Advertisement

ಹೆಚ್ಚುತ್ತಿವೆ ಸಾಂಕ್ರಾಮಿಕ ರೋಗ; ಜಾಗ್ರತೆ ಇರಲಿ

10:15 AM Jul 18, 2022 | Team Udayavani |

ಪುತ್ತೂರು: ದಿನೇ ದಿನೆ ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಜತೆಗೆ ಸಾಂಕ್ರಾಮಿಕ ರೋಗ ಬಾಧಿತರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಒಟ್ಟಾರೆ ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ 164 ಡೆಂಗ್ಯೂ ಜ್ವರ ಪ್ರಕರಣ ಪತ್ತೆಯಾಗಿದೆ.

Advertisement

ಬೆಳ್ತಂಗಡಿಯಲ್ಲಿ 60, ಮಂಗಳೂರು ನಗರದಲ್ಲಿ 40, ಪುತ್ತೂರಿನಲ್ಲಿ 6, ಸುಳ್ಯದಲ್ಲಿ 11 ಮತ್ತು ಬಂಟ್ವಾಳದಲ್ಲಿ 27 ಪ್ರಕರಣ ಗುರುತಿಸಲಾಗಿದೆ. 2019ರಲ್ಲಿ ಜಿಲ್ಲೆಯಲ್ಲಿ 1,539 ಡೆಂಗ್ಯೂ ಪ್ರಕರಣ ದಾಖಲಾಗಿತ್ತು. 2020ರಲ್ಲಿ 239, ಮತ್ತು 2021ರಲ್ಲಿ 290 ಪ್ರಕರಣ ದಾಖಲಾಗಿತ್ತು. ಈ ವರ್ಷ 6 ತಿಂಗಳಲ್ಲೇ 164 ವರದಿಯಾಗಿದೆ. ಇನ್ನೂ 3 ತಿಂಗಳು ಮಳೆಗಾಲವಿದ್ದು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಾದ ಅಗತ್ಯ ಇದೆ.

ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಬಿಸಿಲು ಮಳೆಯ ಕಣ್ಣು ಮುಚ್ಚಾಲೆಯಾಟ ಶೀತ, ಜ್ವರ ಸಹಿತ ಸಾಂಕ್ರಾಮಿಕ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕುಟುಂಬದ ಓರ್ವ ಸದಸ್ಯನಿಗೆ ಜ್ವರ ಬಂದರೆ ಮನೆಯವರಿಗೆ ಹಬ್ಬುತ್ತಿದೆ. ವೈರಲ್‌ ಜ್ವರ 4 ದಿನಗಳಲ್ಲಿ ಗುಣವಾಗುವುದು ರೂಢಿಯಾದರೆ ಈ ವರ್ಷ 8ರಿಂದ 10 ದಿನಗಳ ಕಾಲ ಜ್ವರ ಇರುವುದು ಕಂಡು ಬರುತ್ತಿದೆ. ಹಿಂದೆ ವೈರಲ್‌ ಜ್ವರಕ್ಕೆ ಒಂದು ಬಾರಿ ಔಷಧ ತಂದರೆ ಕಡಿಮೆಯಾಗುತಿತ್ತು. ಈ ಬಾರಿ ಎರಡು, ಮೂರು ಬಾರಿ ಔಷಧ ತರಬೇಕಾದ ಸ್ಥಿತಿ ಇದೆ. ತಾಲೂಕು ಸರಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ನರ್ಸಿಂಗ್‌ ಹೋಂಗಳು ಮತ್ತು ಕ್ಲಿನಿಕ್‌ಗಳಲ್ಲಿ ಜ್ವರದ ರೋಗಿಗಳ ಪ್ರಮಾಣ ಅತ್ಯಧಿಕವಾಗಿದೆ. ಇದು ಸಾಮಾನ್ಯ ವೈರಲ್‌ ಜ್ವರವೇ ಆಗಿದ್ದು, ಲಕ್ಷಣ ಕಂಡು ಬಂದ ತತ್‌ಕ್ಷಣ ವೈದ್ಯರ ಸಲಹೆ ಪಡೆಯಬೇಕು. ಬಿಸಿ ನೀರು, ಬಿಸಿ ಆಹಾರವನ್ನೇ ಸೇವಿಸಿ ವೈದ್ಯರ ಸಲಹೆಯಂತೆ ಔಷಧ ಪಡೆಯಬೇಕು ಎನ್ನುತ್ತಾರೆ ವೈದ್ಯರು.

