Advertisement
ಮುಂಗಾರು ಪೂರ್ವದಲ್ಲೇ ರಾಜಧಾನಿ ಬೆಂಗಳೂರಿಗೆ ಹಣ್ಣುಗಳ ರಾಜ ಮಾವು ಲಗ್ಗೆ ಇಟ್ಟಿದ್ದು, ನಗರದೆಲ್ಲೆಡೆ ಈಗ ಮಾವಿನ ಘಮಲು. ಮಾವಿನ ಸುಗ್ಗಿ ಶುರುವಾಗುತ್ತಿದ್ದಂತೆ ತರಹೇವಾರಿ ಮಾವು ಬಿಕರಿಗೆ ಲಭ್ಯವಿದ್ದು, ಸ್ವಾದಿಷ್ಟ ಹಣ್ಣುಗಳಿಗೆ ಜನ ಮುಗಿ ಬಿದ್ದಿದ್ದಾರೆ.
Related Articles
Advertisement
ನೆರೆರಾಜ್ಯಗಳ ಹಣ್ಣು ಲಭ್ಯ: ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ತಡವಾದ ಹಿನ್ನೆಲೆ ಹೊರ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಂಗಳೂರಿಗೆ ಪೂರೈಕೆಯಾಗಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಭಾಗಗಳಿಂದ ಹಣ್ಣುಗಳನ್ನು ಇಂದು ಇಲ್ಲಿ ಮೂರ್‍ನಾಲ್ಕು ದಿನ ಹುಲ್ಲಿನ ಪೆಟ್ಟಿಗೆಯಲ್ಲಿಟ್ಟು ಮಾಗಿಸಿ ಮಾರಾಟ ಮಾಡುತ್ತಾರೆ. ಸದ್ಯದಲ್ಲೇ ಚಿಂತಾಮಣಿ, ಶ್ರೀನಿವಾಸಪುರ ಭಾಗಗಳಿಂದ ಮಾವಿನ ರುಚಿ ಸಚಿಯಲು ಜನ ಕಾತರರಾಗಿದ್ದಾರೆ.
ಮೇ 22ರಿಂದ ಮಾವು ಮೇಳ: ಪ್ರತಿವರ್ಷದಂತೆ ಈ ಬಾರಿಯೂ ಹಾಪ್‌ಕಾಮ್ಸ್ ನಗರದಲ್ಲಿನ ತನ್ನ ಮಳಿಗೆಗಳಲ್ಲಿ ಮಾವು ಮೇಳವನ್ನು ಹಮ್ಮಿಕೊಂಡಿದೆ. ಮೇ 22ರಿಂದ ಆರಂಭವಾಗುವ ಮೇಳವು ಮಾವಿನ ಸುಗ್ಗಿ ಮುಗಿಯುವವರೆಗೆ ನಡೆಯಲಿದೆ. ಮುಖ್ಯವಾಗಿ ಹಡ್ಸನ್ ವೃತ್ತದ ಬಳಿಯ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾವಿನ ದಾಸ್ತಾನ ಮಾರಾಟಕ್ಕೆ ಲಭ್ಯವಿರಲಿದೆ.
ರಾಸಾಯನಿಕ ಬಳಸದೇ ಬೆಳೆದ ಸ್ವಾಭಾವಿಕ ಮಾವಿನ ಹಣ್ಣುಗಳನ್ನು ಮಾರುವ ಉದ್ದೇಶದಿಂದ ಈ ಮಾವು ಮೇಳ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗದ ರೈತರು ಬೆಳೆದ 10ರಿಂದ 12 ತಳಿಯ ಮಾವು ಮೇಳದಲ್ಲಿರಲಿವೆ. ಇಲ್ಲಿ ಮಾವು ಅಭಿವೃದ್ಧಿ ನಿಗಮದ ಸಹಕಾರದೊಂದಿಗೆ ರೈತರೇ ಮಾವು ಮಾರಾಟ ಮಾಡಲಿದ್ದಾರೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮೇಳದಲ್ಲಿ ಶೇ.15ಕ್ಕೂ ಹೆಚ್ಚು ರಿಯಾಯಿತಿ ಸಿಗಲಿದೆ. ಇಳುವಳಿ ಕಡಿಮೆಯಾಗಿರುವ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಬೆಲೆ ಹೆಚ್ಚಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್ ತಿಳಿಸಿದ್ದಾರೆ.
