪಡೆಯನ್ನೇ ನಿಯೋಜಿಸಿದೆ. ಇದು ಜಲ ಆರಕ್ಷಕ ಪಡೆ. ಅಣೆಕಟ್ಟುಗಳು, ನದಿಮೂಲಗಳು, ಜಲಾನಯನ ಪ್ರದೇಶಗಳು, ಅರಣ್ಯಜಾಲ, ಸ್ಥಳೀಯ ನೀರು ಸಂಗ್ರಹಾಗಾರಗಳು, ಕೊಳವೆ ಬಾವಿಗಳು, ನಿತ್ಯದ ನೀರು ಪೂರೈಕೆ ಜಾಲ-ಹೀಗೆ ಎಲ್ಲ ಹಂತದಲ್ಲೂ ನೀರು ಪೋಲು, ಕಳವನ್ನು ತಡೆಯುವುದೇ ಈ ಪಡೆಯ ಪ್ರಮುಖ ಹೊಣೆಗಾರಿಕೆ.

ನೀರಿನ ಸಮರ್ಪಕ ಬಳಕೆಗೆ ನಮ್ಮಲ್ಲೂ ಹಲವು ಪ್ರಯೋಗಗಳನ್ನು ನಡೆಸಿದ್ದೇವೆ. ಮುಖ್ಯವಾಗಿ ನೀರು ಬಳಕೆದಾರರ ಸಂಘಗಳು. ಆದರೆ ಈ ಆರಕ್ಷಕ ಪಡೆ ಹೊಸ ಆಲೋಚನೆ. ಈ ಪ್ರಯೋಗಕ್ಕೂ ಕಾರಣವೆಂದರೆ ಸ್ಥಳೀಯ ಸರಕಾರ ಅಪಾರ ಪ್ರಮಾಣದ ಹಣವನ್ನು ಹೂಡಿಕೆ ಮಾಡಿ ನೀರಿನ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಸುಮಾರು 15 ದಶಲಕ್ಷ ಸಸಿಗಳನ್ನು ನೆಡಲಿದೆಯಂತೆ. 100 ಅಣೆಕಟ್ಟುಗಳನ್ನು ಸ್ಥಾಪಿಸುತ್ತದೆಯಂತೆ. ಇದಲ್ಲದೇ ಲಕ್ಷಾಂತರ ಕೊಳವೆಬಾವಿಗಳು!

ಹಾಗೆಂದು ಈ ಸೋರಿಕೆ ಅಥವಾ ಕಳವು, ಕಳ್ಳರು ಬರೀ ಆಫ್ರಿಕಾ ಖಂಡದಲ್ಲಿಲ್ಲ. ಜಗತ್ತಿನಾದ್ಯಂತ ಇವರ ಜಾಲವಿದೆ. ಕೊನೇಹಂತವೆಂದರೆ ನಮ್ಮ ಊರಿನವರೆಗೂ. ಮುಂಬಯಿ ನಗರಕ್ಕೆ ನಿತ್ಯವೂ ಸುಮಾರು ನಾಲ್ಕು ಸಾವಿರ ದಶಲಕ್ಷ ಲೀಟರ್‌ (ಎಂಎಲ್‌ಡಿ) ನೀರು ಅಗತ್ಯವಿದೆ. ಸುಮಾರು 3,800 ದಶಲಕ್ಷ ಲೀಟರ್‌ಗಳಷ್ಟು ಪೂರೈಕೆಯಾಗುತ್ತಿದೆ. ಇದರಲ್ಲಿ ಸೋರಿಕೆ ಮತ್ತು ಕಳವಾಗುತ್ತಿರುವ ನೀರಿನ ಪ್ರಮಾಣ ಸುಮಾರು ಶೇ. 30 ರಿಂದ 35. ವಾರ್ಷಿಕ ಲೆಕ್ಕಾಚಾರದಲ್ಲಿ ಈ ಸೋರಿಕೆಯಿಂದ ಆಗುತ್ತಿರುವ ನಷ್ಟ ಅಂದಾಜು 400 ಕೋಟಿ. ಬೆಂಗಳೂರಿನ ಕಥೆ ಕೇಳ್ಳೋಣ. ಅಲ್ಲಿ ಸುಮಾರು 1,500 ದಶಲಕ್ಷ ಲೀಟರ್‌ ನೀರು ನಿತ್ಯದ ಆವಶ್ಯಕತೆ. ಕಾವೇರಿಯಿಂದ ಪೂರೈಕೆಯಾಗುವ ಪ್ರಮಾಣವಿದು. ಇದರಲ್ಲಿ ಶೇ. 30 ರಿಂದ 35 ರಷ್ಟು ನೀರು ಲೆಕ್ಕಕ್ಕೇ ಸಿಗದೇ ಕಾಣೆಯಾಗುತ್ತದೆ. ಈ ಸೋರಿಕೆ ಮತ್ತು ಕಳವು ಬರೀ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ವ್ಯಾಪಕವಾಗಿದೆ. ಮಂಗಳೂರಿನಲ್ಲಿ ಲಭ್ಯ ಮಾಹಿತಿ ಪ್ರಕಾರ ನಿತ್ಯ ಪೂರೈಕೆಯಾಗುವ ನೀರು 140 ಎಂಎಲ್‌ಡಿ. ಅದರಲ್ಲಿ ಸುಮಾರು 20 ಎಂಎಲ್‌ಡಿ ಸೋರಿಕೆ ಯಾಗುತ್ತದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪೂರೈಕೆಯಾಗುವ 32 ಎಂಎಲ್‌ಡಿ ಪೈಕಿ 2 ರಿಂದ 3 ಎಂಎಲ್‌ಡಿಯಷ್ಟು ನೀರು ಗಾಯಬ್‌ ಆಗುತ್ತದೆ.

