ನವದೆಹಲಿ: ಪರಿಸರ ಸಂರಕ್ಷಣೆ ಭಾರತಕ್ಕೆ ಬದ್ಧತೆಯೇ ಹೊರತು ಒತ್ತಾಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಎನರ್ಜಿ ಮತ್ತು ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (TERI) ಆಯೋಜಿಸುತ್ತಿರುವ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ (WSDS)ಸಂದೇಶದಲ್ಲಿ,ಅಭಿವೃದ್ಧಿ ಮತ್ತು ಪ್ರಕೃತಿ ಕೈಜೋಡಿಸಬಹುದೆಂದು ನಾನು ನಂಬುತ್ತೇನೆ ಎಂದು ಪ್ರತಿಪಾದಿಸಿದರು. ಭಾರತವು ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನ ಮೂಲಗಳಿಂದ ತನ್ನ ವಿದ್ಯುತ್ ಬೇಡಿಕೆಯ ಹೆಚ್ಚಿದ ಭಾಗವನ್ನು ಪೂರೈಸಲು ಶ್ರಮಿಸುತ್ತಿದೆ ಎಂದರು.
ಇತ್ತೀಚಿನ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ದೇಶವು ವೈವಿಧ್ಯಮಯ ನಗರ ಸವಾಲುಗಳಿಗೆ, ವಿಶೇಷವಾಗಿ ಮಾಲಿನ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಪರಿಹಾರಗಳನ್ನು ರೂಪಿಸುತ್ತಿದೆ ಎಂದರು.
“ಭೂಮಿಯನ್ನು ತಾಯಿ ಎಂದು ಸ್ತುತಿಸಲು ನಮ್ಮ ಧರ್ಮಗ್ರಂಥಗಳು ಹೇಳುತ್ತವೆ, ‘ಭೂಮಿಯು ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು’ ಎಂದರು.
ಸಾರ್ವತ್ರಿಕ ಭ್ರಾತೃತ್ವದ ಭಾವನೆಯು ರಾಷ್ಟ್ರ ಮತ್ತು ಜನರನ್ನು ನಿರಂತರವಾಗಿ ಮಾರ್ಗದರ್ಶನ ಮಾಡಿದೆ. ಇಂತಹ ವೈಭವದ ಸಂಸ್ಕೃತಿ ಮತ್ತು ನಿಸರ್ಗದೊಂದಿಗೆ ಸೌಹಾರ್ದಯುತವಾಗಿ ಬಾಳುವ ಉತ್ಕೃಷ್ಟ ಸಂಪ್ರದಾಯಗಳ ತತ್ವಜ್ಞಾನ ಹೊಂದಿರುವ ಭಾರತವು ಪರಿಸರ ಸಂರಕ್ಷಣೆಯ ಜಾಗತಿಕ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿ ಉಳಿಯುವುದು ಸಹಜ ಎಂದರು.