“ಬಹಳ ವರ್ಷಗಳ ನಂತರ ಮಳೆ ಬಂದರೆ ರೈತರಿಗೆ ಎಷ್ಟು ಖುಷಿಯಾಗುತ್ತೋ, ಹಾಗೆ, ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುವ ಸಮಯ ಬಂದರೆ ನಿರ್ದೇಶಕನಿಗೂ ಅಷ್ಟೇ ಖುಷಿಯಾಗುತ್ತೆ…’
– ಹೀಗೆ ಹೇಳಿ ಹಾಗೊಂದು ನಿಟ್ಟುಸಿರು ಬಿಟ್ಟರು ನಿರ್ದೇಶಕ ಸುನೀಲ್ ಹುಬ್ಬಳ್ಳಿ. ಅವರು ಹೇಳಿಕೊಂಡಿದ್ದು ನಾಲ್ಕೈದು ವರ್ಷಗಳ ಹಿಂದೆ ಶುರುವಾಗಿದ್ದ “ಪಾರು ಐ ಲವ್ ಯು’ ಚಿತ್ರದ ಬಗ್ಗೆ. ಆಗಸ್ಟ್ 18 ರಂದು ಚಿತ್ರ ತೆರೆಗೆ ಬರುತ್ತಿದೆ. ಆ ಕುರಿತು ಹೇಳಲೆಂದೇ ಕಲಾವಿದರು, ತಂತ್ರಜ್ಞರೊಂದಿಗೆ ಬಂದಿದ್ದರು ಸುನೀಲ್.
“ಸಿನಿಮಾ ಲೇಟ್ ಆಗಿದೆ. ಅದಕ್ಕೆ ಹಲವು ಕಾರಣಗಳು. ಹಿಂದಿನದೆಲ್ಲ ಹೇಳಿಕೊಂಡರೆ ಯಾವ ಪ್ರಯೋಜನವಿಲ್ಲ. ಕೆಲವರನ್ನು ಹೊರತುಪಡಿಸಿದರೆ, ಇಲ್ಲಿ ಎಲ್ಲರಿಗೂ ಮೊದಲ ಪ್ರಯತ್ನ. ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದ ನಾನು ನಾಗಾಭರಣ, ಶೇಷಾದ್ರಿ ಹಾಗೂ ರವಿಚಂದ್ರನ್ ಜತೆ ಕೆಲಸ ಕಲಿತಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಒಂದು ಪ್ರೀತಿ ಕುರಿತಾದ ಕಥೆ ಇಲ್ಲಿದೆ. ಎಲ್ಲಾ ಕಾಲಕ್ಕೂ ಪ್ರೀತಿ ಒಂದೇ, ಆದರೆ, ಅದನ್ನು ವ್ಯಕ್ತಪಡಿಸುವ ವಿಧಾನಗಳು ಬೇರೆ. ಅದನ್ನೇ ಇಲ್ಲಿ ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಒಬ್ಬ ಡ್ರೈವರ್ ಮತ್ತು ಟೀಚರ್ ನಡುವಿನ ಲವ್‌ಸ್ಟೋರಿ ಇಲ್ಲಿದೆ. ಇನ್ನುಳಿದಂತೆ ಚಿತ್ರದಲ್ಲಿ ಎಂಟು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿವೆ’ ಅಂದರು ಸುನೀಲ್.
