ಗೊರೇಬಾಳ: ವಿಶ್ವ ಸಿಡಿದೊಡೆಯದಂತೆ ಕಾಪಾಡ ಬಲ್ಲುದೆ ಧರ್ಮ. ಮಠಾಧಿಪತಿ ಈ ಧರ್ಮದ ಪ್ರವಾದಿಯಾಗಿ ನಾಡಿನ ಮೂಲೆ-ಮೂಲೆಗೆ ಮಾನವೀಯತೆ ಸಿಂಚನ ಮಾಡಿ ಸಮಾನತೆಯ ಹಣತೆ ಹಚ್ಚಿ ಬೆಳಕು ನೀಡಬೇಕು ಎಂದು ಉಜ್ಜಯನಿ ಸಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಸಿಂಧನೂರು ತಾಲೂಕಿನ ತುರುವೀಹಾಳ ಪಟ್ಟಣದಲ್ಲಿ ನಡೆದ ಅಮರಗುಂಡ ದೇವರ ಗುರು ಪಟ್ಟಾಧಿಕಾರ ನಿಮಿತ್ತ ತುರುವೀಹಾಳ ಸಾರ್ವಜನಿಕರು ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಭಾರತ ಭವ್ಯ ಪರಂಪರೆಯ ನಾಡು. ಸಂತ, ಮಹಾತ್ಮರ ಬೀಡು. ಜಗತ್ತಿನ ಸರ್ವಶ್ರೇಷ್ಠ ಪುಣ್ಯಭೂಮಿ ಕರ್ನಾಟಕದಲ್ಲಿ ಜನಿಸಿರುವುದೇ ಪುಣ್ಯ. ಪಟ್ಟಾಧಿಕಾರದ ಕಡೆ ಸಾಗಿದ ಅಮರಗುಂಡ ದೇವರಿಂದ ಸಮಾಜ ತುಂಬಾ ನಿರೀಕ್ಷೆ ಮಾಡಿದೆ.
ತನು, ಮನ ಇಂದಿನಿಂದ ಸಮಾಜಕ್ಕೆ ಅರ್ಪಣೆ ಮಾಡಿ ಮುನ್ನಡೆಯಬೇಕಿದೆ ಎಂದರು. ಶಾಸಕ ಪ್ರತಾಪಗೌಡ ಮಾತನಾಡಿ, ಉಜ್ಜಯನಿ ಸಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ಪಾದ ಸ್ಪರ್ಷದಿಂದ ತುರುವೀಹಾಳ ಪಟ್ಟಣ ಪುನೀತವಾಗಿದೆ. ಇಂತಹ ಪುಣ್ಯ ಕಾರ್ಯಗಳಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಉಜ್ಜಯನಿ ಸಧರ್ಮ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಜರುಗಿತು. ಪಟ್ಟಣದ ನೂರಾರು ಸುಮಂಗಲಿಯರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ 14 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಮರಿಸಿದ್ದಲಿಂಗ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಮಸ್ಕಿ ಗಚ್ಚಿನ ಮಠದ ವರ ರುದ್ರಮುನಿ ಸ್ವಾಮಿ, ಶಿವಲಿಂಗ ಶಿವಾಚಾರ್ಯರು, ಚೆನ್ನಬಸವ ಶಿವಾಚಾರ್ಯರು, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಬಿಜೆಪಿ ಮುಖಂಡ ಆರ್. ಬಸನಗೌಡ ತುರುವೀಹಾಳ, ಶಿವಪ್ಪ ಮಸ್ಕಿ, ಮಹಾದೇವಪ್ಪಗೌಡ ಪಾಟೀಲ, ಎಲ್ಲೂಜಿರಾವ್ ಕೊರೆಕಾರ್, ಬಸವರಾಜಸ್ವಾಮಿ ಹಸಮಕಲ್, ಚಿದನಾಂದಯ್ಯ ಗುರುವಿನ್, ಮಲ್ಲನಗೌಡ ದೇವರಮನಿ, ಶಿವರಾಜ ಪಾಟೀಲ ಗುಂಜಳ್ಳಿ, ಕರಕಪ್ಪ ಸಾಹುಕಾರ, ಮರಿಯಪ್ಪ ನಾಯಕ, ಪಾರೂಖ ಸಾಬ ಖಾಜಿ, ಚಂದ್ರು ಪವಾಡ ಶೆಟ್ಟಿ, ಹನುಮೇಶ ಬಾಗೋಡಿ ಇದ್ದರು.