ಮಲೇರಿಯಾ ಇಳಿಕೆ

ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ಜ್ವರ ಬಾಧಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. 2019ರಲ್ಲಿ 2,797 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 1,397 ಮಲೇರಿಯಾ ದಾಖಲಾಗಿತ್ತು. 2021ರಲ್ಲಿ 689ಕ್ಕೆ ಇಳಿದಿದ್ದು, ಈ ವರ್ಷ ಜನವರಿಯಿಂದ 96 ಪ್ರಕರಣ ದಾಖ ಲಾಗಿದೆ. ಮಲೇರಿಯಾ ಅತ್ಯಧಿಕವಿದ್ದ ಮಂಗಳೂರು ನಗರದಲ್ಲೇ ಈಗ ಇಳಿಮುಖವಾಗಿದೆ. ವಿಶೇಷ ಮಲೇರಿಯಾ ಸ್ವಯಂ ಸೇವಕರ ಜಾಗತಿಯು ಮಲೇರಿಯಾ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದೆ.

Advertisement

ರೋಗ ಲಕ್ಷಣ ಪತ್ತೆಗಿಲ್ಲ ಲ್ಯಾಬ್‌

ಡೆಂಗ್ಯೂ ಜ್ವರದ ಆರಂಭಿಕ ರಕ್ತ ಪರೀಕ್ಷೆ ಯಾದ ಕಾರ್ಡ್‌ ಟೆಸ್ಟ್‌ ವ್ಯವಸ್ಥೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿರುವುದರಿಂದ ಜ್ವರ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬೇಕಾಗಿದೆ. ಈ ಪರೀಕ್ಷೆಯ ವೆಚ್ಚ ಬಡವರಿಗೆ ಹೊರೆಯೂ ಆಗಿದೆ. ರೋಗದ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾದರೆ ಎಲಿಸಾ ಟೆಸ್ಟ್‌ ಮಾಡಲು ವೈದ್ಯರು ಸೂಚನೆ ನೀಡುತ್ತಾರೆ. ಹೀಗಾಗಿ ಜ್ವರಪೀಡಿತರಿಂದ ಸಂಗ್ರಹಿಸುವ ರಕ್ತವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು. ಡೆಂಗ್ಯೂ ಖಚಿತ ಪಡಿಸಲು ಮಾಡಲಾಗುವ ಮೂರು ಪರೀಕ್ಷೆಗೆ ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲ. ಹೀಗಾಗಿ ಫಲಿತಾಂಶ ಕೈ ಸೇರಲು ವಿಳಂಬವಾಗಿ ತತ್‌ಕ್ಷಣ ಔಷಧ ನೀಡಲು ಸಾಧ್ಯವಾಗುತ್ತಿಲ್ಲ.

ಆತಂಕ ಬೇಡ: ಈ ಬಾರಿ ಶಾಲಾ ಮಕ್ಕಳಲ್ಲಿ ವೈರಲ್‌ ಜ್ವರದ ಪ್ರಮಾಣ ಹೆಚ್ಚು ಕಂಡು ಬಂದಿದೆ. ಇದು ಸೂಕ್ತ ಚಿಕಿತ್ಸೆಯಿಂದ ನಿವಾರಣೆಯಾಗುತ್ತದೆ. ಆತಂಕಪಡುವ ಅಗತ್ಯ ಇಲ್ಲ. ಪುತ್ತೂರಿನಲ್ಲಿ 6 ಖಚಿತ ಡೆಂಗ್ಯೂ ಪ್ರಕರಣವಿದ್ದು, 77 ಶಂಕಿತ ಪ್ರಕರಣಗಳಿವೆ. –ಡಾ| ದೀಪಕ್‌ ರೈ ಆರೋಗ್ಯಾಧಿಕಾರಿ, ಪುತ್ತೂರು ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next