ಜಯಮಹಲ್ ರಸ್ತೆಯಲ್ಲಿ ನೂರಾರು ಮಳಿಗೆ: ನಗರದ ಜಯಮಹಲ್ ರಸ್ತೆಯ ಫನ್‌ವರ್ಲ್ಡ್ ಮುಂಭಾಗದ ಖಾಲಿ ಜಾಗದಲ್ಲಿ 100ಕ್ಕೂ ಹೆಚ್ಚು ಮಾವಿನಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ತಮಿಳುನಾಡಿನ ಸೇಲಂ, ತಿರಕೋಯಿಲೂರು, ಕಾಟಾಡಿ, ಧರ್ಮಪುರಿ ಮೂಲದ ವ್ಯಾಪಾರಿಗಳು ಕಳೆದ 15 -20 ವರ್ಷಗಳಿಂದ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಕುಟುಂಬ ಸಮೇತ ಬಂದು ಕೆಲ ತಿಂಗಳು ವ್ಯಾಪಾರ ಮಾಡುತ್ತಾರೆ. ಆಗಸ್ಟ್‌ವರೆಗೂ ವ್ಯಾಪಾರ ಮುಂದುವರಿಯಲಿದ್ದು, ಪ್ರತಿ ಮಳಿಗೆಯಲ್ಲಿ ನಿತ್ಯ ಕನಿಷ್ಠವೆಂದರೂ 200ರಿಂದ 250 ಕೆ.ಜಿ. ಮಾವು ಬಿಕರಿಯಾಗುತ್ತಿದ್ದು, 10 ರಿಂದ 12 ಸಾವಿರ ರೂ. ವ್ಯಾಪಾರವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.
ಕಳೆದ ಬಾರಿಗೆ ಹೋಲಿಸಿದರೆ ಮಾವಿನ ಬೆಲೆ ಕೆ.ಜಿ.ಗೆ 20-30 ರೂ. ಬೆಲೆ ಹೆಚ್ಚಿದೆ. ಇದಕ್ಕೆ ಮುಖ್ಯಕಾರಣ ಮಾವಿನ ಸುಗ್ಗಿ ತಿಂಗಳ ಕಾಲ ತಡವಾಗಿ ಆರಂಭವಾಗಿರುವುದು. ದಿನ ಕಳೆದಂತೆ ಬೆಲೆ ಇಳಿಕೆಯಾಗಿ ಮತ್ತೆ ಆಗಸ್ಟ್‌ನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.-ವಿಶ್ವನಾಥ್, ಹಾಪ್‌ಕಾಮ್ಸ್ ಎಂಡಿ ಹಣ್ಣು ಬರುವುದು ತಡವಾಗಿ ಬೆಲೆ ಹೆಚ್ಚಿದ್ದರೂ ಮಾರಾಟ ಉತ್ತಮವಾಗಿದೆ. ಒಮ್ಮೆಗೆ 4-5 ಕೆ.ಜಿ ಹಣ್ಣು ಖರೀದಿಸುತ್ತಿದ್ದಾರೆ. ಬಾದಾಮಿ ಹಾಗೂ ಹಿಮಾಯತ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ.
-ವಿನೇಶ್, ಜಯಮಹಲ್ ಬಳಿಯ ವ್ಯಾಪಾರಿ ಮಾವಿನ ಸುಗ್ಗಿಗೆ ಕಾಯುತ್ತಿದ್ದೆವು. ಮಳೆ ಬಿದ್ದಿರುವುದರಿಂದ ರುಚಿಕರ ಹಣ್ಣು ಸಿಗುತ್ತಿವೆ. ರಸ್ತೆಗಳ ಅಕ್ಕ ಪಕ್ಕದಲ್ಲೇ ಹಣ್ಣು ಲಭ್ಯವಿರುವುದರಿಂದ ಮಾರುಕಟ್ಟೆಗೆ ಹೋಗುವ ಅವಶ್ಯಕತೆ ಇಲ್ಲದಂತಾಗಿದೆ.
-ಬಸಪ್ಪ, ಆರ್.ಟಿ.ನಗರ ದರ ಪಟ್ಟಿ (ಕೆ.ಜಿ.ಗೆ)
ತಳಿ ದರ
ಬಾದಾಮಿ 100ರಿಂದ 110 ರೂ.
ಮಲ್ಗೊವಾ 100 ರಿಂದ 120ರೂ.
ಹಿಮಾಯತ್ 200 ರೂ.
ರಸಪೂರಿ 80 ರೂ.
ಮಲ್ಲಿಕಾ 80 ರೂ.
ಸಿಂಧೂರ 50 ರೂ.
ಕಾಲಾಪಹಡ್ 100 ರೂ.
ದಶೇರಿ 100 ರೂ.
ತೊತಾಪುರಿ 60 ರೂ.
ರತ್ನಗಿರಿ 150 ರೂ. * ಜಯಪ್ರಕಾಶ್ ಬಿರಾದಾರ್