Advertisement

ಈ ನೀರಿನ ಕಳವು ಅಥವಾ ಸೋರಿಕೆ ಇಡೀ ಜಗತ್ತಿನ ಸಮಸ್ಯೆ. ಬರೀ ಸಮಸ್ಯೆ ಎಂದರೆ ಅದರ ಗಹನತೆ ಅರಿವಿಗೆ ಬಾರದು. ಮುಂದಿನ ವರ್ಷಗಳಲ್ಲಿ ತೀವ್ರಗೊಳ್ಳುವ ನೀರಿನ ಕೊರತೆಗೆ ಈ ಸೋರಿಕೆ ಮತ್ತು ಕಳವಿನ ಕೊಡುಗೆ ಸಾಕಷ್ಟಿರಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಂಶೋಧನೆಯ ಪ್ರಕಾರ ಜಗತ್ತಿನಲ್ಲಿ ವಿವಿಧ ಉದ್ದೇಶಗಳಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 30ರಿಂದ 50ರಷ್ಟು ನೀರು ಕಳ್ಳರ ಪಾಲಾಗುತ್ತಿದೆ.

ಈ ಕಳವು ಮತ್ತು ಸೋರಿಕೆಯಲ್ಲಿ ಹಲವು ವಿಧಾನಗಳಿವೆ. ನೀರಿನ ಕಂದಾಯ ಕಟ್ಟದೇ ಅಕ್ರಮ ಸಂಪರ್ಕಗಳನ್ನು ಹೊಂದುವುದು (ಒಂದು ವರ್ಷದ ಹಿಂದೆ ಬೆಂಗಳೂರು ಒಂದರಲ್ಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಅಕ್ರಮ ನಳ್ಳಿ ಸಂಪರ್ಕಗಳಿದ್ದವು), ನೀರು ಪೂರೈಕೆ ವ್ಯವಸ್ಥೆಯ ಮಧ್ಯೆ ಅಕ್ರಮ ಮಾರ್ಗಗಳನ್ನು ಅನುಸರಿಸಿ ನೀರನ್ನು ಬಳಸಿಕೊಳ್ಳುವುದು, ಖಾಸಗಿ ಅಕ್ರಮ ನೀರು ಪೂರೈಕೆ ಜಾಲ, ಈ ನೀರು ಬಾಟಲಿ ವ್ಯಾಪಾರ ಜಾಲ, ನೀರಿನ ಮೂಲದ ಹಂತದಲ್ಲೇ ಅಕ್ರಮ ಸಂಪರ್ಕ ಪಡೆದು ಕದಿಯುವುದು- ಹತ್ತಾರು ವಿಧಗಳಿವೆ. ಇದು ದಿನಬಳಕೆಯಿಂದ ಕೃಷಿ, ಉದ್ಯಮದವರೆಗೂ ಈ ಅಕ್ರಮದ ನೆರಳು ಸಾಗುತ್ತದೆ. ಇವೆಲ್ಲವೂ ನಮ್ಮನ್ನು ಎಂಥ ಇಕ್ಕಟ್ಟಿನ ಸ್ಥಿತಿಗೆ ತಳ್ಳುತ್ತಿದೆಯೆಂದರೆ ಹೇಳಲಿಕ್ಕಾಗದು.

