Advertisement

ಮೇ 31ರಂದು ಸಿಎಂರಿಂದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

12:57 PM May 23, 2017 | Team Udayavani |

ಹುಣಸೂರು: ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 31 ರಂದು ಭೇಟಿ ನೀಡಲಿದ್ದು ಅಂದು ಸುಮಾರು 400 ಕೋಟಿ ರೂ ಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದು, ಅಧಿಕಾರಿಗಳು ಸರ್ವಸನ್ನದ್ದರಾಗಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಂದೀಪ್‌ರ ಸಮ್ಮುಖದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಅಂದು ಮೂರು ಗಂಟೆಗೆ ನಗರಸಭಾ ಮೈದಾನದಲ್ಲಿ ಹಲವಾರು ವರ್ಷಗಳ ರೈತರ ಬಹುಬೇಡಿಕೆಯ 150 ಕೋಟಿ ರೂ ವೆಚ್ಚದ ಹನಗೋಡು ಅಣೆಕಟ್ಟೆ ಹಾಗೂ ನಾಲೆಗಳ ಆಧುನೀಕರಣ,

-ಹಾರಂಗಿ ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ಸಿಮೆಂಟ್‌ ಕಾಂಕ್ರೀಟ್‌ ಲೈನಿಂಗ್‌ ಮತ್ತು ಅಡ್ಡಮೋರಿಗಳ 99 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ, ಗದ್ದಿಗೆ ಬಳಿಯ ಸೂಳೆಕೆರೆ ಅಭಿವೃದ್ಧಿಗಾಗಿ 12 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗೆ, ಬನ್ನಿಕುಪ್ಪೆ ಕೆಇಇ ಬಸ್‌ ಸ್ಟೇಷನ್‌ ಹಾಗೂ ಜೀನಹಳ್ಳಿ, ಬಿಳಿಕೆರೆ, ಹಳೇಬೀಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸುವರು.

ಕಲ್ಲಹಳ್ಳಿ ಕಾಮಗಾರಿಗೂ ಚಾಲನೆ: ಮಾಜಿ ಮುಖ್ಯಮಂತ್ರಿ ದೇವರಾಜೇ ಅರಸರ ಹುಟ್ಟೂರಾದ ಕಲ್ಲಹಳ್ಳಿಯಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ 2 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.

ಸಾಗುವಳಿ ವಿತರಣೆ: ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಉದ್ದೂರು ಕಾವಲ್‌ ಹಾಗೂ ಆಸ್ಪತ್ರೆ ಕಾವಲ್‌ ಸೊಸೈಟಿ ಭೂಮಿಯ ಸಕ್ರಮದ ಹಕ್ಕುಪತ್ರ ಹಾಗೂ ಶೆಟ್ಟಹಳ್ಳಿ ಮತ್ತು ಹೆಬ್ಬಳ್ಳ ಗಿರಿಜನ ಪುನರ್ವಸತಿ ಕೇಂದ್ರದ ಗಿರಿಜನರಿಗೆ ಭೂ ಒಡೆತನದ ಹಕ್ಕುಪತ್ರ ವಿತರಿಸುವರು.

Advertisement

ಮೇಗಾಡೇರಿ ಉದ್ಘಾಟನೆ: ಹುಣಸೂರು-ಮೈಸೂರು ರಸ್ತೆಯ ಮೂಕನಹಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಮೈಮೂಲ್‌ ಮೆಗಾಡೇರಿಯನ್ನು ಸಹ ಅಂದೇ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್‌.ಸಿ.ಮಹದೇವಪ್ಪ, ಕಂದಾಯ ಮಂತ್ರಿ ಕಾಗೋಡುತಿಮ್ಮಪ್ಪ, ಆರೋಗ್ಯ ಮಂತ್ರಿ ರಮೇಶ್‌ಕುಮಾರ್‌ ಸೇರಿದಂತೆ ಅನೇಕ ಸಚಿವರು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿ, ಮೇ.31ರ ಬೆಳಗ್ಗೆ ಮುಖ್ಯಮಂತ್ರಿಗಳು ಪಿರಿಯಾಪಟ್ಟಣಕ್ಕೆ ಹೆಲಿಕಾಪ್ಟರ್‌ ಮೂಲಕ ಬಂದು ನಂತರ ರಸ್ತೆ ಮಾರ್ಗವಾಗಿ ಮಧ್ಯಾಹ್ನ ಹುಣಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಇಲಾಖೆಗಳ ಅಭಿವೃದ್ಧಿಕಾರ್ಯಗಳ ಪಟ್ಟಿಯಲ್ಲಿ ಆಡಳಿತಾತ್ಮಕ ಒಪ್ಪಿ$ಗೆ ದೊರೆತ ಕಾಮಗಾರಿಗಳನ್ನು ಮಾತ್ರ ಪರಿಗಣಿಸಿ ಅಧಿಕಾರಿಗಳು ತಹಶೀಲ್ದಾರಿಗೆ ಪಟ್ಟಿ ಸಲ್ಲಿಸಬೇಕು.

ಶಂಕುಸ್ಥಾಪನೆ, ಉದ್ಘಾಟನೆಯ ನಾಮ ಫ‌ಲಕದ ಹೆಸರುಗಳನ್ನು ತಮ್ಮ ಕಚೇರಿಯಿಂದ ಅಧಿಕೃತ ಆದೇಶ ಪಡೆದುಕೊಳ್ಳಬೇಕೆಂದು ಸೂಚಿಸಿ, ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು. ಎಎಸ್‌ಪಿ ಹರೀಶ್‌ಪಾಂಡೆ, ತಹಶೀಲ್ದಾರ್‌ ಎಸ್‌.ಪಿ.ಮೋಹನ್‌ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next