Advertisement

ಸಮ ಸಮಾಜ ಕಟ್ಟಿ ಬೆಳೆಸಿದ ಜಯದೇವಶ್ರೀ: ಸ್ವಾಮೀಜಿ

07:38 AM Jan 12, 2019 | Team Udayavani |

ದಾವಣಗೆರೆ: ಜಾತಿ ಎಂಬ ಕತ್ತಲನ್ನು ದೂರವಾಗಿಸಿ, ಸಮ ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿ ಶ್ರೀ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ದೊಡ್ಡಪೇಟೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಶ್ರೀ ಜಯದೇವ ಜಗದ್ಗುರುಗಳವರ 62ನೇ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಿದ ಕೀರ್ತಿ ಶ್ರೀ ಜಯದೇವ ಜಗದ್ಗುರುಗಳವರದು. ಅವರು ಎಲ್ಲಾ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದಾರೆ. ತಮ್ಮ ಮುರುಘಾಮಠವನ್ನು ಸರ್ವ ಜನಾಂಗದ ಮಠವನ್ನಾಗಿ ಮಾಡಿದ್ದಾರೆ. ಆ ಮೂಲಕ ಸರ್ವರನ್ನು ಸಮನಾಗಿ ಕಾಣುವುದರೊಟ್ಟಿಗೆ ಸಮಾಜದಲ್ಲಿ ಬೇರೂರಿದ್ದ ಜಾತಿ ಎಂಬ ಕತ್ತಲನ್ನು ದೂರವಾಗಿಸಿದ್ದಾರೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆಯ ತತ್ವಗಳನ್ನು ಚಾಚೂ ತಪ್ಪದೇ ಪಾಲಿಸಿ, ಜನರ ಬದುಕಿಗೆ ಬೆಳಕಾಗಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆಎಸ್‌ಎಸ್‌ ಫೌಂಡೇಶನ್‌ ಅಧ್ಯಕ್ಷ ಎಚ್.ಕೆ. ಬಸವರಾಜ್‌ ಮಾತನಾಡಿ, ಇಡೀ ಸಮಾಜದ ವ್ಯವಸ್ಥೆಯನ್ನು ವೈಚಾರಿಕ ನೆಲೆಗಟ್ಟಿನ ಹಾದಿಯಲ್ಲಿ ಕೊಂಡೊಯ್ಯುವ ಕೆಲಸವನ್ನು ಜಯದೇವ ಶ್ರೀ ಮಾಡಿದ್ದಾರೆ. ಬಸವಣ್ಣನವರ ಕ್ರಾಂತಿಕಾರಕ ನಿಲುವುಗಳನ್ನು ಸಮ ಸಮಾಜದ ಪರಿಕಲ್ಪನೆಯ ಮಾರ್ಗದಲ್ಲಿ ಜನತೆಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.

ಚನ್ನಗಿರಿಯ ಪ್ರವಚನಕಾರ ಮಹಾಂತೇಶ್‌ ಶಾಸ್ತ್ರೀ ಪ್ರವಚನ ನೀಡುತ್ತ ಮಾತನಾಡಿ, ಜಯದೇವ ಜಗದ್ಗುರುಗಳು ಸ್ವ-ಕಲ್ಯಾಣಕ್ಕೆ ಆದ್ಯತೆ ನೀಡದೇ, ಸಮಾಜದ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಅದೇ ರೀತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ದೇಶದುದ್ದಕ್ಕೂ ಬಸವತತ್ವ ಪ್ರಸಾರ ಮಾಡಿ ಪ್ರತಿ ಮನೆ ಮನೆಗಳಲ್ಲೂ ಬಸವಜ್ಯೋತಿ ಬೆಳಗಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಒಳ್ಳೆಯದನ್ನು ಕೇಳುವ ಹವ್ಯಾಸ ಎಲ್ಲಿಯವರೆಗೆ ಮನುಷ್ಯನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೂ ಪರಿಪೂರ್ಣ ಆಗಲ್ಲ. ಹಾಗಾಗಿ ಮೊದಲು ಪರಿಪೂರ್ಣ ಆಗಬೇಕು. ದೇಹದ ಅಂಗಾಂಗಗಳನ್ನು ಸದಾ ಕ್ರಿಯಾಶೀಲ, ಚಲನಶೀಲವಾಗಿಸಿಕೊಂಡು ಸತ್ಕಾರ್ಯ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

Advertisement

ಎನ್‌.ಆರ್‌. ಪುರಂ ಬಸವಕೇಂದ್ರದ ಶ್ರೀ ಬಸವಯೋಗಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮುರುಘಾಮಠದ ಚೆಲುವಯ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಟಿ.ಎಂ. ವೀರೇಂದ್ರ ಸ್ವಾಗತಿಸಿದರು. ಬಸವ ಕಲಾಲೋಕ ಬಳಗದವರು ವಚನ ಗಾಯನ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next