Advertisement

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

05:14 PM Nov 26, 2024 | Team Udayavani |

ಉದಯವಾಣಿ ಸಮಾಚಾರ
ರಾಯಚೂರು: ಈ ಬಾರಿ ರಾಯಚೂರು ಸೇರಿದಂತೆ ಬಯಲು ಸೀಮೆ, ನೀರಾವರಿ ಪ್ರದೇಶದಲ್ಲೂ ಬಿಳಿ ಬಂಗಾರ ಖ್ಯಾತಿಯ ಹತ್ತಿ
ಬೆಳೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಒಂದೆಡೆ ಮಾರುಕಟ್ಟೆಗೆ ಮಿತಿ ಮೀರಿ ಹತ್ತಿ ಆವಕವಾಗುತ್ತಿದ್ದರೆ, ಮತ್ತೊಂದೆಡೆ ಬೆಳೆದು ನಿಂತ ಹತ್ತಿ ಬಿಡಿಸಲು ಕೆ.ಜಿ.ಗೆ 13 ರೂ. ಕೊಡುತ್ತೇವೆ ಎಂದರೂ ಕೂಲಿಕಾರರು ಸಿಗದಿರುವುದರಿಂದ ರೈತರನ್ನು ಕಂಗೆಡುವಂತೆ ಮಾಡಿದೆ.

Advertisement

ಕೂಲಿಕಾರರಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ದಿನಗೂಲಿ ಬದಲಿಗೆ ಕೆ.ಜಿ. ಲೆಕ್ಕದಲ್ಲಾದರೆ ಮಾತ್ರ ಹತ್ತಿ ಬಿಡಿಸುತ್ತೇವೆ ಎನ್ನುತ್ತದ್ದಾರೆ. ಈಗ ಪ್ರತಿ ಕೆ.ಜಿ.ಗೆ 13 ರೂ. ದರ ನಿಗದಿಯಾಗಿದ್ದು ಒಂದು ದಿನಕ್ಕೆ ಒಬ್ಬೊಬ್ಬರು ಒಂದು ಕ್ವಿಂಟಾಲ್‌ಗಿಂತ ಹೆಚ್ಚು ಹತ್ತಿ ಬಿಡಿಸುತ್ತಾರೆ. ಅಂದರೆ ಅಂದಾಜು ದಿನಕ್ಕೆ 1200ರಿಂದ 1400 ರೂ. ಕೂಲಿ ಪಡೆಯುತ್ತಿರುವುದು ಗಮನಾರ್ಹ. ಹತ್ತಿ ಬೆಳೆ ಏಕಕಾಲಕ್ಕೆ ಬೆಳೆದು ನಿಂತಿದ್ದು ಬೇಗ ಬಿಡಿಸಿ ಮಾರುಕಟ್ಟೆಗೆ ಸಾಗಿಸಬೇಕು ಎಂಬ ಧಾವಂತದಿಂದ ಕೆಲ ರೈತರು  ಕೂಲಿ ದರ ಹೆಚ್ಚಿಸುತ್ತಿದ್ದಾರೆ. ಇದರಿಂದ ಸಣ್ಣ, ಮಧ್ಯಮ ವರ್ಗದ ರೈತರು ಪರದಾಡುವಂತಾಗಿದೆ.

250 ರೂ. ದಿನಗೂಲಿ ಕೊಡುತ್ತೇವೆ ಎಂದರೂ ಬರಲು ಸಿದ್ಧರಿಲ್ಲ. ದೂರದ ಆಂಧ್ರ, ತೆಲಂಗಾಣದ ಹಳ್ಳಿಗಳಿಂದ ಆಟೋಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆ ತರುತ್ತಿದ್ದಾರೆ. ಕರೆ ತರುವ ಆಟೋಗಳ ಬಾಡಿಗೆ ಕೂಡ ರೈತರೇ ಕೊಡಬೇಕು. ಇನ್ನೂ ಕೆಲವೆಡೆ ಕೂಲಿ ಕಾರ್ಮಿಕರ ತಂಡಗಳು ಬಂದು ಇಲ್ಲಿಯೇ ಬಿಡಾರ ಹಾಕಿಕೊಂಡು ಬಿಟ್ಟಿವೆ.

ಮಾರುಕಟ್ಟೆಗೆ ನಿತ್ಯ 25 ಸಾವಿರ ಕ್ವಿಂಟಾಲ್‌ ಹತ್ತಿ
ಮಾರುಕಟ್ಟೆಗೆ ಹತ್ತಿ ಲಗ್ಗೆ ಇಟ್ಟಿದ್ದು, ಈವರೆಗೆ 6.47 ಲಕ್ಷ ಕ್ವಿಂಟಲ್‌ ಹತ್ತಿ ಆವಕವಾಗಿದೆ. ಜಿಲ್ಲೆ ಮಾತ್ರವಲ್ಲದೇ ಆಂಧ್ರ, ತೆಲಂಗಾಣ ರಾಜ್ಯಗಳ ಗಡಿ ಜಿಲ್ಲೆಗಳಿಂದಲೂ ಹತ್ತಿ ಬರುತ್ತಿದೆ. ನಿತ್ಯ 20ರಿಂದ 25 ಸಾವಿರ ಕ್ವಿಂಟಲ್‌ ಹತ್ತಿ ಬರುತ್ತಿದೆ. ಇನ್ನೂ ನಾಲ್ಕು ಲಕ್ಷ
ಕ್ವಿಂಟಲ್‌ಗಿಂತ ಹೆಚ್ಚು ಹತ್ತಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು. ಜಿಲ್ಲೆಯಲ್ಲಿ ಈ ಬಾರಿ ಸಿಸಿಐನಿಂದ 9 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 7521 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಖರೀದಿ ಯಾಗುತ್ತಿದೆ. ತೇವಾಂಶ 8ರಿಂದ 12ರಷ್ಟಿದ್ದರೆ ಉತ್ತಮ ದರ
ಸಿಗುತ್ತಿದೆ. ಒಂದು ಪ್ರಮಾಣ ತೇವಾಂಶ ಕಡಿಮೆಯಾದರೆ ಕ್ವಿಂಟಲ್‌ 70 ರೂ. ಕಡಿತ ಗೊಳಿಸಲಾಗುತ್ತಿದೆ. ಇದರಿಂದ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿದ್ದು, ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಿ ಎನ್ನುವುದು ರೈತರ ಒತ್ತಾಯವಾಗಿದೆ.

Advertisement

ಈ ಬಾರಿ ಹತ್ತಿ ಇಳುವರಿ ಚೆನ್ನಾಗಿ ಬಂದಿದ್ದು, ಆವಕ ಮಿತಿ ಮೀರಿ ಬರುತ್ತಿದ್ದು, ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿಗೆ ಬೇಡಿಕೆ ಕುಗ್ಗಿದ್ದರಿಂದ ಬೆಲೆ ಕ್ವಿಂಟಾಲ್‌ಗೆ 8 ಸಾವಿರ ರೂ. ಗಡಿ ದಾಟಿಲ್ಲ. ಆದರೂ, ಖರೀದಿ ಕೇಂದ್ರದಲ್ಲಿ 7,521 ರೂ. ಗೆ ಖರೀದಿಸುತ್ತಿರುವುದು ರೈತರಿಗೆ ಖುಷಿ ತಂದಿದೆ.
●ಆದೆಪ್ಪಗೌಡ, ಕಾರ್ಯದರ್ಶಿ, ಎಪಿಎಂಸಿ, ರಾಯಚೂರು

■ ಸಿದ್ಧಯ್ಯ ಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next