Advertisement

ಡ್ರ್ಯಾಗನ್‌ಗೆ ವಿಕಾಸ್‌ ಶಾಕ್‌: ಪ್ಯಾಂಗಾಂಗ್‌ ತಟದಲ್ಲಿನ ಯಶಸ್ಸಿನ ಹಿಂದಿದೆ ಈ ನಿಗೂಢ ಪಡೆ

02:30 AM Sep 04, 2020 | Hari Prasad |

ಹೊಸದಿಲ್ಲಿ: ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸೋ ತಟದಲ್ಲಿ ಶನಿವಾರ ಭಾರತೀಯ ಸೇನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯ ಹಿಂದೆ ‘ಎಸ್ಟಾಬ್ಲಿಷ್ಮೆಂಟ್‌ 22’ ಎಂಬ ರಹಸ್ಯ ಪಡೆಯ ಪಾತ್ರವಿತ್ತೇ?

Advertisement

ಹೌದು ಎನ್ನುತ್ತಿವೆ ಮೂಲಗಳು. ಚೀನ ಸೇನೆಯನ್ನು ಹಿಮ್ಮೆಟ್ಟಿಸಿ ಈ ಪ್ರದೇಶವನ್ನು ಭಾರತೀಯ ಸೇನೆಯು ತನ್ನ ಹತೋಟಿಗೆ ಪಡೆಯುವಲ್ಲಿ ವಿಕಾಸ್‌ ಬೆಟಾಲಿಯನ್‌ ಎಂದೂ ಕರೆಯಲ್ಪಡುವ ಎಸ್‌ಎಫ್ಎಫ್ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತಿದೆ.

ಪೂರ್ವ ಲಡಾಖ್‌ನಲ್ಲಿ ಈ ಎಸ್‌ಎಫ್ಎಫ್ ಘಟಕವು ಕಾರ್ಯಾಚರಿಸುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.

ಸಂಪುಟ ಕಾರ್ಯಾಲಯ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಆಡಳಿತಾತ್ಮಕ ನಿಯಂತ್ರಣದಡಿ ಬರುವ ವಿಶೇಷ ಮುಂಚೂಣಿ ಪಡೆಯನ್ನೇ (ಎಸ್‌ಎಫ್ಎಫ್) ಎಸ್ಟಾಬ್ಲಿಷ್ಮೆಂಟ್‌ 22 ಎಂದೂ, ವಿಕಾಸ್‌ ಬೆಟಾಲಿಯನ್‌ ಎಂದೂ ಕರೆಯಲಾಗುತ್ತದೆ.

1962ರಲ್ಲಿ ಸ್ಥಾಪನೆ: 1962ರ ಯುದ್ಧದ ಅಂತ್ಯದ ವೇಳೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಚೀನದ ನಿರಂತರ ಅತಿಕ್ರಮಣ ಯತ್ನವನ್ನು ತಡೆಯಲೆಂದೇ ಈ ಪಡೆಯನ್ನು ರಚಿಸಿದ್ದರು. ಭಾರತದಲ್ಲಿ ನೆಲೆಯೂರಿದ್ದ ಟಿಬೆಟಿಯನ್‌ ನಿರಾಶ್ರಿತರನ್ನೇ ಇದರ ಕಮಾಂಡೋಗಳಾಗಿ ನೇಮಕ ಮಾಡಲಾಗಿತ್ತು.

Advertisement

ಈ ಪಡೆಯ ಯೋಧರಿಗೆ ಆರಂಭದಲ್ಲಿ ಇಂಟೆಲಿಜೆನ್ಸ್‌ ಬ್ಯೂರೋ, ರಾ ಮತ್ತು ಸಿಐಎಯಿಂದ ತರಬೇತಿ ನೀಡಲಾಗುತ್ತದೆ. ಈ ಪಡೆ ಸ್ಥಾಪನೆಯಾದ ಮೊದಲ ಕೆಲವು ದಶಕಗಳವರೆಗೆ, ಅಣ್ವಸ್ತ್ರ ಸಿಡಿತಲೆಗಳನ್ನು ನಿಯೋಜಿಸುವ ಚೀನದ ಯೋಜನೆಗಳ ಮೇಲೆ ಕಣ್ಣಿಡಲೆಂದೇ ಇದರ ಯೋಧರನ್ನು ಬಳಸಲಾಗುತ್ತಿತ್ತು.

ನಿಗೂಢ ಪಡೆ: ಶನಿವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಈ ಯೋಧರು ಪಾಲ್ಗೊಂಡಿದ್ದರೇ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಆದರೆ, ಲಡಾಖ್‌ ಹಾಗೂ ಇತರೆ ಮುಂಚೂಣಿ ನೆಲೆಗಳಲ್ಲಿ ಎಸ್‌ಎಫ್ಎಫ್ ನ ಉಪಸ್ಥಿತಿಯ ಬಗ್ಗೆ ಯಾರೂ ಅಲ್ಲಗಳೆಯುತ್ತಲೂ ಇಲ್ಲ.

