ಬೆಂಗಳೂರು: ಶಿಕ್ಷಣ ಸಚಿವರು ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಘೋಷಿಸುತ್ತಾರೆ. ಆದರೆ ಇಲಾಖೆ ಅಸೈನ್ಮೆಂಟ್ ನಿಂದ ವಿದ್ಯಾರ್ಥಿಗಳ ಮೌಲ್ಯಾಂಕನ ನಿರ್ಧರಣೆ ಸುತ್ತೋಲೆ ಹೊರಡಿಸುತ್ತದೆ. ತಾಳಮೇಳ ಇಲ್ಲದ ಬಿಜೆಪಿ ಸರ್ಕಾರ ಗೊಂದಲದ ಗೂಡಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಅಂಕದ ಆಧಾರದಲ್ಲಿ ಶ್ರೇಣಿ ನೀಡಿ ಉತ್ತೀರ್ಣ ಮಾಡಿದ ರೀತಿಯಲ್ಲೇ, ಎಸ್ಸೆಸ್ಸೆಲ್ಸಿ ಅಂಕ ಆಧರಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನೂ ಪಾಸು ಮಾಡಬೇಕು, ಈ ಅಸೈನ್ಮೆಂಟ್ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕೋವಿಡ್ ನಿಂದಾಗಿ ಪಾಠ ಪ್ರವಚನ ಸರಿಯಾಗಿ ನಡೆದಿಲ್ಲ. ಜೊತೆಗೆ ಅವರ ಬಳಿ ಸ್ಮಾರ್ಟ್ ಫೋನ್, ಕಂಪ್ಯೂಟರ್ ಇಲ್ಲ, ಇದ್ದರೂ ನೆಟ್ ವರ್ಕ್ ಸಿಗಲ್ಲ. ಕರೆಂಟ್ ಇರಲ್ಲ. ಮೂಲಸೌಕರ್ಯ ನೀಡದೆ ಮೌಲ್ಯಾಂಕನ ಮಾಡುವ ಶಿಕ್ಷಣ ಇಲಾಖೆ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ವಿದ್ಯಾರ್ಥಿಗಳು ವಿದ್ಯಾವಂತ ಪಾಲಕರ, ಸೋದರ, ಸೋದರಿಯರ ನೆರವು ಪಡೆದು ಉತ್ತಮವಾಗಿ ಅಸೈನ್ಮೆಂಟ್ ಮಂಡಿಸುತ್ತಾರೆ. ಬಡ ಗ್ರಾಮೀಣ, ಅನಕ್ಷರಸ್ಥ ಪಾಲಕರ ಮಕ್ಕಳು ಏನು ಮಾಡಬೇಕು. ಮುಂದಿನ ವರ್ಷವೂ ಪ್ರಥಮ ಪಿಯುಸಿ ಅಂಕವನ್ನೇ ಪರಿಗಣಿಸುವ ಸ್ಥಿತಿ ಬಂದರೆ ಆಗ ಗ್ರಾಮೀಣ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಆಗುತ್ತದೆ. ಸರ್ಕಾರ ಕ್ಷಣಕ್ಕೊಂದು ಆದೇಶ ಮಾಡದೆ ಎಲ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕದ ಆಧಾರದಲ್ಲೇ ಪಾಸ್ ಮಾಡಲು, ಗ್ರಾಮೀಣ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.