Advertisement

ಬೆಳೆ ವೈವಿಧ್ಯದ ಖುಷಿ

06:55 AM Dec 03, 2018 | |

ಹತ್ತು ಎಕರೆ ಕೃಷಿ ಭೂಮಿ ಹೊಂದಿರುವ ಪರಶುರಾಮ ಪಾಟೀಲ, ಹತ್ತಾರು ಬಗೆಯ ಬೆಳೆಗಳನ್ನು ನಂಬಿದ್ದಾರೆ. ಪ್ರತಿಯೊಂದು ಬೆಳೆಯಿಂದಲೂ ಲಾಭ ಸಿಗುವಂತೆ, ಎಲ್ಲ ಬೆಳೆಗೂ ಭೂಮಿ ಹೊಂದಿಕೆಯಾಗುವಂತೆ ತಮ್ಮ ಕೃಷಿ ಭೂಮಿಯ ಸಮತಲೋನ ಕಾಯ್ದುಕೊಂಡಿದ್ದಾರೆ…
 
ಬೆಳೆ ವೈವಿಧ್ಯತೆಗೆ ಆದ್ಯತೆ ನೀಡಿದರೆ ಸಾಗುವಳಿಯಲ್ಲಿ ಗೆಲುವು ಖಚಿತ. ಸಾಂಪ್ರದಾಯಿಕ ಬೆಳೆಗಳೊಂದಿಗೆ ತರಕಾರಿಗಳಂತಹ ನಿತ್ಯ ಗಳಿಕೆ ತಂದುಕೊಡುವ ಬೆಳೆಗಳನ್ನೂ ಬೆಳೆದರೆ ಲಾಭವನ್ನು ದ್ವಿಗುಣ ಗೊಳಿಸಿಕೊಳ್ಳಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಪರಶುರಾಮ್‌ ಪಾಟೀಲ್‌. ಇವರು ಬೆಳಗಾವಿ ತಾಲೂಕಿನ ಚಂದೂರು ಗ್ರಾಮದವರು.

Advertisement

ಕೃಷಿ ಏನಿದೆ?
ಹತ್ತು ಎಕರೆ ಜಮೀನು ಹೊಂದಿರುವ ಪರಶುರಾಮ್‌, ಬೆಳೆಯ ಬದಲಾವಣೆ, ಹೊಸ ತಳಿಯ ಬೀಜಗಳ ಕೃಷಿ ಪ್ರಯೋಗದ ಬಗ್ಗೆ ಚಿಂತಿಸುತ್ತಿರುತ್ತಾರೆ. ಇರುವ ಹತ್ತು ಎಕರೆಯಲ್ಲಿ ಎರಡು ಎಕರೆಯಲ್ಲಿ ಸೋಯಾಬಿನ್‌, ಎರಡು ಎಕರೆಯಲ್ಲಿ ಕಬ್ಬು, ಒಂದು ಎಕರೆಯಲ್ಲಿ ಶೇಂಗಾ, ಐದು ಎಕರೆಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. ಬೆಂಡೆ, ಹೂಕೋಸು, ಬದನೆ, ಟೊಮೆಟೊ, ಹಬ್ಬು ಮೆಣಸು, ಹೀರೆ… ಹೀಗೆ ವಿವಿಧ ಬಗೆಯ ತರಕಾರಿ, ಸೊಪ್ಪುಗಳನ್ನೂ ಬೆಳೆಯುತ್ತಾರೆ. ಮುಂಗಾರು ಮುಗಿಯುತ್ತಿದ್ದಂತೆ ಶೇಂಗಾ ಬೆಳೆಯ ಕಟಾವು ಮಾಡಿ, ಹೂಕೋಸು, ಬೆಂಡೆಯಂಥ ಬೆಳೆ ಹಾಕುತ್ತಾರೆ.