ರಂಜನ್ ಈ ಚಿತ್ರದ ನಾಯಕ ಕಮ್ ನಿರ್ಮಾಪಕ. ಅವರಿಗೆ ಚಿತ್ರ ತಡವಾಗಿದ್ದಕ್ಕೆ ಬೇಜಾರಿದೆಯಂತೆ. ಆದರೂ, ಈಗ ಜನರು ಸಿನಿಮಾವನ್ನು ಒಪ್ಪುತ್ತಾರೆ ಎಂಬ ವಿಶ್ವಾಸ ಅವರದು. ಆಗಸ್ಟ್ 11 ರಂದು ಬಿಡುಗಡೆ ಮಾಡುವ ಯೋಚನೆ ಇತ್ತಾದರೂ, ಅಂದು ಬೇರೆ ಭಾಷೆಯ ಸಿನಿಮಾಗಳೂ ಸೇರಿದಂತೆ ಸಾಕಷ್ಟು ಚಿತ್ರಗಳು ಬರುವುದರಿಂದ ಆಗಸ್ಟ್ 18 ರಂದು ಬಿಡುಗಡೆ ಮಾಡುತ್ತಿದ್ದೇನೆ. ಸುಮಾರು 40 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಯೋಚನೆ ಇದೆ. ನನ್ನ ಬ್ಯಾನರ್ ಮೂಲಕವೇ ಚಿತ್ರ ಬಿಡುಗಡೆಯಾಗಲಿದೆ. “ಚಿತ್ರ ಮಾಡುವಾಗ, ಸಾಕಷ್ಟು ಕಷ್ಟವಾಗಿದೆ, ನಷ್ಟವೂ ಆಗಿದೆ.
ಅದನ್ನೆಲ್ಲಾ ಈಗ ಹೇಳಿಕೊಂಡರೆ ಏನೂ ಆಗೋದಿಲ್ಲ. ನಾನು ಬಸವಣ್ಣನ ಭಕ್ತ. ಹಾಗಾಗಿ, ಅವರ ಹೆಸರಿನ ಬ್ಯಾನರ್‌ನಲ್ಲಿ ಚಿತ್ರ ಮಾಡುವ ಆಸೆ ಇತ್ತು. ಅದೀಗ ಈಡೇರಿದೆ. ಆರು ತಿಂಗಳಲ್ಲೇ ಚಿತ್ರ ಮುಗಿದಿತ್ತು. ಆದರೆ, ನಾನಾ ಸಮಸ್ಯೆಗಳು ಎದುರಾದ್ದರಿಂದ ಈಗ ರಿಲೀಸ್ ಆಗುತ್ತಿದೆ. ಚಿಕ್ಕಮಗಳೂರು, ಕೆಜಿಎಫ್, ಮಡಿಕೇರಿ ಸುತ್ತಮುತ್ತ ಚಿತ್ರೀಕರಣವಾಗಿದೆ.
ಒಂದು ಕಮರ್ಷಿಯಲ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇದೆ’ ಅಂದರು ರಂಜನ್. ನಾಯಕಿ ನೀತುಗೆ “ಪೂಜಾರಿ’ ಬಳಿಕ ಒಂದು ರೊಮ್ಯಾಂಟಿಕ್ ಸಿನಿಮಾ ಮಾಡಿರುವ ಖುಷಿ ಇದೆಯಂತೆ. ನಾನು ಬಜಾರಿ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಂಡಿದ್ದುಂಟು. ಈ ಚಿತ್ರದಲ್ಲಿ ಒಬ್ಬ ಟೀಚರ್ ಆಗಿದ್ದೇನೆ. ಕ್ಯಾಬ್ ಡ್ರೈವರ್ ಜತೆಗೆ ಲವ್ ಶುರುವಾಗಿ, ಆಮೇಲೆ ಏನಾಗುತ್ತೆ ಎಂಬುದು ಕಥೆ. ಒಳ್ಳೇ ತಂಡದ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಅಂದರು ನೀತು. ಕ್ಯಾಮೆರಾಮೆನ್ ನಾಗೇಶ್ ಆಚಾರ್ಯ, ಹಿರಿಯ ಕಲಾವಿದ ಉಮೇಶ್, ಮೈಕೆಲ್ ಮಧು, ಸಂಗೀತ ನಿರ್ದೇಶಕ ಎ.ಟಿ.ರವೀಶ್, ಯಶಸ್ವಿನಿ, ಶರತ್, ವೇಣು ಇತರರು ಇದ್ದರು.