Advertisement

ಪರಿಸರ ಸಂರಕ್ಷಣೆಗೆ ಶಾಲಾ ಹಂತದಲ್ಲೇ ಜಾಗೃತಿ ಅಗತ್ಯ

09:06 PM Dec 14, 2019 | Lakshmi GovindaRaj |

ಹಾಸನ: ಪರಿಸರ ಮಾಲಿನ್ಯದಿಂದ ಆಗುತ್ತಿರುವ ತೊಂದರೆಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆ ಮುಖ್ಯಸ್ಥ, ಪರಿಸರವಾದಿ ಹೆಮ್ಮಿಗೆ ಮೋಹನ್‌ ಹೇಳಿದರು.

Advertisement

ಆಲೂರು ತಾಲೂಕು ಕಲ್ಲಾರೆ ಸರ್ಕಾರಿ ಪ್ರೌಢಶಾಲೆ ಹಾಗೂ ಚಿತ್ಕಲಾ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ ಕಲ್ಲಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಸರ ಸಂರಕ್ಷಣೆಯ ಬಗ್ಗೆ ಅರಿ ಮೂಡಿಸಬೇಕಾಗಿದ್ದು, ಪರಿಸರ ಜಾಗೃತಿ ಕಾರ್ಯಕ್ರಮಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಲಿ ಎಂದು ಅಶಿಸಿದರು.

ಹಣ ಕೊಟ್ಟು ಆಮ್ಲಜನಕ ಖರೀದಿ ಅನಿವಾರ್ಯ: ಅಧ್ಯಕ್ಷತೆ ವಹಿಸಿದ್ದ ಬಿ.ಕೆ.ಲಿಂಗರಾಜ್‌ ಮಾತನಾಡಿ, ಪರಿಸರ ಹಾನಿ ನಿರಂತರವಾಗಿ ಸಾಗಿ ಬಂದಿದೆ. ಸುಮಾರು 20 ವರ್ಷಗಳ ಹಿಂದೆ ಮುಂದೊಂದು ದಿನ ಆಮ್ಲಜನಕವನ್ನು ಕೂಡ ಹಣಕೊಟ್ಟು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆಯ ಮಾತುಗಳನ್ನು ನಾವು ಕೇಳುತ್ತಿದ್ದೆವು. ಈಗ ಅಂತಹ ಸನ್ನಿವೇಶ ಎದುರಾಗಿದೆ ಎಂದರು.

ವಾಯುಮಾಲಿನ್ಯ ಅತ್ಯಂತ ಹೆಚ್ಚಾಗಿರುವ ದೆಹಲಿಯ ನಗರಪ್ರದೇಶಗಳಲ್ಲಿ ಆಕ್ಸಿಜನ್‌ ಬಾರ್‌ ಗಳನ್ನು ತೆರೆದು ಕೆಲ ನಿಮಿಷಗಳ ಆಮ್ಲಜನಕ ಸೇವನೆಗೆ ಇಂತಿಷ್ಟು ಹಣವನ್ನು ಪಡೆಯುತ್ತಿದ್ದಾರೆ. ಈ ದಿಸೆಯಲ್ಲಿ ಪ್ರಕೃತಿಯ ರಮಣೀಯ ಸ್ಥಳದಲ್ಲಿರುವ ನಾವೇ ಅದೃಷ್ಟವಂತರು ಹಾಗೂ ಪರಿಸರವನ್ನು ಸಂರಕ್ಷಿಸುವ, ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿಯನ್ನು ಮರೆತರೆ ಪ್ರಕೃತಿಯನ್ನು ನಿರ್ಲಕ್ಷಿಸಿದರೆ ನಮ್ಮನ್ನು ನಾವೇ ಶಿಕ್ಷಿಸಿಕೊಂಡಂತೆ ಎಂದರು.

ಗಿಡ ನೆಡಲು ಪ್ರೋತ್ಸಾಹಿಸಿ: ಆಲೂರು ವಲಯ ಸಂರಕ್ಷಣಾಧಿಕಾರಿ ರಾಜಪ್ಪ ಮಾತನಾಡಿ, ಶಾಲಾ ಆವರಣದಲ್ಲಿ ವಿದ್ಯಾರ್ಥಿ ಹಂತದಲ್ಲಿಯೇ ನಾವು ಸಸಿಗಳನ್ನು ನೆಡುವ ಮೂಲಕ ಶಾಲ್ಲಾ ಮಕ್ಕಳಲ್ಲಿ ಗಿಡಗನ್ನು ನೆಟ್ಟು ಬೆಳೆಸುವ ಹವ್ಯಾಸವನ್ನು ರೂಢಿಸಬೇಕು. ಇದರಿಂದ ಪರಿಸರವನ್ನು ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಶಾಲೆಯಿಂದ ಸಾಮಾಜಿಕ ಅರಣ್ಯವನ್ನು ನಿರ್ಮಿಸುವಲ್ಲಿ ಇಲಾಖೆಯಿಂದ ಸಂಪೂರ್ಣವಾಗಿ ಸಹಕಾರವನ್ನು ನೀಡಿ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Advertisement

ಪರಿಸರ ಜಾಗೃತಿ: ತಾಲೂಕು ಪಂಚಾಯತಿ ಸದಸ್ಯೆ ಪ್ರಮೀಳಾ ಅವರು ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದ ಮಹತ್ವ ಹಾಗೂ ಸರ್ಕಾರಿ ಶಾಲೆಗಳ ಉಳಿವಿನ ಮಹತ್ವವನ್ನು ವಿವರಿಸಿದರು. ಕಲ್ಲಾರೆ ಶಾಲೆ ಹಾಗೂ ಸುತ್ತಮುತ್ತಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರ ಜಾಗೃತಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಬಿ.ಎಸ್‌.ದೇಸಾಯಿ ಅವರು ಸ್ಥಳದಲ್ಲಿಯೇ ಚಿತ್ರ ಬಿಡಿಸುವುದರ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಿಸರ ಸಂರಕ್ಷಣೆಗೆ ಕೊಡುಗೆಯನ್ನು ನೀಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next