ಭೂ ಫ‌ಲವತ್ತತೆಗೆ ಒತ್ತು
ಕೃಷಿ ಭೂಮಿ ಹಿರಿಯರಿಂದ ಬಂದ ಬಳುವಳಿ. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಕಳಕಳಿ ಇವರಿಗಿದೆ. ಕಡಿಮೆ ರಸಗೊಬ್ಬರ, ಯತೇಚ್ಚ ಕಾಂಪೋಸ್ಟ್‌ ಗೊಬ್ಬರ ಬಳಸುತ್ತಾರೆ. ವರ್ಷಕ್ಕೊಂದು ಬಾರಿ ಒಂದು ಸಾವಿರ ಕುರಿಗಳನ್ನು ಹೊಲದಲ್ಲಿ ತರುಬಿಸುತ್ತಾರೆ. ಸಹಜವಾಗಿಯೇ ಭೂಮಿಯ ಕಸುವು ವೃದ್ದಿಸುತ್ತದೆ. ಆಳ ಉಳುಮೆಗೆ ಒತ್ತು ಕೊಟ್ಟು ಬೀಜ ಬಿತ್ತುವುದು, ಕಳೆ ಬೆಳೆಯದಂತೆ ನಿಗಾ ವಹಿಸುವುದು, ಕೃಷಿ ತ್ಯಾಜ್ಯಗಳನ್ನು ಭೂಮಿಯಲ್ಲಿಯೇ ಸೇರಿಸಿ ಉಳುಮೆ ಮಾಡುವುದು ಹೀಗೆ ಹಲವು ಕ್ರಮಗಳಿಂದ ಫ‌ಲವತ್ತತೆ ವೃದ್ಧಿಸಿಕೊಳ್ಳುವ ಕಾಯಕದಲ್ಲಿ ತೊಡಗಿರುತ್ತಾರೆ.

ವರ್ಷಪೂರ್ತಿ ತರಕಾರಿ
ತರಕಾರಿ ಕೃಷಿಯೆಡೆಗೆ ಇವರ ಒಲವು ಜಾಸ್ತಿ. ಎಲೆಕೋಸು, ಹೂಕೋಸು, ಬದನೆ, ಟೊಮೆಟೊ, ಹಬ್ಬು ಮೆಣಸು ಹೀಗೆ ಹತ್ತು ಹಲವು ತರಕಾರಿಗಳನ್ನು ಬೆಳೆಯುತ್ತಾರೆ. ಕೇವಲ ಹತ್ತು ಗುಂಟೆ ಸ್ಥಳದಲ್ಲಿ ಹೀರೆ, ಚೌಳಿ, ಬೀನ್ಸ್‌ ಕೃಷಿಯಲ್ಲಿ ಇವರು ಅನುಸರಿಸುವ ಕ್ರಮ ತರಕಾರಿ ಕೃಷಿಕರಿಗೆ ಮಾದರಿಯಾಗುವಂತಿದೆ.

