Advertisement

ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬಕ್ಕೆ ಎಸ್ಸೆಸ್‌ ತರಾಟೆ

03:15 PM Nov 10, 2017 | Team Udayavani |

ದಾವಣಗೆರೆ: ಪ್ರಥಮ ಹಂತದಲ್ಲೇ ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಯಾಗಿ ಎರಡೂವರೆ ವರ್ಷ ಕಳೆದರೂ ಕಾಮಗಾರಿ ಪ್ರಾರಂಭಿಸದೇ ಇರುವುದಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ರೋಷನ್‌ ಬೇಗ್‌ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರ್ಟ್‌ಸಿಟಿ ಯೋಜನೆಯ ಅನುಷ್ಠಾನ ಮತ್ತು ವಿಮರ್ಶೆ ಕಮಿಟಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿ ಎರಡೂವರೆ ವರುಷವಾದರೂ ಈವರೆಗೆ ಕಾಮಗಾರಿ ಯಾವುದೇ ಆರಂಭಿಸಿಲ್ಲ. ಮೊದಲ ಹಂತದಲ್ಲೇ ದಾವಣಗೆರೆ ಸ್ಮಾಟ್‌ ìಸಿಟಿಗೆ ಆಯ್ಕೆಯಾದುದು ಸಂತಸ. ಆದರೆ, ಕಾಮಗಾರಿ ಆರಂಭಿಸದೇ ಅಧಿಕಾರಿಗಳು ಕೇವಲ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಯೋಜನೆಯಲ್ಲಿ ಸುಮಾರು 750 ಎಕರೆ ಪ್ರದೇಶ ಅಭಿವೃದ್ಧಿಯನ್ನು ಆಯೋಜಿಸಲಾಗಿದ್ದು, ಪ್ರಮುಖವಾಗಿ ರಸ್ತೆ ಮರು ನಿರ್ಮಾಣ, ಒಳಚರಂಡಿ, 24 ಗಂಟೆ ನೀರು ಸರಬರಾಜು, ಭೂಗತ ವಿದ್ಯುತ್‌ ತಂತಿ ಅಳವಡಿಕೆ ಸೇರಿದಂತೆ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನ ಆರಂಭಿಸಲು ಪ್ರತಿ ಸಭೆಯಲ್ಲಿ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕಾಮಗಾರಿ ಪ್ರಾರಂಭಿಸದೇ ಇರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನ ಪ್ರಶ್ನಿಸಿದರು.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಕಾಮಗಾರಿಗಳ ಆರಂಭಿಸದೇ ಕೇವಲ ಸಬೂಬು ಹೇಳುವುದೇ ಅಧಿಕಾರಿಗಳ ಕೆಲಸವಾಗಿದೆ. ಈ ರೀತಿಯಾದರೆ ಯೋಜನೆ ಅನುಷ್ಠಾನ ಹೇಗೆ ಸಾಧ್ಯವಾಗುತ್ತದೆ ಎಂದು ಸಚಿವ ರೋಷನ್‌ಬೇಗ್‌ ಗಮನ ಸೆಳೆದರು. 2015 ಆ. 27 ರಂದು ದಾವಣಗೆರೆ ನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದೆ. 2016 ರ ಮೇ. 19 ರಂದು ರೂಪುರೇಷೆ ಅಂತಿಮಗೊಂಡಿತು. 2017 ರ ಜ. 2 ರಂದು ಹೈಡೆಕ್‌ ಸಂಸ್ಥೆಯವರಿಗೆ ಯೋಜನೆ ಅನುಷ್ಠಾನಕ್ಕೆ ಏಜೆನ್ಸಿ ನೀಡಲಾಯಿತು. ಆದರೂ ಸಹ ಇನ್ನು ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮುಗಿಯದೇ ಇರುವುದು ವಿಪರ್ಯಾಸ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮಾನವಾಗಿ ಯೋಜನಾ ವೆಚ್ಚ ಭರಿಸುತ್ತಿದ್ದು ಕಾಮಗಾರಿಗಳು ಉತ್ತಮ ಗುಣಮಟ್ಟ ಕಾಯ್ದು ಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು  ಎಂದರು. ಮೇಯರ್‌ ಅನಿತಾಬಾಯಿ, ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆದಪ್ಪ, ನಗರಪಾಲಿಕೆ ಅಧೀಕ್ಷಕ ಅಭಿಯಂತರ ಎಂ.
ಸತೀಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next