ಏಕೆಂದರೆ, ಈ ಪಡೆಯು ಅತ್ಯಂತ ರಹಸ್ಯವಾಗಿ ಕಾರ್ಯಾಚರಿಸುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿಯನ್ನು ಬದಲಿಸಲು ಮುಂದಾಗಿದ್ದ ಚೀನ ಸೇನೆಯ ಯತ್ನವನ್ನು ವಿಫ‌ಲಗೊಳಿಸಿದ್ದು ಇದೇ ಪಡೆ ಎಂದು ಹೇಳಲಾಗುತ್ತಿದೆ.

ಇದೊಂದು ನಿಗೂಢ ಪಡೆಯಾಗಿದ್ದು, ಇದು ಭಾರತದ ಸೇನೆಯ ಭಾಗವೂ ಅಲ್ಲ. ಇದು ನೇರವಾಗಿ ಪ್ರಧಾನಿ ಕಾರ್ಯಾಲಯದ ಅಡಿ ಬರುವ ಕಾರಣ, ಏನೇ ವಿಷಯವಿದ್ದರೂ ಸಂಪುಟ ಕಾರ್ಯಾಲಯದ ಭದ್ರತೆಗೆ ಸಂಬಂಧಿಸಿದ ಪ್ರಧಾನ ನಿರ್ದೇಶನಾಲಯದ ಮೂಲಕ ಪಿಎಂಒವನ್ನೇ ನೇರವಾಗಿ ಸಂಪರ್ಕಿಸುತ್ತದೆ.

ಆಪರೇಷನ್‌ ಈಗಲ್‌ನಿಂದ ವಿಜಯ್‌ವರೆಗೆ
ಆರಂಭಿಕ ಹಂತದಲ್ಲಿ ಅಮೆರಿಕದ ವಿದೇಶಿ ಗುಪ್ತಚರ ಸಂಸ್ಥೆ ಸಿಐಎ (ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ) ಹಾಗೂ ಭಾರತದ ಐಬಿ 5 ಸಾವಿರಕ್ಕೂ ಅಧಿಕ ಟಿಬೆಟಿಯನ್ನರಿಗೆ ತರಬೇತಿ ನೀಡಿತ್ತು. ಈವರೆಗೆ ಸಿಐಎ ಚೀನದ ಪಿಎಲ್‌ಎ ವಿರುದ್ಧ ಹೋರಾಡಲು ಸಾವಿರಾರು ಟಿಬೆಟಿಯನ್‌ ಗೆರಿಲ್ಲಾಗಳಿಗೆ ತರಬೇತಿ ನೀಡಿದೆ.

ಈ ಎಸ್‌ಎಫ್ಎಫ್ ತಂಡವು ಆಪರೇಷನ್‌ ಈಗಲ್‌(1971ರ ಬಾಂಗ್ಲಾ ಯುದ್ಧದ ವೇಳೆ ಚಿತ್ತಗಾಂಗ್‌ ಹಿಲ್ಸ್‌ ಅನ್ನು ಹಿಡಿತಕ್ಕೆ ಪಡೆಯಲು ನಡೆದ ಕಾರ್ಯಾಚರಣೆ), ಆಪರೇಷನ್‌ ಬ್ಲೂಸ್ಟಾರ್‌, ಆಪರೇಷನ್‌ ಮೇಘದೂತ್‌ ಹಾಗೂ ಆಪರೇಷನ್‌ ವಿಜಯ್‌(ಕಾರ್ಗಿಲ್‌ ಯುದ್ಧ 1999) ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದೆ.

ಭಾರತ-ರಷ್ಯಾ ಎಕೆ 47 ರೈಫ‌ಲ್‌ ಡೀಲ್‌
ಎಕೆ-47 203 ರೈಫ‌ಲ್‌ಗ‌ಳ ಉತ್ಪಾದನೆಗೆ ಸಂಬಂಧಿಸಿದ ಪ್ರಮುಖ ಒಪ್ಪಂದವೊಂದನ್ನು ಭಾರತ ಮತ್ತು ರಷ್ಯಾ ಅಂತಿಮಗೊಳಿಸಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಭೇಟಿಯಲ್ಲಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೇ ಈ ಒಪ್ಪಂದ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

ಎಕೆ-47 203 ಎಂಬುದು ಎಕೆ-47 ರೈಫ‌ಲ್‌ನ ಸುಧಾರಿತ ಆವೃತ್ತಿಯಾಗಿದೆ. ಇದು ಭಾರತದ ಇನ್ಸಾಸ್‌ 5.56 x 45 ಮಿ.ಮೀ. ಅಸಾಲ್ಟ್ ರೈಫ‌ಲ್‌ನ ಬದಲಾಗಿ ಬಳಕೆಗೆ ಬರಲಿವೆ. ಭಾರತೀಯ ಸೇನೆಗೆ ಸದ್ಯ 7.70 ಲಕ್ಷ ಎಕೆ-47 203 ರೈಫ‌ಲ್‌ಗ‌ಳ ಅಗತ್ಯವಿದ್ದು, ಈ ಪೈಕಿ 1 ಲಕ್ಷ ರೈಫ‌ಲ್‌ಗ‌ಳನ್ನು ಆಮದು ಮಾಡಲಾಗುತ್ತದೆ. ಉಳಿದವುಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ ಎಂದೂ ಮಾಧ್ಯಮಗಳ ವರದಿ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next