ಸಾಗರ: ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿರುವುದು ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ಕಡೆ ಅರಣ್ಯ ಸಾಗುವಳಿದಾರರನ್ನು ಉಳಿಸುವ ಭರವಸೆ ನೀಡುತ್ತಿದ್ದರೆ ಇನ್ನೊಂದು ಕಡೆ ರೈತರನ್ನು ಒಕ್ಕಲೆಬ್ಬಿಸುವ ನಿಲುವು ಗೊಂದಲಮಯವಾಗಿದೆ ಎಂದರು.
ರೈತರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈತ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸಲು ಅವಿರತ ಶ್ರಮಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲೂ ಈ ಪ್ರಯತ್ನ ನಡೆದಿದ್ದು ಕೇಂದ್ರಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ
9,400 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಇಂತಹ ಪ್ರಯತ್ನಗಳ ನಡುವೆಯೂ ರಾಜ್ಯ ಅರಣ್ಯ ಸಚಿವರ ನಿಲುವು ಅನುಮಾನಕ್ಕೆ ಕಾರಣವಾಗಿದೆ. ನಾವು ಹೊಸದಾಗಿ ಒತ್ತುವರಿದಾರರಿಗೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ. ಆದರೆ ರೈತರು ಸಾಗುವಳಿ ಮಾಡಿಕೊಂಡಿರುವುದನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದರು.
ಸಾಗರ ತಾಳಗುಪ್ಪ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ನಾನು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ಜನರಿಗೆ ಭರವಸೆ ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಅಮೃತ್ ಭಾರತ್ ನಿಲ್ದಾಣ್ ಯೋಜನೆಯಡಿ ಗತಿಶಕ್ತಿ ಘೋಷವಾಕ್ಯದಡಿ ತಾಳಗುಪ್ಪ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲು 27 ಕೋಟಿ ರೂ., ಸಾಗರ ರೈಲ್ವೆ ನಿಲ್ದಾಣಕ್ಕೆ 26 ಕೋಟಿ ರೂ. ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ 24 ಕೋಟಿ ರೂ. ಮಂಜೂರಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ 180 ಕೋಟಿ ರೂ. ಮಂಜೂರಾಗಿದ್ದು ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಇದರ ಜೊತೆಗೆ ತುಮರಿ ಸೇತುವೆ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ಶಿವಪ್ಪನಾಯಕ ನಗರದಿಂದ ಮರಕುಟುಕವರೆಗೆ ರಾಷ್ಟ್ರೀಯ ಹೆದ್ದಾರಿ 766 ಸಿ ಅಗಲೀಕರಣಕ್ಕೂ ಹಣ ಮಂಜೂರಾಗಿದೆ ಎಂದು ಹೇಳಿದರು.
ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ತಾಲೂಕಿನಲ್ಲಿ ಯುಎಸ್‌ಓಎಫ್ ಯೋಜನೆಯಡಿ 39 ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಟವರ್ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ತಾಲೂಕಿಗೆ 50 ಟವರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಾಜಿ ಸಚಿವ ಹಾಲಪ್ಪ ಮಾತನಾಡಿ, ಪ್ರಧಾನ ಮಂತ್ರಿಯವರು ಕರೆ ನೀಡಿರುವ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಅ. ಒಂದರಂದು ಪಕ್ಷದ ವತಿಯಿಂದ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7 ರಿಂದ 9-30 ರವರೆಗೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಸ್ವಚ್ಚತಾ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ. ರಾಜನಂದಿನಿ, ಪ್ರಸನ್ನ ಕೆರೆಕೈ, ಲೋಕನಾಥ ಬಿಳಿಸಿರಿ, ಗಣೇಶಪ್ರಸಾದ್, ಕುಪೇಂದ್ರ, ಆರ್. ಶ್ರೀನಿವಾಸ್, ಮಧುರಾ ಶಿವಾನಂದ್, ವಿ.ಮಹೇಶ್, ಪ್ರಶಾಂತ್ ಕೆ.ಎಸ್., ಮಾಲತೇಶ್ ಇನ್ನಿತರರು ಹಾಜರಿದ್ದರು. ತದನಂತರ ಸಂಸದ ಬಿವೈಆರ್ ಕೆಳದಿ, ಭೀಮನಕೋಣೆ ಮೊದಲಾದೆಡೆ ಬಿಜೆಪಿ ಪಕ್ಷದ ಬೂತ್ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು.