Advertisement

ಬಸವ ತತ್ವದಿಂದ ಮಾತ್ರ ಸಮಾನತೆ ಸಾಧ್ಯ

01:15 PM Aug 18, 2017 | |

ಕಂಪ್ಲಿ: ಬಸವ ತತ್ವಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಬಸವ ತತ್ವದಿಂದ ಮಾತ್ರ ಸಮಾನತೆ, ಜಾತ್ಯತೀತ ಮನೋಭಾವನೆ ರೂಪಿಸಿಕೊಳ್ಳಲು ಸಾಧ್ಯ. ಬಸವ ತತ್ವನ್ನು ಯಾರೇ ಪ್ರತಿನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತಂದುಕೊಂಡರೆ ಬಸವ ಅನುಯಾಯಿಗಳು ಆಗಬಹುದು ಎಂದು ಗಂಗಾವತಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಕೆ.ಪಂಪಣ್ಣ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಕಂಪ್ಲಿ ಹೋಬಳಿ ಘಟಕದ ವತಿಯಿಂದ ಮಡಿವಾಳರ ಓಣಿಯ ಈರಣ್ಣ ದೇವಸ್ಥಾನ ಬಳಿ ಆಯೋಜಿಸಿದ್ದ 85ನೇ ಮಹಾಮನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವ ತತ್ವ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ಶ್ರೇಷ್ಠತೆಯ ಅಗತ್ಯತೆಯಿಲ್ಲ. ಆದರೆ, ಬಸವ ತತ್ವದ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸಗಳ ಅಗತ್ಯತೆಯಿದೆ. ಬಸವ ತತ್ವಗಳ ಅಳವಡಿಕೆಯಿಂದ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಬಸವ ತತ್ವಗಳನ್ನು ಪ್ರಚಾರದ ಸರಕಾಗದೆ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಬೇಕೆಂದು ಕಿವಿಮಾತು ಹೇಳಿದರು.

ಗಂಗಾವತಿಯ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಮಾಟೂರು ಮ.ಮಲ್ಲಪ್ಪ ಮಾತನಾಡಿ, ಕುವೆಂಪು ದೃಷ್ಟಿಯಲ್ಲಿ ಜಗಜ್ಯೋತಿ ಬಸವಣ್ಣ ಅಸಾಮಾನ್ಯ ವ್ಯಕ್ತಿಯಾಗಿ ತೋರಿದ್ದಾನೆ. ಆತನ ತತ್ವ ಆದರ್ಶಗಳನ್ನು ಕುವೆಂಪು ಜಗದ ಬೆಳಕೆಂದು ಕೊಂಡಾಡಿದ್ದಾರೆ. ಜಗತ್ತಿಗೆ ಗುರು ಬಸವಣ್ಣ ಎಂದು ಕುವೆಂಪು ಸಾರಿರುವುದರಲ್ಲಿ ಔಚಿತ್ಯವಿದೆ. ಅಕ್ಕ ಮಹಾದೇವಿಯು ಸಹ ಬಸವಣ್ಣನನ್ನು 52ಗುಣಗಳಿಂದ ಶ್ಲಾಘಿಸಿ ಬಸವಣ್ಣನ ವ್ಯಕ್ತಿತ್ವ ಕೊಂಡಾಡಿದ್ದಾಳೆ. ವಿಶ್ವಗುರುವಾಗುವ ಎಲ್ಲಾ ಅರ್ಹತೆ ಹೊಂದಿದ ಬಸವಣ್ಣನ ತತ್ವಾದರ್ಶಗಳನ್ನು ಮಾತನಾಡುವ ಬದಲಿಗೆ ಆಚರಣೆಗೆ ತರಬೇಕು ಎಂದರು.

ಶರಣ ಸಾಹಿತ್ಯ ಪರಿಷತ್‌ ಕಂಪ್ಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಪ್ರಕಾಶ್‌ ಮಾತನಾಡಿ, ಶಿವಶರಣರ ವಿಚಾರಧಾರೆಗಳನ್ನು ಅರ್ಥೈಸಿಕೊಂಡು ಪರಿಪಾಲಿಸಬೇಕಾಗಿದೆ. ಪ್ರಸ್ತುತ ದಿನಗಳಲ್ಲಿನ ಭ್ರಷ್ಟಾಚಾರ, ಭಯೋತ್ಪಾದನೆ, ಅಸ್ಪೃಶ್ಯತೆ, ಜಾತೀಯತೆ, ಅಹಿಂಸೆ, ಮೇಲು ಕೀಳಿನಂಥ ಅಸಮಾನತೆಗಳನ್ನು ಬಸವ ತತ್ವಗಳಿಂದ ಒಡೆದೊಡಿಸಬಹುದು ಎಂದು ಅಭಿಪ್ರಾಯಪಟ್ಟರು. 

ಮಡಿವಾಳ ಸಮಾಜದ ಮುಖಂಡ ಎಂ.ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಅಗಳಿ ಪಂಪಾಪತಿ, ಮಿಟ್ಟಿ ಶಂಕರ್‌, ಎಂ.ಹುಲುಗಪ್ಪ, ಎಲ್‌ಐಸಿ ಈರಣ್ಣ, ರಂಗಪ್ಪ, ಎಂ.ಯಲ್ಲಪ್ಪ, ಕೃಷ್ಣ, ಕೆ.ರಾಜಪ್ಪ, ಕೆ.ಯಲ್ಲಪ್ಪ, ಗಣೇಶ್‌, ಶಿವರುದ್ರಪ್ಪ, ವೆಂಕಟೇಶ್‌, ವಿರೂಪಾಕ್ಷ ಇತರರು ಉಪಸ್ಥಿತರಿದ್ದರು. 
ಎಂ.ಮಡಿವಾಳರ ಹುಲುಗಪ್ಪ ಪ್ರಾರ್ಥಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಸ್ವಾಗತಿಸಿ, ವಂದಿಸಿದರು. ಎಂ. ಸೌಮ್ಯ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next