ಮುಂಗಾರು ಬಂತೆಂದರೆ ಹೀರೆ ಬೀಜಗಳನ್ನೂರಲು ಸಿದ್ಧತೆ ನಡೆಸುತ್ತಾರೆ. ಆಳವಾದ ಉಳುಮೆಗೆ ಭೂಮಿಯನ್ನೊಳಪಡಿಸಿ ಯತೇಚ್ಚ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುತ್ತಾರೆ. ಉದ್ದನೆಯ ಸಾಲು ಹೊಡೆದುಕೊಂಡು ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ, ಸಾಲಿನಿಂದ ಸಾಲಿಗೆ ಮೂರು ಅಡಿ ಬರುವಂತೆ ಬೀಜ ಊರುತ್ತಾರೆ. ಸಡಿಲವಾದ ಮಣ್ಣಿನೊಳಗೆ ಸೇರಿದ ಬೀಜದ ಮೇಲೆ ಮೆಲುವಾಗಿ ಮಣ್ಣನ್ನು ಉದುರಿಸಿದರೆ ಆರು ದಿನದಲ್ಲಿಯೇ ಮೊಳಕೆ ಕಣ್ಣಿಗೆ ಗೋಚರಿಸುತ್ತದೆ. ಹದಿನೈದು ದಿನವಾಗುವ ವೇಳೆಗೆ ಮೂರು ಎಲೆ ಹೊತ್ತ ಎಳೆ ಗಿಡವಾಗಿರುತ್ತದೆ. ಈ ಸಂದರ್ಭ ಕಳೆ ನಿಯಂತ್ರಣೆ ಮಾಡಲು ಎಡೆಕುಂಟೆ ಹೊಡೆಯುತ್ತಾರೆ. ಕುಂಟೆಗೆ ನಿಲುಕದ ಗಿಡಗಳ ಬುಡದಲ್ಲಿರುವ ಕಳೆಯನ್ನು ಕೈಯಲ್ಲಿಯೇ ಕಿತ್ತೂಗೆದು ಗಿಡವಾರು ರಸಗೊಬ್ಬರ ಉಣಿಸುತ್ತಾರೆ. ತಿಂಗಳು ಪೂರೈಸಿದ ಗಿಡಗಳಿಗೆ ರೋಗ ಕೀಟ ಬಾಧೆ ನಿಯಂತ್ರಣೆಗೆಂದು ಔಷಧಿ ಸಿಂಪಡಿಸುತ್ತಾರೆ.

Advertisement

ಬೆಳೆ ಅವಧಿಯಲ್ಲಿ ಎರಡು ಬಾರಿ ರಸಗೊಬ್ಬರ ನೀಡುತ್ತಾರೆ. ವಾರಕ್ಕೊಮ್ಮೆ ಸಿಂಪರಣೆ ಮಾಡುತ್ತಾರೆ. ಅಗತ್ಯ ಅರಿತು ನೀರು ಹಾಯಿಸುತ್ತಾರೆ. ಕಳೆಯಾಗದಂತೆ ನೋಡಿಕೊಂಡು ಬಳ್ಳಿ ಹಬ್ಬುತ್ತಿದ್ದಂತೆ, ಆಧಾರ ಕಂಬಗಳಿಗೆ ಜೋಡಿಸುತ್ತಾ ಮೇಲೇರಲು ಅನುಕೂಲ ಮಾಡಿಕೊಡುತ್ತಿದ್ದರೆ ಸಾಕು, ಬಳ್ಳಿಗಳು ಉತ್ತಮ ಫ‌ಸಲನ್ನೇ ಹೊತ್ತು ನಿಲ್ಲುತ್ತವೆ.

ಬೀಜ ಊರಿದ ಐವತ್ತನೆಯ ದಿನಕ್ಕೆ ಹೀರೆ ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ವಾರದಲ್ಲಿ ಮೂರು ಬಾರಿ ಕೊಯ್ಲು. ಪ್ರತಿ ಕೊಯ್ಲಿನಲ್ಲಿ ಎರಡೂವರೆ ಕ್ವಿಂಟಾಲ್‌ ಇಳುವರಿ ಸಿಗುತ್ತದೆ. 

ಬೆಳಗಾವಿ ಮಾರುಕಟ್ಟೆಗೆ ಬೆಳೆಯನ್ನು ಮಾರಾಟ ಮಾಡುತ್ತಿದ್ದು ‘ಕಿಲೋಗ್ರಾಂ.ಗೆ ಮೂವತ್ತು ರೂಪಾಯಿ ದರ ಸಿಕ್ಕಿದೆ’ ಎನ್ನುತ್ತಾರೆ.  ಹೀರೆ ಬೆಳೆಗೆ ಕೂಲಿ ವೆಚ್ಚ ಔಷಧಿ ಗೊಬ್ಬರ ಸೇರಿದಂತೆ ಹತ್ತು ಸಾವಿರ ರೂ. ವೆಚ್ಚ ಮಾಡಿದ್ದಾರೆ.

