Advertisement

Environment: ಅಭಿವೃದ್ಧಿ ಹೆಸರಿನಲ್ಲಿ ಆಗುಂಬೆ, ಕೊಡಚಾದ್ರಿ ಮುಟ್ಟಿದರೆ ಆಪತ್ತು

11:33 PM Aug 03, 2024 | Team Udayavani |

ಉಡುಪಿ: ಪಶ್ಚಿಮಘಟ್ಟ ಪರಿಸರ ಅತ್ಯಂತ ಸೂಕ್ಷ್ಮ ಭೂಪದರ ಹೊಂದಿದೆ. ಆಗುಂಬೆ, ಕೊಡಚಾದ್ರಿ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಕೇರಳದ ವಯನಾಡಿನಂತೆ ಇಲ್ಲಿಯೂ ಭೂಮಿ ಜರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಎಂಐಟಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ಭೂ ವಿಜ್ಞಾನಿ ಡಾ. ಉದಯಶಂಕರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿ ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ “ನೆರೆ-ಬೆಂಕಿ ಅವಘಡ-ಭೂಕುಸಿತ ಒಂದು’ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಶ್ಚಿಮ ಘಟ್ಟದ ಭೂರಚನೆ ಅತ್ಯಂತ ಸೂಕ್ಷ್ಮತೆಯಿಂದ ಕೂಡಿದ್ದು, ಕಾಮಗಾರಿ ಉದ್ದೇಶದಿಂದ ಬೃಹತ್‌ ಯಂತ್ರಗಳನ್ನು ಬಳಸಿ ಭೂಮಿಯನ್ನು ಅಗೆಯುವುದು, ಕೊರೆಯುವುದು ಮಾಡುವುದರಿಂದ ಸೂಕ್ಷ್ಮ ಪದರಗಳಿಗೆ ಹಾನಿಯಾದರೆ ಇದರ ಪರಿಣಾಮ ಸಾವಿರಾರು ಕಿ. ಮೀ. ವ್ಯಾಪ್ತಿಯವರೆಗೆ ಇರುತ್ತದೆ.

ಮಳೆ ಸುರಿಯುತ್ತಿರುವಾಗ ಭೂಪದರ ಸಡಿಲಗೊಂಡ ಪ್ರದೇಶಗಳಲ್ಲಿ ನೀರು ಒಳಗೆ ಸೇರುತ್ತದೆ. ಭೂಮಿಯ ಅಡಿಯಲ್ಲಿ ನೀರಿನ ಚಲನೆಗೆ ಒತ್ತಡ ಸೃಷ್ಟಿಯಾದಾಗ ಅಲ್ಲಲ್ಲಿ ಭೂಕುಸಿತ, ಭೂಮಿ ಜರಿಯುವುದು ಇತ್ಯಾದಿ ಸಂಭವಿಸುತ್ತದೆ. ಶಿರೂರು, ಶಿರಾಡಿ, ವಯನಾಡಿನಲ್ಲಿ ದುರ್ಘ‌ಟನೆ ಸಂಭವಿಸಿರುವುದು ಇದೇ ಪ್ರಕ್ರಿಯೆಯಿಂದಾಗಿ. ಇದೆಲ್ಲವೂ ಮಾನವ ನಿರ್ಮಿತ ವಿಕೋಪಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಆಗುಂಬೆ ಸುರಂಗ ಕಾಮಗಾರಿ ಅಪಾಯ
ಜೀವವೈವಿಧ್ಯಗಳ ಆಗರ, ಅಮೂಲ್ಯ ಸಸ್ಯ ಸಂಪತ್ತಿನ ತಾಣವಾದ ಆಗುಂಬೆಯಲ್ಲಿ ಸುರಂಗ ಕಾಮಗಾರಿ ನಡೆಸಿದಲ್ಲಿ ಅಂತರ್ಜಲ ವ್ಯವಸ್ಥೆಗೆ ಹಾನಿಯಾಗಿ ಜೀವವೈವಿಧ್ಯ ನಾಶವಾಗಲಿದೆ. ಕೊಡಚಾದ್ರಿಗೆ ರೋಪ್‌ವೇ ನಿರ್ಮಿಸುವುದು ಕೂಡ ದೊಡ್ಡ ಅನಾಹುತಕ್ಕೆ ಮುನ್ನುಡಿ ಬರೆದಂತೆ. ಮಣಿಪಾಲದ ಕುಂಡಲಕಾಡು ಸಹಿತ ಕೆಲವು ಪ್ರದೇಶಗಳು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಲಿದೆ. ಭೂಮಿಗೆ ಹಾನಿ ಮಾಡದಂತೆ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಆಶಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಗೆಯುವ ಮುನ್ನ ವೈಜ್ಞಾನಿಕ ಪರಿಶೀಲನೆ ಅಗತ್ಯ
ಅಂಕೋಲ, ಶಿರೂರು ದುರ್ಘ‌ಟನೆ ಪ್ರಸ್ತಾವಿಸಿದ ಅವರು, ಇಲ್ಲಿ ಭೂಮಿಯ ಒಳಗಿನ ಸ್ಥಿತಿ ಹೇಗಿದೆ ಎಂದು ಅಧ್ಯಯನ ನಡೆಸದೆ 90 ಡಿಗ್ರಿ ಕೋನದಲ್ಲಿ ಗುಡ್ಡವನ್ನು ಕತ್ತರಿಸಲಾಗಿದೆ. ಈ ಪ್ರದೇಶ ಸಂಪೂರ್ಣ ನದಿ, ಬೆಟ್ಟ ಗಳಿಂದ ಆವೃತವಾಗಿದ್ದು, ಸಿವಿಲ್‌ ಎಂಜಿನಿಯರ್‌ಗಳು ರಸ್ತೆಯ ವಿನ್ಯಾಸ ಮಾಡುವ ಮೊದಲು ಭೂ ವಿಜ್ಞಾನಿಗಳ ಸಲಹೆ ಪಡೆಯ ಬೇಕು. ರಾ. ಹೆ. ಪ್ರಾಧಿಕಾರವು ಜಿಯಾಲಿಕಲ್‌ ಸರ್ವೇ ಆಫ್ ಇಂಡಿಯಾ ಎಂಜಿನಿಯರಿಂಗ್‌ ವಿಭಾಗದಿಂದ ಸಲಹೆ ಪಡೆದುಕೊಳ್ಳಬಹುದು. ಆದರೆ ಈ ಬಗ್ಗೆ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ಮತ್ತು ಮಾರ್ಗದರ್ಶನದ ಕೊರತೆ ಇದೆ ಎಂದು ಡಾ| ಉದಯಶಂಕರ್‌ ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next