Advertisement

ವಚನ ಸಾಹಿತ್ಯದಲ್ಲಿ ಸಾರ್ಥಕ ಬದುಕಿನ ಸಾರ

12:24 PM Apr 07, 2022 | Team Udayavani |

ಬೆಳಗಾವಿ: ಜೀವನದ ಸಾರ್ಥಕ ಬದುಕಿನ ಸಾರವೆಲ್ಲವೂ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ಜಗಜಂಪಿ ಹೇಳಿದರು.

Advertisement

ಇಲ್ಲಿಯ ವಡಗಾಂವಿ ಚಾವಡಿಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಜೀವನದ ಪ್ರತಿಯೊಂದು ಹಂತವನ್ನು ಶರಣರು ವಚನ ಸಾಹಿತ್ಯದಲ್ಲಿ ಸವಿಸ್ತಾರವಾಗಿ ಹಾಗೂ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ದೇವರ ದಾಸಿಮಯ್ಯರು ಕಲಬುರ್ಗಿ ಜಿಲ್ಲೆ ಮುದೇನೂರು ರಾಮಯ್ಯ ಮತ್ತು ಶಂಕರಮ್ಮ ಎಂಬ ದಂಪತಿಗಳ ಮಗನಾಗಿ ಸಾಮಾನ್ಯ ಕುಟುಂಬದಲ್ಲಿ ಜನಸಿದರು.ಅವರು ವಚನಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು.

ಶಿವನಿಗೆ ದೇಹ ವಸ್ತ್ರವನ್ನು ಕೊಟ್ಟಿರುವುದರಿಂದ ದಾಸಿಮಯ್ಯರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿದೆ. ದಾಸಿಮಯ್ಯ ಸಮುದಾಯವನ್ನು ದಾಸಿಮಾರ್ಯರು ಎಂದು ಕರೆಯುತ್ತಿದ್ದರು. ದಾಸಿಮಾರ್ಯರು ಎಂದರೆ ಹಿರಿಯ, ದೊಡ್ಡವರು ಎನ್ನುವ ಅರ್ಥದಲ್ಲಿ ದಾಸಿಮಯ್ಯರ ಸಮುದಾಯವನ್ನು ಕರೆಯುತ್ತಿದ್ದರು ಎಂದು ಹೇಳಿದರು.

ದಂಪತಿಗಳಲ್ಲಿ ಅನುಭಾವ ಮತ್ತು ಅನುಭವ ಇದ್ದರೆ ಜೀವನ ಸಂತೋಷಮಯವಾಗಿರುತ್ತದೆ ಎಂಬುದಕ್ಕೆ ದಾಸಿಮಯ್ಯ ದಂಪತಿ ಸಾಕ್ಷಿ. ಸಂಸಾರದಲ್ಲಿ ಸದ್ಗತಿ ಇದೆ ನಾನು ಅಲ್ಲ; ಎಲ್ಲ ನಿನ್ನದೇ, ಎಲ್ಲ ನೀನೇ ಎಂದರೆ ಸಂಸಾರ ಸುಖಕರವಾಗಿರತ್ತದೆ ಎನ್ನುವ ದಾಸಿಮಯ್ಯರ ವಚನಸಾರವನ್ನು ವಿವರಿಸಿದರು.

Advertisement

ಗಂಡಿಗೆ ಒಂದು ಗುಣವಿದ್ದರೆ ಹೆಣ್ಣಿಗೆ ಆರು ಗುಣವಿದೆ ಎನ್ನುತ್ತ ನಟ ಡಾ.ರಾಜಕುಮಾರ ಚಿತ್ರವನ್ನು ನೆನಪಿಸುತ್ತಾ, ಹೆಣ್ಣಿನಲ್ಲಿ ಎಲ್ಲ ಗುಣಗಳು ಅಡಗಿವೆ. ಹೆಣ್ಣು ಸಮಯಕ್ಕೆ ತಕ್ಕಂತೆ ಗಂಡಿನ ಪ್ರಮುಖ ಹಂತದಲ್ಲಿ ತನ್ನದೇಯಾದ ಪಾತ್ರ ವಹಿಸುತ್ತಾಳೆ ಎನ್ನುವುದಕ್ಕೆ ದೇವರ ದಾಸಿಮಯ್ಯರ ಹೆಣ್ಣಿನ ಮಹತ್ವ ಸಾರುವ ವಚನ ಸಾಹಿತ್ಯವನ್ನು ಜಗಜಂಪಿ ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಿರೂಪಿಸಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ವಂದಿಸಿದರು. ಸತ್ಯನಾರಾಯಣ ಭಟ್‌ ಅವರ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಸದಸ್ಯರಾದ ದೀಪಾಲಿ ಟೋಪಗಿ, ರೇಷ್ಮಾ ಕಾಮಕಾರ, ಪ್ರೀತಿ ಕಾಮಕಾರ, ಸಮಾಜದ ಮುಖಂಡರಾದ ವೆಂಕಟೇಶ ವನಹಳ್ಳಿ, ಪರಶುರಾಮ ಢಗೆ, ನಾರಾಯಣ ಕುಲಗೋಡ, ಅಶೋಕ ಹಣಬರಟ್ಟಿ, ಗುರುಸಿದ್ದಪ್ಪ ತಿಗಡಿ, ಮಾರುತಿ ಬಂಗೋಡಿ, ಬಸವರಾಜ ಜಡಫನ್ನವರ ಇತರರು ಇದ್ದರು.

ಭಾವಚಿತ್ರ ಮೆರವಣಿಗೆ ಖಾಸಭಾಗ ಶ್ರೀ ಬಸವೇಶ್ವರ ವೃತ್ತದಿಂದ ದೇವರ ದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ಹಲವು ಕಲಾ ತಂಡಗಳಿಂದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ವಡಗಾವಿ ಚಾವಡಿಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣ ತಲುಪಿತು. ನಂತರ ಅಲ್ಲಿ ಜಯಂತಿ ವೇದಿಕೆ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next