ಹೀರೆ ಕಟಾವು ಮುಗಿಯುತ್ತಿದ್ದಂತೆ ಚೌಳಿ ಕೃಷಿ ಆರಂಭ. ಹೀರೆ ಬಳ್ಳಿ ಹಬ್ಬಲು ಹುಗಿದಿರುವ ಕಂಬಗಳಿಗೆ ಚೌಳಿಯ ಬಳ್ಳಿಗಳನ್ನು ಹಬ್ಬಿಸತೊಡಗುತ್ತಾರೆ. ನಲವತ್ತೆಂಟು ದಿನಕ್ಕೆ ಕಾಯಿ ಕೊಯ್ಲಿಗೆ ಸಿಗುತ್ತದೆ. ವಾರಕ್ಕೆ ಮೂರು ಬಾರಿಯಂತೆ ಬೆಳೆ ಅವಧಿಯಲ್ಲಿ ಮೂವತ್ತು ಬಾರಿ ಕೊಯ್ಲು ಮಾಡುತ್ತಾರೆ. ಪ್ರತಿ ಕಟಾವಿನಲ್ಲಿ ಎರಡು ಕ್ವಿಂಟಾಲ್‌ ಇಳುವರಿ ಸಿಗುತ್ತದೆ. ಕಿಲೋ ಗ್ರಾಂ ಚೌಳಿಗೆ 30-60 ರೂಪಾಯಿ ದರ ಸಿಗುತ್ತದೆ.

ಚೌಳಿ ಇಳುವರಿ ಅಂತ್ಯಗೊಳ್ಳುತ್ತಿದ್ದಂತೆ, ಅದೇ ತಿಂಗಳ ಕೊನೆಗೆ ಹಬ್ಬು ಬೀನ್ಸ್‌ ಬೀಜಗಳನ್ನು ಬಿತ್ತುತ್ತಾರೆ. ಕಳೆ ನಿಯಂತ್ರಣೆ, ಅಗತ್ಯವಿದ್ದರೆ ಔಷಧಿ ಸಿಂಪರಣೆ, ನೀರುಣಿಸುವಿಕೆ ಕಾಳಜಿಯನ್ನು ತಪ್ಪಿಸದೇ ತೋರ್ಪಡಿಸುತ್ತಾರೆ. ಪರಿಣಾಮ ಐವತ್ತು ದಿನಕ್ಕೆ ಬೀನ್ಸ್‌ ಕಟಾವಿಗೆ ಸಿದ್ದಗೊಳ್ಳುತ್ತದೆ.ಕಿ ಲೋಗ್ರಾಂಗೆ ಇಪ್ಪತ್ತು ರೂಪಾಯಿ ದರವಿದೆ.

ಬೀನ್ಸ್‌ ಇಳುವರಿ ಜನವರಿ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಇಪ್ಪತ್ತು ಗುಂಟೆ ಜಮೀನಿನಲ್ಲಿ ಒಂದರ ನಂತರ ಒಂದರಂತೆ ಮೂರು ಬೆಳೆಗಳನ್ನು ಪಡೆದು ಕಸುವು ಕಳೆದುಕೊಂಡ ಭೂಮಿಯನ್ನು ಪುನಃ ಮುಂದಿನ ಮುಂಗಾರಿಗೆ ಅಣಿಗೊಳಿಸಲು ಸಿದ್ಧಗೊಳಿಸುತ್ತಾರೆ.  ವರ್ಷಪೂರ್ತಿ ಬಗೆ ಬಗೆಯ ತರಕಾರಿಯಿಂದ ಬೆಲೆ ಏರಿಳಿತದ ಕಿರಿಕಿರಿ ತಪ್ಪಿಸಿಕೊಂಡ ಪರಶುರಾಮ್‌ ಪಾಟೀಲರ ಕೃಷಿ ಮಾದರಿ ಎನಿಸುತ್ತದೆ.

ಮಾಹಿತಿಗೆ- 9480000241

– ಕೋಡಕಣಿ ಜೈವಂತ ಪಟಗಾರ
 

Advertisement

Udayavani is now on Telegram. Click here to join our channel and stay updated with the latest news.

Next