ಇಂಥದೊಂದು ಕಠಿನ ಪರಿಸ್ಥಿತಿಯಲ್ಲಿ ಕೀನ್ಯಾದ ಜಲ ಆರಕ್ಷಕ ಪಡೆಯನ್ನು ನೆನಪಿಸಿಕೊಳ್ಳೋಣ. ಹಲವು ಪರಿಣತರ ಪ್ರಕಾರ ಕೀನ್ಯಾದ ಈ ಹೊಸ ಆಲೋಚನೆ ಜಲ ಸಂಪನ್ಮೂಲದ ಸಮರ್ಪಕ ನಿರ್ವಹಣೆಯಲ್ಲಿ ದೊಡ್ಡ ಕ್ರಾಂತಿ ಮಾಡಬಹುದಂತೆ. ಇದ್ದರೂ ಇರಬಹುದು. ಕೀನ್ಯಾದಲ್ಲಿ ಹೀಗೆ ಲೆಕ್ಕಕ್ಕೆ ಸಿಗದೇ ಪೋಲಾಗುತ್ತಿರುವ ನೀರಿನಿಂದ ಸರಕಾರ ವಾರ್ಷಿಕ ಸುಮಾರು 80 ದಶಲಕ್ಷ ಅಮೆರಿಕನ್‌ ಡಾಲರ್‌ (10.6 ಬಿಲಿಯನ್‌ ಕೀನ್ಯಾ ಶಿಲ್ಲಿಂಗ್‌ಗಳು)ಗಳಷ್ಟು ನಷ್ಟ ಅನುಭವಿಸುತ್ತಿದೆ.

ಈ ಜಲಕ್ಷಾಮದ ಕೊರತೆಗೆ ಮೊದಲು ಗುರಿಯಾಗುವ ರಾಷ್ಟ್ರಗಳೆಂದರೆ ಬಡ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು. ಈಗಾಗಲೇ ಆಫ್ರಿಕಾ ಖಂಡಕ್ಕೆ ಇದರ ಬಿಸಿ ತಾಗತೊಡಗಿದೆ. ಮುಂದಿನ ಎರಡು ವರ್ಷದ ಹೊತ್ತಿಗೆ 3 ಶತಕೋಟಿ (ಬಿಲಿಯನ್‌) ಮಂದಿ ಜಲಕ್ಷಾಮದ ಬಿಸಿಯನ್ನು ಅನುಭವಿಸಲಿದ್ದಾರೆ. ಹಾಗೆಯೇ ಈ ಜಲಕ್ಷಾಮದ ನೆರಳು ಆಫ್ರಿಕಾವಷ್ಟೇ ಅಲ್ಲ, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾದ ರಾಷ್ಟ್ರಗಳು, ಚೀನ, ಆಸ್ಟ್ರೇಲಿಯಾ, ಅಮೆರಿಕದ ಕೆಲವು ಭಾಗ ಹೀಗೆ ಎಲ್ಲೆಡೆಗೂ ಆವರಿಸಿಕೊಳ್ಳುತ್ತಿದೆ. ಈ ದಕ್ಷಿಣ ಏಷ್ಯಾದ ಗುತ್ಛದಲ್ಲಿ ಭಾರತವೂ ಸೇರಿದೆ ಎನ್ನುವುದು ಆಘಾತಕಾರಿಯಾದುದೇ. ಉಳಿದ ರಾಷ್ಟ್ರಗಳೆಂದರೆ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ದೀವ್ಸ್‌, ಪಾಕಿಸ್ಥಾನ, ನೇಪಾಲ ಹಾಗೂ ಶ್ರೀಲಂಕಾ. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಔದ್ಯಮಿಕ ಕ್ಷೇತ್ರ, ಕೈಗಾರಿಕೆಗಳು, ನಗರಗಳು- ನಾಗಾಲೋಟದಿಂದ ಏರುತ್ತಿರುವ ನೀರಿನ ಬೇಡಿಕೆ- ಎಲ್ಲವನ್ನೂ ಸರಿದೂಗಿಸಬೇಕೆಂದರೆ ಈ ಜಲಗಳ್ಳರನ್ನು ಹಿಡಿಯಲೇಬೇಕು. ಅದಕ್ಕೆ ಇನ್ನಷ್ಟು ಕಠಿನ ಕಾನೂನುಗಳೂ ಬೇಕು. ಅದೊಂದು ಅಪರಾಧ ಎಂಬ ಭಾವವನ್ನೂ ಮೂಡಿಸಬೇಕು. ಇಲ್ಲವಾದರೆ ನಮ್ಮಲ್ಲೂ ನೀರಿನ ಟ್ಯಾಂಕ್‌ಗೆ ಒಂದರಂತೆ ಜಲ ಪೊಲೀಸ್‌ ಠಾಣೆಯನ್ನು ನೇಮಿಸಬೇಕಾಗುತ್ತದೆ.

ಲೆಕ್ಕಕ್ಕೆ ತೆಗೆದುಕೊಳ್ಳದ (ಕಳವು, ಸೋರಿಕೆಯನ್ನು ಸಾಮಾನ್ಯವಾಗಿ ಎಂದುಕೊಳ್ಳುವ ಪ್ರಜ್ಞೆ) ನೀರಿನ ಬೆಲೆ ಎಷ್ಟೊಂದು ದೊಡ್ಡದಲ್ಲವೇ? ಹಾಗಾಗಿ ಹನಿ ನೀರನ್ನು ಕಾಯಲು ದೊಣ್ಣೆರಾಯರು ಬೇಕು.

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next